ADVERTISEMENT

ಮುಳಗುಂದ: ಕೈಗೂಡದ ಮನೆ ನಿರ್ಮಾಣದ ಕನಸು

ಆಶ್ರಯ ನಿವೇಶನ ಸಿಕ್ಕರೂ ಮೂಲಸೌಕರ್ಯದ ಕೊರತೆ; ಫಲಾನುಭವಿಗಳ ಪರದಾಟ

ಪ್ರಜಾವಾಣಿ ವಿಶೇಷ
Published 13 ಮೇ 2024, 4:39 IST
Last Updated 13 ಮೇ 2024, 4:39 IST
ಮುಳಗುಂದ ಕೊರಮ್ಮನ ಗುಡಿ ಹಿಂಭಾಗದಲ್ಲಿ ಆಶ್ರಯ ನಿವೇಶನ ಗುರುತಿಸಿ, ಅಭಿವೃದ್ದಿ ಮಾಡದೇ ಬಿಟ್ಟಿರುವುದು
ಮುಳಗುಂದ ಕೊರಮ್ಮನ ಗುಡಿ ಹಿಂಭಾಗದಲ್ಲಿ ಆಶ್ರಯ ನಿವೇಶನ ಗುರುತಿಸಿ, ಅಭಿವೃದ್ದಿ ಮಾಡದೇ ಬಿಟ್ಟಿರುವುದು   

ಮುಳಗುಂದ: ಮನೆ ಇಲ್ಲದ ಬಡವರಿಗೆ ವಸತಿ ಯೋಜನೆ ಅಡಿ ಸ್ಥಳೀಯ ಪಟ್ಟಣ ಪಂಚಾಯ್ತಿಯು ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡಿದೆ. ಆದರೆ, ಮನೆ ನಿರ್ಮಾಣ ಕಾರ್ಯ ಇನ್ನೂ ಕೈಗೊಡುತ್ತಿಲ್ಲ; ಅರ್ಹ ಫಲಾನುಭವಿಗಳು ಚಾತಕ ಪಕ್ಷಿಯಂತೆ ಎದುರು ನೋಡುವ ಸ್ಥಿತಿ ಉಂಟಾಗಿದೆ.

ಸ್ಥಳೀಯ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಹತ್ತಾರು ಎಕರೆ ಭೂಮಿ ಖರೀದಿಸಿದೆ. ಆದರೆ 2002ರಿಂದ ಈಚೆಗೆ ಒಂದೂ ಮನೆ ನಿರ್ಮಾಣ ಸಾಧ್ಯವಾಗಿಲ್ಲ. ನಿವೇಶನ ಹಂಚಿಕೆ ವಿಳಂಬವಾಗಿದ್ದೇ ಇದಕ್ಕೆ ಕಾರಣ. ಗದಗ ರಸ್ತೆಯ ಕೊರಮ್ಮ ಗುಡಿ ಹಿಂಭಾಗದಲ್ಲಿ ಪರಿಶಿಷ್ಟ ಜಾತಿಯ ಬಡವರಿಗೆ ಜಿ ಪ್ಲಸ್ ಮನೆಗಳ ನಿರ್ಮಾಣ ಉದ್ದೇಶದಿಂದ 2018ರಲ್ಲಿ ಮೂರು ಎಕರೆ ಭೂಮಿ ಖರೀದಿ ಮಾಡಲಾಗಿತ್ತು. ಆದರೆ ಉದ್ದೇಶಿತ ಮನೆಗಳ ನಿರ್ಮಾಣ ಸಾಧ್ಯವಾಗದ ಕಾರಣ ಈ ಯೋಜನೆ ಕೈಬಿಡಲಾಯಿತು. ಅರ್ಹ ಫಲಾನುಭವಿಗಳಿಗೆ ಈಗಷ್ಟೇ ನಿವೇಶನಗಳ ಹಕ್ಕುಪತ್ರ ನೀಡಲಾಗಿದೆ.

