ADVERTISEMENT

‘ನರೇಗಾ’ ಗ್ರಾಮೀಣರಿಗೆ ವರದಾನ

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅಧಿಕಾರಿ ರಿಯಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 15:56 IST
Last Updated 22 ನವೆಂಬರ್ 2023, 15:56 IST
ರೋಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಹಾತ್ಮಗಾಂಧಿ ನರೇಗಾ ಯೋಜನೆಯ 2024-25ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸುವ ಕುರಿತು ಕಾರ್ಯಾಗಾರ ನಡೆಯಿತು
ರೋಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಹಾತ್ಮಗಾಂಧಿ ನರೇಗಾ ಯೋಜನೆಯ 2024-25ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸುವ ಕುರಿತು ಕಾರ್ಯಾಗಾರ ನಡೆಯಿತು   

ರೋಣ: ‘ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ. ಬಡವರ ಏಳಿಗೆಗಾಗಿ ಹೆಚ್ಚು ಕೆಲಸ ಮಾಡುವ ಮೂಲಕ ಬಡವರ ಸೇವೆ ಮಾಡಿ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅಧಿಕಾರಿ ರಿಯಾಜ್ ಖತೀಬ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಹಾತ್ಮಗಾಂಧಿ ನರೇಗಾ ಯೋಜನೆಯ 2024-25ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸುವ ಕುರಿತು ಹಮ್ಮಿಕೊಳ್ಳಲಾದ  ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಒಂದು ವರದಾನ. ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸಕ್ಕಾಗಿ ಅಲೆದಾಡದೇ ತಮ್ಮ ಸ್ವಂತ ಗ್ರಾಮದಲ್ಲಿಯೇ ಬೇಡಿಕೆಯ ಪ್ರಕಾರ 100 ದಿನಗಳ ಖಾತ್ರಿ ಕೆಲಸವನ್ನು ಪಡೆಯಲು ಸಾಧ್ಯ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರಿಗೆ ನರೇಗಾ ಅಡಿ ದುಡಿಯಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದರು.

ADVERTISEMENT

‘ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡವುದು ರೋಣ ತಾಲ್ಲೂಕು ಪಂಚಾಯಿತಿಯ ಗುರಿ. ಗಿಡಗಳನ್ನು ನೆಟ್ಟು ಹಸಿರೀಕರಣಕ್ಕೆ ಶ್ರಮಿಸೋಣ. ಗಿಡಗಳನ್ನು ನೆಟ್ಟು ಪಾಲನೆ-ಪೋಷಣೆ ಮಾಡಿದ ಗ್ರಾಮ ಪಂಚಾಯಿತಿ ಹಾಗೂ ಸಿಬ್ಬಂದಿಯನ್ನು ಗುರುತಿಸಿ ಶಾಸಕರ ನೇತೃತ್ವದಲ್ಲಿ ಅವರಿಗೆ ಸನ್ಮಾನ ಮಾಡುವ ಯೋಚನೆಯಿದೆ’ ಎಂದರು.

ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಪಡಿಸುವಂತ ಕಾಮಗಾರಿಗಳಾದ ನಾಲಾ ಸುಧಾರಣೆ, ಕೆರೆ ಹೂಳೆತ್ತುವುದು, ಬದು ನಿರ್ಮಾಣ ಕೃಷಿ ಹೊಂಡ, ಮಳೆ ನೀರು ಕೊಯ್ಲು, ಅರಣ್ಯೀಕರಣ ಕಾಮಗಾರಿಗಳನ್ನು ಶೇ 65ರ ವರೆಗೆ ತೆಗೆದುಕೊಳ್ಳಲು ಅವಕಾಶವಿದೆ. ಉಳಿದ ಶೇ 35ರಲ್ಲಿ ಶಾಲಾ ಕಂಪೌಂಡ್, ಅಡುಗೆ ಕೋಣೆ, ಆಟದ ಮೈದಾನ, ಭೋಜನಾಲಯ, ಶೌಚಾಲಯ ಸೇರಿದಂತೆ ಶಾಲಾ ಅಭಿವೃದ್ಧಿ ಪಡಿಸುವ ಸಮಗ್ರ ಕಾಮಗಾರಿಗಳನ್ನು ಮಾಡುವಂತೆ ಸೂಚಿಸಿದರು.

ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ ಮಾತನಾಡಿ, ನರೇಗಾ ಯೋಜನೆಯಡಿ ಕ್ರೀಯಾ ಯೋಜನೆಯಡಿ ಬರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿ ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.