ನರಗುಂದ: ರೈತ ಬಂಡಾಯ ನಡೆದು 42 ವರ್ಷಗಳೇ ಕಳೆದಿವೆ. ಆದರೆ, ರೈತರ ಬೇಡಿಕೆಗಳು ಮಾತ್ರ ಈಡೇರಿಲ್ಲ. ಅವರ ಬಾಳು ಮಾತ್ರ ಹಸನವಾಗುತ್ತಿಲ್ಲ. ಮತ್ತೇ ಬಂಡಾಯ ನಡೆಯಬೇಕು ಎಂಬ ಕೂಗು ಪ್ರತಿವರ್ಷ ಪ್ರತಿಧ್ವನಿಸುತ್ತಲೇ ಇದೆ. ಇದರ ನಡುವೆಯೇ ಗುರುವಾರ 42 ನೇ ಹುತಾತ್ಮ ರೈತ ದಿನಾಚರಣೆ ನಡೆಯುತ್ತಿದೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರೈತ ನಾಯಕರು ಹುತಾತ್ಮ ರೈತ ದಿವಂಗತ ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಬರುತ್ತಿದ್ದಾರೆ. ಬಂಡಾಯದ ನರಗುಂದ ಮತ್ತೇ ಹಸಿರು ಟವೆಲ್ ಹೊತ್ತ ಹಿರಿ,ಕಿರಿ, ಮರಿ ನಾಯಕರ ಸಮಾಗಮಕ್ಕೆ ಸಾಕ್ಷಿಯಾಗಲಿದೆ.
ರೈತ ಸೇನಾ ಕರ್ನಾಟಕ, ರಾಜ್ಯ ರೈತ ಸಂಘ ರೈತ ಸಮಾವೇಶ ನಡೆಸಲು ಮುಂದಾದರೆ, ವಿವಿಧ ರೈತ ಸಂಘಟನೆಗಳು, ಪಕ್ಷಗಳು, ಸಂಘಗಳು ವೀರಗಲ್ಲಿಗೆ ನಮನ ಸಲ್ಲಿಸಲು ಸಿದ್ದವಾಗಿವೆ. ಕಳೆದ ವರ್ಷ ಎಲ್ಲ ರೈತ ಸಂಘಟನೆಗಳು ಒಗ್ಗಟ್ಟಿನ ಮಂತ್ರ ಜಪಿಸಿದ್ದವು. ಆದರೆ, ಅದು ಈಗ ಕಾಣದಂತಾಗಿದೆ. ಕೆಲವು ರೈತ ನಾಯಕರ ಮೇಲಿನ ಆರೋಪಗಳು ಪ್ರಾಮಾಣಿಕ ರೈತ ಸಂಘಟನೆಗಳಿಗೆ ಮುಜುಗರ ಉಂಟು ಮಾಡಿವೆ.
ಹುತಾತ್ಮ ರೈತ ದಿನಾಚರಣೆ ಹಿನ್ನೆಲೆ: ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರ ಬಾಳು ಹಸನಾಗಬೇಕೆಂದು ನೀರಾವರಿ ಸೌಲಭ್ಯ ಒದಗಿಸಲು ಮಲಪ್ರಭಾ ನದಿಗೆ ಸವದತ್ತಿ ಬಳಿಯ ನವಿಲುತೀರ್ಥದಲ್ಲಿ ಆಣೆಕಟ್ಟು ನಿರ್ಮಾಣವಾಯಿತು. ಆದರೆ ಇದಕ್ಕೆ ಪ್ರತಿಯಾಗಿ ಸರ್ಕಾರ ರೈತರ ಮೇಲೆ ಅಭಿವೃದ್ಧಿ ಕರ ಹೇರಿತು. ಕಾಲುವೆಗಳಿಗೆ ನೀರು ಹರಿಯದಿದ್ದರೂ ಕರ ತುಂಬಬೇಕಿತ್ತು. ಇದನ್ನು ಭರಿಸದೇ ಇದ್ದಾಗ ರೈತರ ಪಹಣಿ ಮೇಲೆ ಸರ್ಕಾರಿ ಎಂದು ನಮೂದಿಸಿತು. ಇದರಿಂದ ಸರ್ಕಾರಿ ಸಾಲ, ವಿವಿಧ ಸೌಲಭ್ಯಗಳಿಂದ ರೈತರು ವಂಚಿತರಾಗಬೇಕಾಯಿತು. ಇದನ್ನು ವಿರೋಧಿಸಿ ಮಲಪ್ರಭೆ ಅಚ್ಚುಕಟ್ಟು ಪ್ರದೇಶದಲ್ಲಿ 21 ಸದಸ್ಯರ ನೇತೃತ್ವದಲ್ಲಿ ನಿರಂತರ ಹೋರಾಟ ಆರಂಭವಾಯಿತು.
