ADVERTISEMENT

ಗಜೇಂದ್ರಗಡ: ಬಡಾವಣೆಗಳು ಹೆಚ್ಚುತ್ತಿವೆ, ಮೂಲಸೌಲಭ್ಯಗಳು ಕುಸಿಯುತ್ತಿವೆ!

ಶ್ರೀಶೈಲ ಎಂ.ಕುಂಬಾರ
Published 18 ಡಿಸೆಂಬರ್ 2023, 7:30 IST
Last Updated 18 ಡಿಸೆಂಬರ್ 2023, 7:30 IST
ಗಜೇಂದ್ರಗಡದ 22ನೇ ವಾರ್ಡ್‌ನ 3ನೇ ಹಂತದ ಜವಳಿ ಪ್ಲಾಟ್‌ನಲ್ಲಿ ಸಿ.ಸಿ ರಸ್ತೆ, ಚರಂಡಿ ಇಲ್ಲದ ಕಾರಣ ಕೊಳಚೆ ನೀರು ಖಾಲಿ ನಿವೇಶನದಲ್ಲಿ ಶೇಖರಣೆಯಾಗಿ ಮುಳ್ಳು ಕಂಟಿ, ಆಪು ಬೆಳೆದಿರುವುದು
ಗಜೇಂದ್ರಗಡದ 22ನೇ ವಾರ್ಡ್‌ನ 3ನೇ ಹಂತದ ಜವಳಿ ಪ್ಲಾಟ್‌ನಲ್ಲಿ ಸಿ.ಸಿ ರಸ್ತೆ, ಚರಂಡಿ ಇಲ್ಲದ ಕಾರಣ ಕೊಳಚೆ ನೀರು ಖಾಲಿ ನಿವೇಶನದಲ್ಲಿ ಶೇಖರಣೆಯಾಗಿ ಮುಳ್ಳು ಕಂಟಿ, ಆಪು ಬೆಳೆದಿರುವುದು   

ಗಜೇಂದ್ರಗಡ: ಪಟ್ಟಣ ಬೆಳೆದಂತೆಲ್ಲ ಸುತ್ತಲಿನ ಜಮೀನುಗಳು ಬಡಾವಣೆಗಳಾಗಿ ಮಾರ್ಪಾಡಾಗಿ ಅಲ್ಲಿ ಮನೆಗಳು ತಲೆಯೆತ್ತುತ್ತಿವೆ. ಆದರೆ ಬಹುತೇಕ ಬಡವಾಣೆಗಳಲ್ಲಿ ಈಗಲೂ ಸಹ ಉತ್ತಮ ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳು ಮಾತ್ರ ಅಭಿವೃದ್ಧಿಗೊಂಡಿಲ್ಲ.

ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ಪಟ್ಟಣ ಎಂದು ಪ್ರಸಿದ್ಧಿ ಪಡೆದಿರುವ ಗಜೇಂದ್ರಗಡ ನೂತನ ತಾಲ್ಲೂಕು ಕೇಂದ್ರವಾದ ಬಳಿಕ ಇಲ್ಲಿಯ ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ಪಟ್ಟಣದ ಸಮೀಪವಿರುವ ಜಮೀನಿನ ಮಾಲೀಕರು ಮಧ್ಯವರ್ತಿಗಳ ಮೂಲಕ ತಮ್ಮ ಜಮೀನುಗಳನ್ನು ವಸತಿ ಉದ್ದೇಶಕ್ಕಾಗಿ ಪರಿವರ್ತಿಸುತ್ತಿದ್ದಾರೆ.

