ADVERTISEMENT

‌ನರೇಗಲ್:‌ ಸುಂದರ ರಥ ನಿರ್ಮಿಸುವ ಕಲಾಕಾರ ಆನಂದ ಬನ್ನೆಪ್ಪ ಬಡಿಗೇರ!

ರಥಶಿಲ್ಪ ಕಲಾಕೇಂದ್ರದಲ್ಲಿ ಆನಂದ ಬನ್ನೆಪ್ಪ ಬಡಿಗೇರರಿಂದ ಕುಸುರಿ ಕೆಲಸ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 4:09 IST
Last Updated 27 ಅಕ್ಟೋಬರ್ 2024, 4:09 IST
ನರೇಗಲ್‌ ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ಮರದ ರಥ ನಿರ್ಮಾಣ ಮಾಡುತ್ತಿರುವ ರಥಶಿಲ್ಪಿ ಆನಂದ ಬಡಿಗೇರ
ನರೇಗಲ್‌ ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ಮರದ ರಥ ನಿರ್ಮಾಣ ಮಾಡುತ್ತಿರುವ ರಥಶಿಲ್ಪಿ ಆನಂದ ಬಡಿಗೇರ    

ನರೇಗಲ್:‌ ಕಟ್ಟಿಗೆಯ ಹದ ಅರಿತು, ಸೂಕ್ಷ್ಮ ಕೆತ್ತನೆಗಳ ಮೂಲಕ ಜೀವಕಳೆ ತುಂಬುವ ನರೇಗಲ್‌ ಹೋಬಳಿಯ ಹೊಸಹಳ್ಳಿ ಗ್ರಾಮದ ರಥಶಿಲ್ಪಿ ಆನಂದ ಬನ್ನೆಪ್ಪ ಬಡಿಗೇರ, ಅನೇಕ ದೇವಸ್ಥಾನಗಳಿಗೆ ಸುಂದರ ರಥಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಇವರು ನಿರ್ಮಾಣ ಮಾಡುವ ರಥಗಳಿಗೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬೇಡಿಕೆ ಇದೆ. ಬೆಳಗಾವಿ, ಕೊಪ್ಪಳ ಜಿಲ್ಲೆಯ ಬಹುತೇಕ ದೇವಸ್ಥಾನಗಳಿಗೆ ಇಲ್ಲಿಂದ ಮರದ ರಥ ಮಾಡಿ ಕೊಡಲಾಗಿದ್ದು, ಅಲ್ಲಿನ ದೇವಸ್ಥಾನಗಳಿಗೆ ಇವರ ಕಲೆ ಚಿರಪರಿಚಿತವಾಗಿದೆ.

ಹೊಸಹಳ್ಳಿ-ರೋಣ ಮುಖ್ಯರಸ್ತೆಯ ಸಮೀಪ ಸುಳಿದರೆ ಸಾಕು ‘ಕಟ್‌ ಕಟ್‌’ ಎಂಬ ಶಬ್ದ ದಾರಿಹೋಕರ ಗಮನ ಸೆಳೆಯುತ್ತದೆ. ಶಬ್ದದ ಜಾಡು ಹಿಡಿದು ಹೋದರೆ ರಥಶಿಲ್ಪ ಕಲಾಕೇಂದ್ರದಲ್ಲಿ ಕುಸುರಿ ಕೆಲಸ ಮಾಡುತ್ತಿರುವ ಈ ಕಲೆಗಾರ ಕಾಣಿಸುತ್ತಾರೆ. ಕೋಣೆಯ ಒಳಹೊಕ್ಕರೆ ಕಲಾಕೃತಿಗಳ ದೃಶ್ಯ ವೈಭವವೇ ಕಣ್ಣಿಗೆ ಕಾಣುತ್ತದೆ.

ADVERTISEMENT

ಸಾಗವಾನಿ, ಬೀಟೆ, ಬೇವಿನ ಮರದ ಕಟ್ಟಿಗೆಯಲ್ಲಿ ಅರಳಿದ ಕಲಾಕೃತಿಗಳು ಜೀವಕಳೆ ಪಡೆದುಕೊಂಡಿವೆ.  ಮರದ ರಥ ನಿರ್ಮಾಣಕ್ಕೆ ಇವರು ಹಳಿಯಾಳ, ಮಲೆನಾಡು ಭಾಗದ ಸಾಗವಾನಿ ಕಟ್ಟಿಗೆಗಳನ್ನು ಮಾತ್ರ ಬಳಕೆ ಮಾಡುತ್ತಾರೆ.

