ಗದಗ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರಿಗೆ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂಬುದೇ ತಿಳಿದಿಲ್ಲ’ ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ನಳಿನ್ ಕುಮಾರ್ ಕಟೀಲ್ ರಾಜ್ಯದಲ್ಲಿ 30 ಜಿಲ್ಲೆಗಳಿವೆ ಅಂತ ಒಮ್ಮೆ ಹೇಳುತ್ತಾರೆ. ಮತ್ತೊಮ್ಮೆ 31, 32 ಇದ್ದಾವೆ ಎನ್ನುತ್ತಾರೆ. ಅಂತವರು ಕಾಂಗ್ರೆಸ್ ಸರ್ಕಾರ ಡಿಸೆಂಬರ್ ಒಳಗೆ ಪತನ ಆಗಲಿದೆ ಅನ್ನುತ್ತಾರೆ ಎಂದರೆ ನಂಬಬೇಕೇ’ ಎಂದು ಪ್ರಶ್ನಿಸಿದರು.
‘ವಿಧಾನಸಭಾ ಚುನಾವಣೆಗೂ ಮುನ್ನ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಛಿದ್ರ ಛಿದ್ರ ಆಗಲಿದೆ. ಕಾಂಗ್ರೆಸ್ ಪಕ್ಷ ನೋಡುವುದಕ್ಕೆ ಸಿಗುವುದಿಲ್ಲ ಎಂದಿದ್ದರು. ಫಲಿತಾಂಶ ಬಂತು. ನಾವು 135 ಸ್ಥಾನಗಳನ್ನು ಗೆದ್ದಿದ್ದೇವೆ. ಇವರ ಅಧ್ಯಕ್ಷತೆಯಲ್ಲಿ ಎಷ್ಟು ಸ್ಥಾನ ಗೆದ್ದಿದ್ದಾರೆ ಹೇಳಲಿ. ನಳಿನ್ ಅವರಿಗೆ ರಾಜ್ಯದ ವ್ಯವಸ್ಥೆಯೇ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.
‘ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಸೋಲುತ್ತೇವೆ ಅನ್ನುವ ಭಯ ಬಿಜೆಪಿಯವರಿಗೆ ಶುರುವಾಗಿದೆ. ಆ ಕಾರಣಕ್ಕೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ಏಳೆಂಟು ತಂಡದೊಂದಿಗೆ ಹೊರಟಿದ್ದಾರೆ. ಯಾವ ಭರವಸೆ ಈಡೇರಿಸಿದ್ದೇವೆ ಅಂತ ಜನರ ಬಳಿ ಹೋಗುತ್ತಾರೆ. ಜನರ ಬಗ್ಗೆ, ರೈತರ ಬಗ್ಗೆ ಕೇವಲವಾಗಿ ಮಾತನಾಡುವ ಬಿಜೆಪಿಯವರಿಗೆ ಇನ್ನೂ ಬುದ್ಧಿ ಬಂದಿಲ್ಲ’ ಎಂದು ಕಿಡಿಕಾರಿದರು.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳಾಗಿಲ್ಲ. ಗ್ಯಾರಂಟಿಗಳನ್ನು ಜಾರಿಗೊಳಿಸುವವರೆಗೂ ಬಿಜೆಪಿಯವರಿಗೆ ಕಾಯುವ ಸಮಾಧಾನ ಇಲ್ಲ. ಶಕ್ತಿ ಯೋಜನೆ ಪ್ರಾರಂಭಿಸಿದ್ದು ಮಹಿಳೆಯರು ದೇವರ ದರ್ಶನಕ್ಕಾಗಿ ರಾಜ್ಯವನ್ನೇ ಸುತ್ತುತ್ತಿದ್ದಾರೆ. ಕಿಸೆ ಗಟ್ಟಿ ಇದೆ ಎಂದು ಪುರುಷರು ಬಹಳ ನೆಮ್ಮದಿಯಿಂದ ಇದ್ದಾರೆ’ ಎಂದು ಚಟಾಕಿ ಹಾರಿಸಿದರು.
ಗದಗದಿಂದ ಸುವರ್ಣ ಕರ್ನಾಟಕ ಸಂಭ್ರಮ
‘ಬರುವ ನವೆಂಬರ್ 1ಕ್ಕೆ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ತುಂಬಲಿವೆ. ಆ ಸಂಭ್ರಮವನ್ನು ಇಡೀ ವರ್ಷ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದ್ದು, ವರ್ಷಾಚರಣೆಯ ಪ್ರಾರಂಭೋತ್ಸವ ಗದಗ ನಗರದಿಂದಲೇ ಆಗಲಿದೆ’ ಎಂದು ಸಚಿವ ತಂಗಡಗಿ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.