ನೂತನ ಬಡಾವಣೆಗಳಲ್ಲಿ ಉತ್ತಮ ರಸ್ತೆ, ಬೀದಿ ದೀಪ, ವಿದ್ಯುತ್ ಸಂಪರ್ಕ, ಚರಂಡಿ, ಉದ್ಯಾನ, ನಾಗರಿಕ ಸೌಲಭ್ಯಗಳಿಗೆ ಸ್ವಲ್ಪ ಜಾಗ ಮೀಸಲಿಡುವುದರ ಜೊತೆಗೆ ಪ್ರತಿಯೊಂದು ನಿವೇಶನಕ್ಕೊಂದು ಮರ ನೆಡಬೇಕು ಎಂಬ ನಿಯಮವಿದೆ. ಆದರೆ, ಬಹುತೇಕ ಬಡಾವಣೆಗಳಲ್ಲಿ ಈ ಎಲ್ಲ ಸೌಲಭ್ಯಗಳು ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ. ಕೆಲವು ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರು ಮನೆ ನಿರ್ಮಿಸಿಕೊಳ್ಳುವುದರ ಜೊತೆಗೆ ರಸ್ತೆ ನಿರ್ಮಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಕೆಲವು ಪ್ರತಿಷ್ಠಿತ ಬಡಾವಣೆಗಳಲ್ಲೂ ಸಮರ್ಪಕ ರಸ್ತೆ, ವಿದ್ಯುತ್ ದೀಪಗಳಿಲ್ಲದೇ ಅಲ್ಲಿನ ಜನರು ಪರದಾಡುವಂತಾಗಿದೆ. ಅಲ್ಲದೆ ವಿವಿಧ ಬಡಾವಣೆಗಳಲ್ಲಿ ಅನೇಕ ಖಾಲಿ ನಿವೇಶನಗಳಿದ್ದು, ಅವುಗಳಲ್ಲಿ ಕಸ ಶೇಖರಣೆಯಾಗಿದ್ದರೆ ಇನ್ನು ಕೆಲವು ಕಡೆ ಮುಳ್ಳುಕಂಟಿಗಳು ಬೆಳೆದು ಹಂದಿಗಳ ಆವಾಸ ಸ್ಥಾನವಾಗಿವೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ADVERTISEMENT

ಪಟ್ಟಣದಲ್ಲಿ ನಿವೇಶನ ಖರೀದಿಸಿ ಅಲ್ಲೊಂದು ಮನೆ ನಿರ್ಮಿಸಬೇಕು ಎಂಬ ಉದ್ದೇಶದಿಂದ ನೌಕರರು, ವ್ಯಾಪಾರಸ್ಥರು ಸೇರಿದಂತೆ ಹಲವರು ನಿವೇಶನ ಖರೀದಿಸಿ ಆರ್ಥಿಕ ಮುಗ್ಗಟ್ಟಿನಿಂದ ಮನೆಗಳನ್ನು ನಿರ್ಮಿಸಿಕೊಳ್ಳಲಾಗದೆ ನಿವೇಶನಗಳನ್ನು ಖಾಲಿ ಬಿಟ್ಟಿದ್ದಾರೆ. ಕೆಲವರು ವಾಸಕ್ಕೆ ಮನೆ ಇದ್ದರೂ ಸಹ ನಿವೇಶನಗಳ ಬೆಲೆ ಪ್ರತಿ ವರ್ಷ ಏರುಗತಿಯಲ್ಲಿರುವ ಕಾರಣ ಒಂದೆರಡು ನಿವೇಶನಗಳಿರಲಿ ಬೆಲೆ ಹೆಚ್ಚಾದಾಗ ಮಾರಿದರಾಯಿತು ಎಂಬ ಧೋರಣೆಯಿಂದ ನಿವೇಶನಗಳ ಮೇಲೆಯೇ ಬಂಡವಾಳ ಹೂಡಿ ಖಾಲಿ ಬಿಟ್ಟಿದ್ದಾರೆ. ಒಟ್ಟಾರೆಯಾಗಿ ನಿರ್ಲಕ್ಷ್ಯ, ನಿರ್ವಹಣೆ ಕೊರತೆಯಿಂದ ಬಹಳಷ್ಟು ಖಾಲಿ ನಿವೇಶನಗಳಲ್ಲಿ ಜಾಲಿ ಕಂಟಿಗಳು ಬೆಳೆದು, ಕೊಳಚೆ ನೀರು ನಿಂತು ಮಲಿನವಾಗುತ್ತಿವೆ.

ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, 2013 ಜನಗಣತಿಯ ಪ್ರಕಾರ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪುರಸಭೆಯ ಸದ್ಯದ ಮಾಹಿತಿಯ ಪ್ರಕಾರ ಪಟ್ಟಣದ ವ್ಯಾಪ್ತಿಯಲ್ಲಿ ಒಟ್ಟು 8,766 ಮನೆಗಳಿದ್ದು, 4,046 ಖಾಲಿ ನಿವೇಶನಗಳಿವೆ. ಖಾಲಿ ನಿವೇಶನಗಳು ಬಹುತೇಕ ಹೊಸ ಬಡಾವಣೆಗಳಲ್ಲಿವೆ. ಪುರಸಭೆಗೆ ಪಟ್ಟಣದ ಸ್ಥಿರಾಸ್ತಿಗಳಿಂದ ₹ 1.70 ಕೋಟಿ ಪೈಕಿ ₹ 1 ಕೋಟಿ ಹಾಗೂ ನೀರಿನ ತೆರಿಗೆಯಿಂದ ₹ 1.25 ಕೋಟಿ ಪೈಕಿ ₹ 30 ಲಕ್ಷ ತೆರಿಗೆ ಸಂಗ್ರಹವಾಗುತ್ತಿದೆ.

ಮೂಲಸೌಲಭ್ಯಕ್ಕೆ ಮುಖ್ಯಾಧಿಕಾರಿ, ಡಿಸಿ, ಶಾಸಕ, ಲೋಕಾಯುಕ್ತರಿಗೆ ದೂರು: ಪಟ್ಟಣದ ಗದಗ ರಸ್ತೆಯಲ್ಲಿರುವ 22ನೇ ವಾರ್ಡಿನ ಬಳಗೇರಿಯವರ ಪ್ಲಾಟ್‌ನಲ್ಲಿ ಸಿ.ಸಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿ ಸಂಗಮೇಶ ನಾಲತವಾಡ ಅವರು 2013ರಿಂದ ಪುರಸಭೆ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸುವುದರ ಜೊತೆಗೆ ಈಚೆಗೆ ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸ್ವೀಕಾರ ಸಭೆಯಲ್ಲಿ ದೂರು ಸಲ್ಲಿಸಿದ್ದಾರೆ. ಆದರೆ ಬಡಾವಣೆಯಲ್ಲಿ ಕಾಮಗಾರಿಗಳು ನಡೆದಿಲ್ಲ.

ಉದ್ಯಾನಗಳಲ್ಲಿ ಮರಗಳ ಬದಲು ಜಾಲಿ ಕಂಟಿಗಳು: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಜಮೀನನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸುವಾಗ ನಾಗರಿಕ ಸೌಲಭ್ಯ ಹಾಗೂ ಉದ್ಯಾನ ನಿರ್ಮಾಣಕ್ಕೆ ಜಾಗ ಮೀಸಲಿಡಲಾಗಿದೆ. ಉದ್ಯಾನಕ್ಕೆ ಹಲವು ಕಡೆಗಳಲ್ಲಿ ಸುತ್ತಲು ಕಾಂಪೌಂಡ್‌ ಕಟ್ಟಲಾಗಿದೆ. ಆದರೆ, ಉದ್ಯಾನದಲ್ಲಿ ಗಿಡಗಳೇ ಇಲ್ಲ. ಬದಲಿಗೆ ಮುಳ್ಳು ಕಂಟಿಗಳು ಬೆಳೆದು ನಿಂತಿವೆ.

ಕಸದ ತೊಟ್ಟಿ, ಕೊಳಚೆ ನೀರು ನಿಲ್ಲುವ ಕೇಂದ್ರಗಳಾದ ಖಾಲಿ ನಿವೇಶನಗಳು: ಪಟ್ಟಣದಲ್ಲಿರುವ ಹಲವು ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಮುಳ್ಳುಕಂಟಿಗಳು ಬೆಳೆದು ಹಂದಿಗಳ ಆವಾಸ ಸ್ಥಾನವಾಗುವುದರ ಜೊತೆಗೆ ಕಸ ವಿಲೇವಾರಿ ಮಾಡುವ ಕೇಂದ್ರಗಳಾಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಕೋಳಚೆ ನೀರು ಸಂಗ್ರಹವಾಗುವ ಗುಂಡಿಗಳಾಗಿ ಮಾರ್ಪಟ್ಟಿವೆ.