ಹುಣಸಿಯಾಳ ಗ್ರಾಮದ ಶರಣಬಸವೇಶ್ವರ, ಇಟಗಿ ಗ್ರಾಮದ ದುರ್ಗಾದೇವಿ, ಪಟ್ಟಲಚಿಂತಿಯ ದ್ಯಾಮಮ್ಮ ದೇವಿ, ಚಿಲಝರಿ ಗ್ರಾಮದ ಕರಿಯಮ್ಮದೇವಿ ಪಾಲಕಿಗಳನ್ನು ಕೆತ್ತನೆ ಮಾಡಿ ಕೊಟ್ಟಿದ್ದಾರೆ. ಸಿಂದಗಿ ತಾಲ್ಲೂಕಿನ ಆಲಮೇಲ, ಬೊಮ್ಮನಾಳ, ಮಸಬಿನಾಳ, ಮಳಿಯಪ್ಪಜ್ಜನಮಠ ಸಿಂಹಾಸನಗಳ ನಿರ್ಮಾಣ, ದೇವಿ ವಿಗ್ರಹ ನಿರ್ಮಾಣ, ಚಿತ್ತಾಪುರ ತಾಲ್ಲೂಕಿನ ಸೂಗುರು ಮಹಾದ್ವಾರದ ಬಾಗಿಲು ನಿರ್ಮಾಣ ಮಾಡಿದ್ದಾರೆ.

2015ರಲ್ಲಿ ಗಜೇಂದ್ರಗಡದಲ್ಲಿ ಕೆಲಸ ಆರಂಭ ಮಾಡಿ ಸಿಂಹಾಸನ, ಪಲ್ಲಕ್ಕಿ ಕೆತ್ತನೆ ಮಾಡಿದರು. ಹೊಳೆಆಲೂರಿನ ಪಾಂಡುರಂಗ ಬಡಿಗೇರ, ಮಹೇಶ ಹೆಬ್ಬಳ್ಳಿ ಗುರುಗಳಲ್ಲಿ ರಥಶಿಲ್ಪ ಕಲೆಯನ್ನು 8 ವರ್ಷ ಅಭ್ಯಾಸ ಮಾಡಿದ್ದಾರೆ. ನಂತರ ಸ್ವಗ್ರಾಮದಲ್ಲಿ ರಥಶಿಲ್ಪ ಕಲಾಕೇಂದ್ರದಲ್ಲಿ ಕುಸುರಿ ಕೆಲಸ ನಡೆಸಿ ಪ್ರಸಿದ್ಧಿ ಪಡೆದಿದ್ದಾರೆ.

ರಥಶಿಲ್ಪಿ ಆನಂದ ಬಡಿಗೇರ ನಿರ್ಮಾಣ ಮಾಡಿರುವ ರಥ
ರಥಶಿಲ್ಪಿ ಆನಂದ ಬಡಿಗೇರ ನಿರ್ಮಾಣ ಮಾಡಿರುವ ಪಲ್ಲಕ್ಕಿ
ಭಾರತೀಯ ಶಿಲ್ಪಕಲೆಗಳಲ್ಲಿ ರಥ ಶಿಲ್ಪಕಲೆಗೆ ವಿಶಿಷ್ಟ ಸ್ಥಾನವಿದೆ. ಧಾರ್ಮಿಕ ಪದ್ಧತಿ ಭಕ್ತರ ಭಾವನೆಗೆ ಧಕ್ಕೆ ಆಗದಂತೆ ರಥ ನಿರ್ಮಿಸುವುದು ಸವಾಲಾಗಿದೆ
ಆನಂದ ಬಡಿಗೇರ ರಥಶಿಲ್ಪಿ ಹೊಸಹಳ್ಳಿ

ವಿವಿಧ ರಥಗಳ ನಿರ್ಮಾಣ

ಬಾಗಲಕೋಟೆ ಜಿಲ್ಲೆಯ ಮಂಗಳಗುಡ್ಡ ಮಂಗಳಾದೇವಿಯ 51 ಅಡಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕು ಹುಣಿಸಿಹಾಳ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ 35 ಅಡಿ ಗದಗ ಜಿಲ್ಲೆ ನಿಡಗುಂದಿಯ ಭೀಮಾಂಬಿಕಾ ದೇವಿಯ 41 ಅಡಿ ನೆಲ್ಲೂರು ಶಾಂತೇಶ್ವರ ಗುಡಿಯ 31 ಅಡಿ ಬೆಳಗಾವಿ ಜಿಲ್ಲೆ ಯಾದವಾಡದ ಹೊನ್ನಮ್ಮದೇವಿ ದೇವಸ್ಥಾನದ 21 ಅಡಿ ಎತ್ತರದ ಮರದ ರಥಗಳನ್ನು ಆನಂದ ಬನ್ನೆಪ್ಪ ಬಡಿಗೇರ ನಿರ್ಮಾಣ ಮಾಡಿ ಅರ್ಪಿಸಿದ್ದಾರೆ. ಕೊಪ್ಪಳ ಜಿಲ್ಲೆ ಬಳೂಟಗಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ 25 ಅಡಿ ಹೊಸೂರು ಗ್ರಾಮದ ಮಾರುತೇಶ್ವರ ದೇವಸ್ಥಾನದ 21 ಅಡಿ ಹಾಗೂ ಬೆಳಗಾವಿ ಜಿಲ್ಲೆ ಬುದ್ನಿ ಗ್ರಾಮದ ಕರಿಯಮ್ಮದೇವಿ ಗುಡಿಯ 21 ಅಡಿ ರಥ ನಿರ್ಮಾಣ ಕಾರ್ಯ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.