ADVERTISEMENT

ನರೇಗಾ ಯೋಜನೆ | ಮಹಿಳಾ ಸಬಲೀಕರಣಕ್ಕೆ ಒತ್ತು

ನರೇಗಾ ಯೋಜನೆ ಅಡಿ ಗ್ರಾಮ ಪಂಚಾಯಿತಿ ಉದ್ಯೋಗ: ಹರ್ಷ

ಬಸವರಾಜ ಹಲಕುರ್ಕಿ
Published 30 ಜೂನ್ 2024, 6:22 IST
Last Updated 30 ಜೂನ್ 2024, 6:22 IST
ನರಗುಂದ ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿ ಯಲ್ಲಿ ಪಾಲ್ಗೊಂಡ ಮಹಿಳಾ ಕೂಲಿಕಾರರು.
ನರಗುಂದ ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿ ಯಲ್ಲಿ ಪಾಲ್ಗೊಂಡ ಮಹಿಳಾ ಕೂಲಿಕಾರರು.   

ನರಗುಂದ: ಕಳೆದ ವರ್ಷದವರೆಗೆ ನರೇಗಾ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ಕಡಿಮೆ ಇರುತ್ತಿತ್ತು. ಆದರೆ ಈ ವರ್ಷ ಬರದ ಪರಿಣಾಮವೋ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ, ಸಿಬ್ಬಂದಿಯ ಜಾಗೃತಿ ಪರಿಣಾಮ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಪಾಲ್ಗೊಂಡು ಹೊಸ ದಾಖಲೆ ಬರೆದಿದೆ.

ಈ ಮೂಲಕ ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ತಾಲ್ಲೂಕು ಪಂಚಾಯಿತಿ ಮಹತ್ವದ ಹೆಜ್ಜೆಯಿಟ್ಟಿದೆ.ಸಾಮೂಹಿಕ ಕಾಮಗಾರಿಗಳಲ್ಲಿ ಮಹಿಳಾ ಕೂಲಿಕಾರರು ಪುರುಷ ಕೂಲಿಕಾರರಿಗಿಂತ ಹೆಚ್ಚು ಪ್ರಮಾಣದಲ್ಲಿ ಭಾಗವಹಿಸಿ ಶೇ.50.36ರಷ್ಟು ಸಾಧನೆ ಗೈದಿದ್ದು ವಿಶೇಷ.

2024-25 ನೇ ಸಾಲಿನಲ್ಲಿ ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 2,29,798 ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ.ಈ ಗುರಿಗೆ ಅನುಗುಣವಾಗಿ ಪ್ರಸ್ತುತ ಒಟ್ಟು 1,85,496 ಮಾನವ ದಿನಗಳ ಕೆಲಸಗಳನ್ನು ಮಾಡಲಾಗಿದೆ. ಈ ಪೈಕಿ 93,420 ಮಾನವ ದಿನಗಳಲ್ಲಿ ಮಹಿಳಾ ಕೂಲಿಕಾರರು ಕೆಲಸ ಮಾಡಿದ್ದಾರೆ. ಹೀಗಾಗಿ ತಾಲೂಕಿನ ನರೇಗಾ ಕೆಲಸದಲ್ಲಿ ಕೂಲಿಕಾರರ ಭಾಗವಹಿಸುವಿಕೆಯಲ್ಲಿ ಶೇ.50.36 ರಷ್ಟು ಮಹಿಳೆಯರಿದ್ದಾರೆ. ಈ ಮೂಲಕ ಪುರುಷ ಕೂಲಿಕಾರರಿಗಿಂತ ನರೇಗಾ ಕೆಲಸದಲ್ಲಿ ನಾವೇನು ಕಡಿಮೆಯೇನಿಲ್ಲ ಎಂಬುದಕ ಕ್ಕೆ ಮಹಿಳಾ ಸಬಲೀಕರಣಕ್ಕೆ ಕೈಗನ್ನಡಿಯಾಗಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ನರೇಗಾ ಕಾಮಗಾರಿಯಲ್ಲಿ ಪುರುಷರಿಗೆ ಸರಿಸಮಾನವಾಗಿ ₹349 ಸಂಬಳ ಕೊಡಲಾಗುತ್ತಿದೆ.

ADVERTISEMENT

ನರೇಗಾ ಕಾಮಗಾರಿ ಮಾನವ ದಿನಗಳ ಸೃಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ 2020-21 ನೇ ಸಾಲಿನಲ್ಲಿ ಶೇ. 41.48 ರಷ್ಟಿದ್ದರೆ, 2021-22 ನೇ ಸಾಲಿನಲ್ಲಿ 41.39 ರಷ್ಟಿತ್ತು. 2022-23 ನೇ ಸಾಲಿನಲ್ಲಿ 45.47 ರಷ್ಟಿದ್ದರೆ 2023-24 ರಲ್ಲಿ 48.77 ರಷ್ಟಿತ್ತು. ಪ್ರಸ್ತುತ 2024-25 ರ ಆರ್ಥಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆಯುವುದರೊಳಗೆ ತಾಲೂಕಿನ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಶೇ. ೫೦.೩೬ ರಷ್ಟಾಗಿದೆ. ಇನ್ನು. ಹೆಚ್ಚಾಗುವ ಸಾಧ್ಯತೆ ಇದೆ.

ನರಗುಂದ ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿ ಯಲ್ಲಿ ಪಾಲ್ಗೊಂಡ ಮಹಿಳಾ ಕೂಲಿಕಾರರು.
ನರಗುಂದ ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿ ಯಲ್ಲಿ ಪಾಲ್ಗೊಂಡ ಮಹಿಳಾ ಕೂಲಿಕಾರರು.

ಈ ವರ್ಷ ಶೇ.60 ರಷ್ಟು ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಗುರಿ ಹೊಂದಲಾಗಿದೆ. ಸದ್ಯ ಶೇ.50.36ರಷ್ಟು ಪ್ರಗತಿ ಸಾಧಿಸಲಾಗಿದೆ

- ಎಸ್.ಕೆ.ಇನಾಮದಾರ ಇಒ ತಾಪಂ ನರಗುಂದ

ಮಹಿಳಾ ಕೂಲಿಕಾರರಿಗೆಂದೇ ಪ್ರತ್ಯೇಕವಾಗಿ ಸಮುದಾಯ ಕಾಮಗಾರಿ ಆರಂಭಿಸಿ ಮಹಿಳಾ ಕೂಲಿಕಾರರಿಗೆ ಕೆಲಸ ನೀಡಲಾಯಿತು. ಯೋಜನೆಯಡಿ ಕಾಯಕಬಂಧುಗಳ ನೇಮಕದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ

- ಸಂತೋಷಕುಮಾರ್ ಪಾಟೀಲ್ ಸಹಾಯಕ ನಿರ್ದೇಶಕ ನರೇಗಾ

ಈ ವರ್ಷ ಬರಗಾಲದಿಂದಾಗಿ ದುಡಿಯೋಕೆ ಕೆಲಸ ಇಲ್ಲ ಎಂಬ ಚಿಂತೆ ಇತ್ತು. ಆದರೆ ನಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡಿದರು

- ಮಂಜುಳಾ ಗೊಬ್ಬರಗುಂಪಿ ಬೆನಕನಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.