ಪಟ್ಟಣದ ಗೋಲಗೇರಿ ಪ್ಲಾಟ್‌, ಬಳೂಟಗಿಯವರ ಪ್ಲಾಟ್‌, ಜವಳಿ ಪ್ಲಾಟ್‌ 3ನೇ ಹಂತ ಸೇರಿದಂತೆ ಹಲವು ಕಡೆಗಳಲ್ಲಿ ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಖಾಲಿ ನಿವೇಶನಗಳಲ್ಲಿ ಶೇಖರಣೆಯಾಗಿ ಗಬ್ಬೆದ್ದು ನಾರುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳು ಸೊಳ್ಳೆ ಕಾಟ ಹಾಗೂ ರೋಗ-ರುಜಿನದ ಭೀತಿ ಎದುರಿಸುತ್ತಿದ್ದಾರೆ.

ಗಜೇಂದ್ರಗಡದ 18ನೇ ವಾರ್ಡಿನ ಗೋಲಗೇರಿ ಪ್ಲಾಟ್‌ನಲ್ಲಿ ಚರಂಡಿ ಇಲ್ಲದ ಕಾರಣ ಚರಂಡಿ ನೀರು ಖಾಲಿ ನಿವೇಶನದಲ್ಲಿ ಸಂಗ್ರಹವಾಗಿರುವುದು
ಗಜೇಂದ್ರಗಡದ 18ನೇ ವಾರ್ಡಿನ ಗೋಲಗೇರಿ ಪ್ಲಾಟ್‌ನಲ್ಲಿ ರಸ್ತೆ ದುಃಸ್ಥಿತಿ
ಗಜೇಂದ್ರಗಡದ ಬಡಾವಣೆಯೊಂದರಲ್ಲಿ ಉದ್ಯಾನಕ್ಕೆ ಮಿಸಲಿಟ್ಟ ಜಾಗದಲ್ಲಿ ಮುಳ್ಳು ಕಂಟಿಗಳು ಬೆಳೆದಿರುವುದು
ಗಜೇಂದ್ರಗಡದ ದೇಗಿನಾಳ್‌ ಅವರ ಪ್ಲಾಟ್‌ನಲ್ಲಿ ಜಾಲಿ ಕಂಟಿಗಳು ಬೆಳೆದಿರುವುದು
ವಿಶ್ವನಾಥ ನಿರಂಜನ ಜವಳಿ ಪ್ಲಾಟ್‌ 3ನೇ ಹಂತದ ನಿವಾಸಿ ಗಜೇಂದ್ರಗಡ
ಸಾವಿತ್ರಿ ಶಿವಪ್ಪ ಗುದಗಿ ಜವಳಿ ಪ್ಲಾಟ್‌ 3ನೇ ಹಂತದ ನಿವಾಸಿ ಗಜೇಂದ್ರಗಡ.
ಸಂಗಮೇಶ ನಾಲತವಾಡ ಬಳಗೇರಿ ಪ್ಲಾಟ್ ನಿವಾಸಿ ಗಜೇಂದ್ರಗಡ.
ಶ್ರೀನಿವಾಸ್ ಕಮ್ಮಾರ ಗೋಲಗೇರಿ ಪ್ಲಾಟ್‌ ನಿವಾಸಿ ಗಜೇಂದ್ರಗಡ.
ಮಂಜುನಾಥ ಸೂಡಿ ಮ್ಯಾಗೇರಿ ಬಡಾವಣೆ ನಿವಾಸಿ ಗಜೇಂದ್ರಗಡ.
ಬಸವರಾಜ ಬಳಗಾನೂರ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಗಜೇಂದ್ರಗಡ.
ಮುದಿಯಪ್ಪ ಮುಧೋಳ 18ನೇ ವಾರ್ಡಿನ ಸದಸ್ಯ ಗಜೇಂದ್ರಗಡ.
ಲಕ್ಷ್ಮೀ ಮುಧೋಳ 22ನೇ ವಾರ್ಡ್‌ ಸದಸ್ಯೆ ಗಜೇಂದ್ರಗಡ.