ಹೋರಾಟದಲ್ಲಿ ರಾಜಶೇಖರಪ್ಪ ಹೊಸಕೇರಿ, ಶಿವಪ್ಪ ಬಾಳಿಕಾಯಿ, ಬಸವರಾಜ ಪಟ್ಟೇದ, ಶಿವಪ್ಪ ನೆಗಳೂರು, ಶಿವದೇವಗೌಡ ಪಾಟೀಲ, ಬಸಪ್ಪ ಗಾಣಿಗೇರ, ವಿ.ಎನ್.ಹಳಕಟ್ಟಿ, ಚಂಬಣ್ಣ ನಂದಿ ಸೇರಿದಂತೆ ಮೊದಲಾದವರಿದ್ದರು. ಈ ರೈತರ ಹೋರಾಟಕ್ಕೆ ಸರ್ಕಾರ ಮಣಿಯಲಿಲ್ಲ. 1980 ಜುಲೈನಲ್ಲಿ ನರಗುಂದದ ತಹಶೀಲ್ದಾರ್ ಕಚೇರಿ ಎದುರು ರೈತರು ಸರಣಿ ಉಪವಾಸ ಆರಂಭಿಸಿದರು. ಬೇಡಿಕೆಗೆ ಸ್ಪಂದನೆ ಸಿಗಲಿಲ್ಲ. ಹೋರಾಟ ಹಿಂಸಾರೂಪ ತಾಳಿತು.
ಜುಲೈ 21 ರಂದು ನಡೆದ ಧರಣಿ ಸಂದರ್ಭದಲ್ಲಿ ರೈತರು ಅಧಿಕಾರಿಗಳ ಪ್ರವೇಶ ನಿರಾಕರಿಸಿ ತಹಶೀಲ್ದಾರ್ ಕಚೇರಿ ಎದುರು ಅಡ್ಡವಾಗಿ ಮಲಗಿದರು. ಅಂದಿನ ತಹಶೀಲ್ದಾರ್ ವರೂರು ಎಂಬುವವರು ರೈತರನ್ನು ತುಳಿದುಕೊಂಡೇ ಕಚೇರಿ ಒಳಕ್ಕೆ ಹೋದರು. ಇದರಿಂದ ಆಕ್ರೋಶಗೊಂಡ ರೈತರು ತಹಶೀಲ್ದಾರ್‌ನನ್ನು ಥಳಿಸಿದರು. ಆಗ ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಗುಂಡು ಹಾರಿಸಿದರು.
ಗೋಲಿಬಾರ್‌ನಲ್ಲಿ ನರಗುಂದ ತಾಲ್ಲೂಕಿನ ಚಿಕ್ಕನರಗುಂದದ ರೈತ ವೀರಪ್ಪ ಕಡ್ಲಿಕೊಪ್ಪ ಗುಂಡಿಗೆ ಬಲಿಯಾದರು. ಇದರಿಂದಾಗಿ ಅಂದಿನ ಗುಂಡುರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಲಿಯಾಯಿತು. ಸುಧಾರಣಾ ಕರ ರದ್ದಾಯಿತು. ಲೇವಿ ರದ್ದಾಗಿದ್ದು ಬಿಟ್ಟರೆ ಉಳಿದ ರೈತರ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದುಕೊಂಡಿವೆ.
40 ವರ್ಷಗಳಾದರೂ ಸ್ಮಾರಕವಿಲ್ಲ
ಬಂಡಾಯ ನಡೆದು 40 ವರ್ಷಗಳಾದರೂ ದಿ.ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲು ಖಾಸಗಿಯವರ ಜಾಗದಲ್ಲಿಯೇ ಇದೆ. ಅವರ ಹೆಸರಲ್ಲಿ ಇಲ್ಲಿಯವರೆಗೂ ಒಂದು ಸ್ಮಾರಕ ನಿರ್ಮಾಣ ಆಗಿಲ್ಲ ಎಂದು ರೈತ ಹೋರಾಟಗಾರ ವಿಜಯ ಕುಲಕರ್ಣಿ ಬೇಸರ ವ್ಯಕ್ತಪಡಿಸುತ್ತಾರೆ.
ಇದೇ ಸಂದರ್ಭದಲ್ಲಿ ರೈತರ ಪ್ರತಿದಾಳಿಗೆ ಸಿಕಂದರ್ ಪಾಟೀಲ, ನಾಗಪ್ಪ ಅಕ್ಕಿ, ಬಸಯ್ಯ ಹಿರೇಮಠ ಪ್ರಾಣ ಕಳೆದುಕೊಂಡು ಹುತಾತ್ಮರಾದರು. ಇವರ ನೆನಪಿಗೋಸ್ಕರ ನರಗುಂದ ಪೊಲೀಸ್ ಠಾಣೆ ಆವರಣದಲ್ಲಿ ಸ್ಮಾರಕ ನಿರ್ಮಾಣಗೊಂಡಿದೆ.
ರೈತ ಸಂಘಟನೆ ಕಿಚ್ಚು
ಕರ್ನಾಟಕದಲ್ಲಿ ರೈತ ಹೋರಾಟ ಹಾಗೂ ರೈತ ಸಂಘ ಉಗಮವಾಗಲು ನರಗುಂದ ಬಂಡಾಯ ಕಾರಣವಾಯಿತು. ರೈತ ಬಂಡಾಯ ಅನೇಕ ದಾಖಲೆಗಳಿಗೆ ಸಾಕ್ಷಿಯಾಯಿತು. ಅನೇಕ ರೈತ ಸಂಘಗಳು, ಸಮಿತಿಗಳು ಹುಟ್ಟಿಕೊಂಡವು. ಹೋರಾಟಗಳನ್ನು ನಡೆಸಿದವು. ಆದರೂ ಈ ಭಾಗದ ರೈತರ ಕನಸು ನನಸಾಗುತ್ತಿಲ್ಲ.
ಕಳಸಾ ಬಂಡೂರಿ, ಮಹದಾಯಿ ಹೋರಾಟ ನಡೆಯುತ್ತಲೇ ಇದೆ . ಈಚೆಗಷ್ಟೇ 8ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷ ಹಸಿರು ಶಾಲು ಹಾರಾಡುತ್ತಾ ರೈತ ಗೀತೆ ಮೊಳಗುತ್ತಿದೆ. ರಾಜಕಾರಣಿಗಳ ಮೊಸಳೆ ಕಣ್ಣೀರು ಸುರಿಯುತ್ತಿದೆ. ಮಾಲಾರ್ಪಣೆಗೆ ತಾ ಮುಂದು ನಾ ಮುಂದು ಎನ್ನುತ್ತಾ ನೂಕು ನುಗ್ಗಲು ಸಾಮಾನ್ಯವಾಗಿದೆ. ಸಮಸ್ಯೆ ಮಾತ್ರ ಹಾಗೇ ಉಳಿದಿವೆ. ಇದಕ್ಕೆ ಮತ್ತೊಮ್ಮೆ ಬಂಡಾಯ ನಡೆಯಲೇಬೇಕೆಂಬ ಧ್ವನಿ ಮೂಡುತ್ತಲೇ ಇದೆ. ಮತ್ತೆ ಮರೆಯಾಗುತ್ತಲೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.