ಆದರೆ ಉದ್ದೇಶಿತ ಪ್ರದೇಶದಲ್ಲಿ ಇನ್ನೂ ಅಭಿವೃದ್ಧಿ ಕೆಲಸಗಳೇ ನಡೆದಿಲ್ಲ. ಕಚ್ಚಾ ರಸ್ತೆ, ಚರಂಡಿ ಹಾಗೂ ಉದ್ಯಾನದ ಜಾಗಕ್ಕೆ ಕಾಂಪೌಂಡ್‌ ನಿರ್ಮಾಣ ಬಿಟ್ಟರೆ ಬೇರೆ ಸೌಲಭ್ಯಗಳ ಕಾಮಗಾರಿ ನಡೆದಿಲ್ಲ.

ADVERTISEMENT

ಶೀತಾಲಹರಿ ಗ್ರಾಮದ ಹತ್ತಿರ 2018ರಲ್ಲಿ 2 ಎಕರೆ ಭೂಮಿ ಖರೀದಿಸಿ ನಿವೇಶನಗಳ ಗುರುತು ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲೂ ಸಹ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಜತೆಗೆ ಫಲಾನುಭವಿಗಳಿಗೆ ಸಮರ್ಪಕವಾಗಿ ನಿವೇಶನಗಳ ಹಕ್ಕುಪತ್ರಗಳನ್ನು ಹಂಚಿಕೆ ಮಾಡಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

2002ರ ಹಿಂದೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ಮತ್ತು ಮನೆಗಳ ನಿರ್ಮಾಣ ಕಾರ್ಯ ನಡೆದಿತ್ತು. ಕಳೆದ ಎರಡು ದಶಕಗಳಿಂದ ವಿವಿಧ ವಸತಿ ಯೋಜನೆಗಳ ಅಡಿ ಫಲಾನುಭವಿಗಳ ತಮ್ಮ ಸ್ವಂತ ಜಾಗದಲ್ಲಿ ಸರ್ಕಾರದ ಸಹಾಯಧನ ಪಡೆದು ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಈವರೆಗೂ ನಿವೇಶನ ಹಾಗೂ ಮನೆಗಳ ನಿರ್ಮಾಣ ಕಾರ್ಯ ನಡೆದಿಲ್ಲ. ನಿವೇಶನ ವಿತರಣೆಗೆ ಜಾಗ ಭೂಮಿ ಖರೀದಿಸಿ ಐದಾರು ವರ್ಷವಾದರೂ ಇನ್ನೂ ಸರಿಯಾಗಿ ಹಕ್ಕುಪತ್ರ ಸಿಕ್ಕಿಲ್ಲ. ಸಿಕ್ಕವರಿಗೂ ಮನೆಗಳ ನಿರ್ಮಾಣ ಸಾಧ್ಯವಾಗದ ಸ್ಥಿತಿ ಇದೆ. ಸ್ಥಳೀಯ ಆಡಳಿತ ಎಚ್ಚೆತ್ತು ಆಶ್ರಯ ನಿವೇಶನ ಕಾಲೊನಿಗಳನ್ನು ಅಭಿವೃದ್ದಿಪಡಿಸಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ತಾಂತ್ರಿಕ ತೊಂದರೆ ಉಂಟಾಗಿ ಆಶ್ರಯ ನಿವೇಶನ ಹಂಚಿಕೆ ವಿಳಂಬವಾಗಿತ್ತು. ಈಗ ಸರಿಪಡಿಸಿ 300ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಆಗಿದೆ. ಹೊಸ ಆಶ್ರಯ ಕಾಲೊನಿಗಳ ಅಭಿವೃದ್ದಿ ಹಂತ ಹಂತವಾಗಿ ನಡೆಯುತ್ತಿದ್ದು, ಮನೆಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು. ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇನ್ನೂ 10 ಎಕರೆ ಭೂಮಿಯನ್ನು ಆಶ್ರಯ ಮನೆಗಳ ನಿರ್ಮಾಣಕ್ಕೆ ಖರೀದಿ ಆಗಿದ್ದು, ಇನ್ನಷ್ಟೇ ನಿವೇಶನಗಳ ಹಂಚಿಕೆ ಆಗಬೇಕಿದೆ’ ಎಂದು ಮುಳಗುಂದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುನಾಥ ಗುಳೇದ ತಿಳಿಸಿದ್ದಾರೆ.