Quote - ನೀರು ಬಳಕೆ ಮಾಡಿಕೊಂಡರೂ ಬಹಳಷ್ಟು ಜನರು ನೀರಿನ ತೆರಿಗೆ ತುಂಬುತ್ತಿಲ್ಲ. ಜನರು ಆಸ್ತಿ ತೆರಿಗೆ ಜೊತೆ ನೀರಿನ ತೆರಿಗೆಯನ್ನೂ ತುಂಬಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು ಬಸವರಾಜ ಬಳಗಾನೂರ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಗಜೇಂದ್ರಗಡ

Quote - ಗೋಲಗೇರಿ ಪ್ಲಾಟ್‌ನಲ್ಲಿ ಚರಂಡಿ ನಿರ್ಮಾಣಕ್ಕೆ ಎಸ್.ಟಿ.ಪಿ ಅನುದಾನದಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದೆ. ಟೆಂಡರ್‌ ಆದ ಮೇಲೆ ಕಾಮಗಾರಿ ಆರಂಭಿಸಲಾಗುವುದು ಮುದಿಯಪ್ಪ ಮುಧೋಳ 18ನೇ ವಾರ್ಡಿನ ಸದಸ್ಯ ಗಜೇಂದ್ರಗಡ

Quote - 22ನೇ ವಾರ್ಡ್‌ನ ಜವಳಿ ಪ್ಲಾಟ್‌ 3ನೇ ಹಂತ ಹಾಗೂ ಬಳೂಟಗಿಯವರ ಪ್ಲಾಟ್‌ನಲ್ಲಿ ಚರಂಡಿ ನೀರು ಸಂಗ್ರಹವಾಗುತ್ತಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಕಮಿಟಿಯಾದ ಮೇಲೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಲಕ್ಷ್ಮೀ ಮುಧೋಳ 22ನೇ ವಾರ್ಡ್‌ ಸದಸ್ಯೆ ಗಜೇಂದ್ರಗಡ