ಮುಳಗುಂದ ಕೊರಮ್ಮನ ಗುಡಿ ಹಿಂಭಾಗದಲ್ಲಿ ಆಶ್ರಯ ನಿವೇಶನ ಗುರುತಿಸಿ ಅಭಿವೃದ್ದಿ ಮಾಡದೇ ಬಿಟ್ಟಿರುವುದು

ಕೊರಮ್ಮನ ಗುಡಿ ಹಿಂಭಾಗದಲ್ಲಿ ಹಾಗೂ ಶೀತಾಲಹರಿ ಗ್ರಾಮದಲ್ಲಿ ಆಶ್ರಯ ನಿವೇಶನ ಹಕ್ಕುಪತ್ರ ವಿತರಣೆ ಬಹುತೇಕ ಪೂರ್ಣಗೊಂಡಿದೆ. ಫಲಾನುಭವಿಗಳು ಮನೆಗಳ ನಿರ್ಮಾಣ ಮಾಡಿಕೊಳ್ಳಬಹುದು. ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು

–ಕೆ.ಎಲ್.ಕರೇಗೌಡ್ರ ಪಟ್ಟಣ ಪಂಚಾಯ್ತಿ ಸದಸ್ಯ ಮುಳಗುಂದ

ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಐದಾರು ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಲಾಗಿದೆ. ಆದರೆ ಈವರೆಗೂ ನಿವೇಶನಗಳ ಸಂಪೂರ್ಣ ಹಂಚಿಕೆ ಆಗಿಲ್ಲ. ಮನೆ ಇಲ್ಲದ ಬಡವರು ಬಾಡಿಗೆ ಕೊಟ್ಟು ಬದುಕು ಸ್ಥಿತಿ ಇದೆ.

–ಎಂ.ಎಸ್.ಕಣವಿ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ

ಜನ ಏನಂತಾರೆ?

ಮೂಲಸೌಲಭ್ಯ ಕಲ್ಪಿಸಿ ಈಚೆಗಷ್ಟೇ ಫಲಾನುಭವಿಗಳಿಗೆ ನಿವೇಶನಗಳ ಹಂಚಿಕೆ ಆಗಿದ್ದು ಅಭಿವೃದ್ದಿ ಕೆಲಸ ನಡೆಯುತ್ತಿಲ್ಲ. ನಿವೇಶನ ಕೊಟ್ಟರೂ ಅಲ್ಲಿ ಮನೆ ನಿರ್ಮಿಸಲು ಮೂಲಸೌಲಭ್ಯ ಒದಗಿಸಿಲ್ಲ. ಬಡವರು ಮನೆಗಾಗಿ ನಿತ್ಯ ಪಂಚಾಯ್ತಿಗೆ ಅಲೆಯುವ ಸ್ಥಿತಿ ಈಗಲೂ ಮುಂದುವರಿದಿದೆ. ಇಲ್ಲಿಯವರೆಗೂ ಪ್ಲಾಟ್ ಏರಿಯಾದಲ್ಲಿ ರಸ್ತೆ ಚರಂಡಿ ನಿರ್ಮಾಣ ಆಗದ ಕಾರಣ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. –ಬಸವರಾಜ ಕರಿಗಾರ ರೈತ ಸಂಘದ ಮುಳಗುಂದ ಘಟಕದ ಅಧ್ಯಕ್ಷ. ಹಂಚಿಕೆಯಲ್ಲಿ ನ್ಯಾಯ ಒದಗಿಸಿ ಇಲ್ಲಿನ ಅಂಬೇಡ್ಕರ್‌ ನಗರದ ನಿವಾಸಿಗಳಿಗೆ 2002ರಲ್ಲಿ ಆಶ್ರಯ ಮನೆಗಳ ಹಂಚಿಕೆಯಲ್ಲಿ ನ್ಯಾಯ ಒದಗಿಸಿಲ್ಲ. ಈಗಲಾದರೂ ಅದನ್ನು ಸರಿಪಡಿಸಿ ಅರ್ಹ ಪರಿಶಿಷ್ಟರಿಗೆ ನಿವೇಶನ ವಿತರಣೆ ಮಾಡುವಂತೆ ಮನವಿ ಕೊಟ್ಟರೂ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ನಮ್ಮ ಹೋರಾಟ ಅನಿವಾರ್ಯವಾಗಲಿದೆ. –ರಮೇಶ ಮ್ಯಾಗೇರಿ ಡಿಎಸ್‍ಎಸ್ ಸಂಚಾಲಕ ಮುಳಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.