Cut-off box - ಯಾರು ಏನಂತಾರೆ? ನಿವೇಶನ ಮಾಲೀಕರಿಗೆ ನೋಟಿಸ್‌ ನೀಡಲಿ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಮುಳ್ಳು ಕಂಟಿಗಳಿಂದ ಹಾಗೂ ಸ್ವಚ್ಛವಿಲ್ಲದ ಕಾರಣ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುವುದರ ಜೊತೆಗೆ ಇವುಗಳಿಂದ ಪಟ್ಟಣದ ಅಂದ ಕೆಡುತ್ತಿದೆ. ಕಾಯ್ದೆಯ ಪ್ರಕಾರ ಖಾಲಿ ನಿವೇಶನಗಳನ್ನು ಕಡ್ಡಾಯವಾಗಿ ಸ್ವಚ್ಛವಾಗಿರಿಸಿಕೊಳ್ಳುವುದು ಮಾಲೀಕರ ಕರ್ತವ್ಯ. ಅಂಥ ಮಾಲೀಕರಿಗೆ ನೋಟಿಸ್‌ ನೀಡಬೇಕು. ಅದಕ್ಕೆ ಮಣಿಯದಿದ್ದರೆ ಸ್ವತಃ ಪುರಸಭೆಯಿಂದಲೇ ಸ್ವಚ್ಛಗೊಳಿಸಿ ಅದರ ಖರ್ಚು ಮಾಲೀಕರಿಂದ ವಸೂಲಿ ಮಾಡಬೇಕು. -ವಿಶ್ವನಾಥ ನಿರಂಜನ ಜವಳಿ ಪ್ಲಾಟ್‌ 3ನೇ ಹಂತದ ನಿವಾಸಿ ಗಜೇಂದ್ರಗಡ ತೆರಿಗೆಗೆ ಸಂಗ್ರಹಕ್ಕೆ ಮಾತ್ರ ದುಂಬಾಲು ಜವಳಿ ಪ್ಲಾಟ್‌ 3ನೇ ಹಂತದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಿಸದ ಕಾರಣ ಎಲ್ಲೆಂದರಲ್ಲಿ ಕೊಳಚೆ ನೀರು ಹರಿದು ಹೋಗಿ ಖಾಲಿ ನಿವೇಶನಗಳಲ್ಲಿ ಶೇಖರಣೆಯಾಗುತ್ತಿದೆ. ಇದರಿಂದ ದುರ್ವಾಸನೆ ಜೊತೆಗೆ ಸೊಳ್ಳೆಗಳ ಕಾಟದಿಂದ ಮನೆಯವರು ಕಾಯಿಲೆ ಬೀಳುತ್ತಿದ್ದಾರೆ. ಬಡಾವಣೆಯಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪುರಸಭೆಯವರು ತೆರಿಗೆ ಕಟ್ಟುವಂತೆ ದುಂಬಾಲು ಬೀಳುತ್ತಾರೆ. ಆದರೆ ಮೂಲಸೌಲಭ್ಯ ಮಾತ್ರ ಕಲ್ಪಿಸುತ್ತಿಲ್ಲ. –ಸಾವಿತ್ರಿ ಶಿವಪ್ಪ ಗುದಗಿ ಜವಳಿ ಪ್ಲಾಟ್‌ 3ನೇ ಹಂತದ ನಿವಾಸಿ ಗಜೇಂದ್ರಗಡ. ಮನವಿಗಳಿಗೆ ಸ್ಪಂದನೆ ಇಲ್ಲ ಗಜೇಂದ್ರಗಡದ ಗದಗ ರಸ್ತೆಯಲ್ಲಿರುವ ಬಳಗೇರಿಯವರ ಪ್ಲಾಟ್ 2013ರಲ್ಲಿ ಎನ್‌ಎ ಆಗಿದೆ. ಆದರೆ ಇಲ್ಲೀವರೆಗೆ ಬಡಾವಣೆಯಲ್ಲಿ ರಸ್ತೆ ಚರಂಡಿ ಬೀದಿ ದೀಪ ಹಾಗೂ ಕುಡಿಯುವ ನೀರಿನ ಸೌಲಭ್ಯಗಳಿಲ್ಲ. ರಸ್ತೆ ಇಲ್ಲದಿರುವುದರಿಂದ ಪ್ರತಿದಿನ ಓಡಾಡಲು ಸಮಸ್ಯೆಯಾಗುತ್ತಿದೆ. ಸುತ್ತ ಜಾಲಿ ಕಂಟಿಗಳು ಬೆಳೆದಿರುವುದರಿಂದ ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ 2020ರಿಂದ ಮುಖ್ಯಾಧಿಕಾರಿ ಜಿಲ್ಲಾಧಿಕಾರಿ ಶಾಸಕರು ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸಭೆಯಲ್ಲಿ ಮನವಿ ಸಲ್ಲಿಸಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. –ಸಂಗಮೇಶ ನಾಲತವಾಡ ಬಳಗೇರಿ ಪ್ಲಾಟ್ ನಿವಾಸಿ ಗಜೇಂದ್ರಗಡ ಚುನಾವಣೆ ಸಂದರ್ಭದಲ್ಲಷ್ಟೇ ಮುಖದರ್ಶನ! 18ನೇ ವಾರ್ಡಿನ ಗೋಲಗೇರಿ ಪ್ಲಾಟ್‌ನಲ್ಲಿ ಸಿಸಿ ರಸ್ತೆ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಇದೇ ರಸ್ತೆ ಮಾರ್ಗವಾಗಿ ಪ್ರತಿದಿನ ನೂರಾರು ವಿದ್ಯಾರ್ಥಿಗಳ ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಂತಾಗಿರುತ್ತದೆ. ಅದರಲ್ಲಿಯೇ ಓಡಾಡುವುದು ಅನಿವಾರ್ಯವಾಗಿದೆ. ಬೀದಿ ದೀಪಗಳು ದುರಸ್ತಿಗೆ ನಾವೇ ಪುರಸಭೆಗೆ ಅಲೆದು ಹಾಕಿಸಿಕೊಳ್ಳಬೇಕು. ವಾರ್ಡ್‌ ಸದಸ್ಯರು ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬಂದವರು ಮತ್ತೆ ಇತ್ತ ಕಡೆ ಬಂದಿಲ್ಲ. –ಶ್ರೀನಿವಾಸ್ ಕಮ್ಮಾರ ಗೋಲಗೇರಿ ಪ್ಲಾಟ್‌ ನಿವಾಸಿ ಗಜೇಂದ್ರಗಡ. ಪುರಸಭೆ ಅಧಿಕಾರಿಗಳೇ ನೇರ ಹೊಣೆ ಗಜೇಂದ್ರಗಡ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ಗೀರಿಜಾ ಮ್ಯಾಗೇರಿಯವರ ಬಡಾವಣೆಯಲ್ಲಿ 40 ನಿವೇಶನಗಳ ಪೈಕಿ 5ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆ. ಆದರೆ ಬಡಾವಣೆ ಮಾಲೀಕರು ಬಡಾವಣೆಯಲ್ಲಿ ರಸ್ತೆ ಚರಂಡಿ ಸೇರಿದಂತೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಅಲ್ಲಿ ಮನೆ ಕಟ್ಟಿಕೊಂಡಿರುವ ನಾವು ಪಕ್ಕದ ಬಡಾವಣೆಯಿಂದ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದು ಪ್ರತಿ ತಿಂಗಳು ₹5 ಸಾವಿರ ವಿದ್ಯುತ್‌ ಬಿಲ್‌ ಕಟ್ಟುವಂತಾಗಿದೆ. ಬಡಾವಣೆ ಅಭಿವೃದ್ಧಿ ಹೊಂದದಿದ್ದರೂ ಸಹ ಮಾಲೀಕರಿಗೆ ಎಲ್ಲ ನಿವೇಶನಗಳ ಉತಾರ ನೀಡಿದ ಪುರಸಭೆ ಅಧಿಕಾರಿಗಳು ಈ ಸಮಸ್ಯೆಗೆ ನೇರ ಹೊಣೆಯಾಗಿದ್ದಾರೆ. –ಮಂಜುನಾಥ ಸೂಡಿ ಮ್ಯಾಗೇರಿ ಬಡಾವಣೆ ನಿವಾಸಿ ಗಜೇಂದ್ರಗಡ ನಿಯಮಬದ್ಧವಾಗಿದ್ದರಷ್ಟೇ ಉತಾರ ಗಜೇಂದ್ರಗಡದ ಬಹಳ ಹಳೆಯ ಬಡಾವಣೆಗಳಲ್ಲಿ ರಸ್ತೆ ಚರಂಡಿ ಸೇರಿದಂತೆ ಮೂಲಸೌಲಭ್ಯಗಳಿಲ್ಲ. ಈಚೆಗೆ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಪೂರ್ಣವಾದ ನಂತರ ಉತಾರ ನೀಡಲಾಗುತ್ತಿದೆ. ಅಲ್ಲದೆ ಹಂತ ಹಂತವಾಗಿ ಯೋಜನೆಗಳನ್ನು ರೂಪಿಸುವುದರ ಮೂಲಕ ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿರುವ ಖಾಲಿ ನಿವೇಶನಗಳ ನಿರ್ವಹಣೆ ಮಾಡದಂತ ನಿವೇಶನಗಳನ್ನು ಪುರಸಭೆಯಿಂದ ಸ್ವಚ್ಛಗೊಳಿಸಿ ನಿವೇಶನದ ಮೇಲೆ ಭೋಜಾ ಕೂರಿಸುವ ಕುರಿತು ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು–ಬಸವರಾಜ ಬಳಗಾನೂರ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಗಜೇಂದ್ರಗಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.