ADVERTISEMENT

ನರೇಗಲ್:‌ ಮಾರಾಟಗಾರರಿಗೆ ವರವಾದ ಕಾರ್ಚಿಕಾಯಿ

ಎರೆ ಭೂಮಿಯಲ್ಲಿ ನೈಸರ್ಗಿಕವಾಗಿಯೇ ಔಷಧಿ ತರಕಾರಿ

ಪ್ರಜಾವಾಣಿ ವಿಶೇಷ
Published 24 ಜೂನ್ 2024, 4:23 IST
Last Updated 24 ಜೂನ್ 2024, 4:23 IST
ಕಾರ್ಚಿಕಾಯಿ ಗಿಡದಲ್ಲಿ ಬಿಟ್ಟಿರುವ ಹೂವು, ಕಾಯಿ
ಕಾರ್ಚಿಕಾಯಿ ಗಿಡದಲ್ಲಿ ಬಿಟ್ಟಿರುವ ಹೂವು, ಕಾಯಿ   

ನರೇಗಲ್:‌ ಅನೇಕ ಕಾಯಿಲೆಗಳನ್ನು ವಾಸಿಮಾಡಬಲ್ಲ ಕಾರ್ಚಿಕಾಯಿಯು ನರೇಗಲ್‌ ಹೋಬಳಿಯ ಎರೆ ಭೂಮಿಯಲ್ಲಿ ಅಧಿಕವಾಗಿ ನೈಸರ್ಗಿಕವಾಗಿಯೇ ಬೆಳೆಯುತ್ತದೆ. ಜೂನ್‌, ಜುಲೈ, ಆಗಸ್ಟ್ ತಿಂಗಳಲ್ಲಿ ಕೃಷಿಕರ ಪಾಲಿಗೆ ಆದಾಯದ ಮೂಲವಾಗಿದೆ.

ಜಿಲ್ಲೆಗೆ ದೊಡ್ಡ ಹೋಬಳಿಯಾಗಿರುವ ನರೇಗಲ್‌ ವ್ಯಾಪ್ತಿಯ ಬೂದಿಹಾಳ, ತೋಟಗಂಟಿ, ಹಾಲಕೆರೆ, ಜಕ್ಕಲಿ, ಮಾರನಬಸರಿ, ಅಬ್ಬಿಗೇರಿ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ಹೊಸಳ್ಳಿ, ಯರೇಬೇಲೇರಿ, ಕುರುಡಗಿ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಬಯಲು ಸೀಮೆಯ ಮಳೆ ಆಶ್ರಿತ ಜಮೀನುಗಳಲ್ಲಿ ಯಾವುದೇ ಆರೈಕೆ, ಗೊಬ್ಬರ, ಬಿತ್ತನೆ ಬೇಡದೇ ಬೆಳೆಯುವ ಅಪಾರ ಪ್ರಮಾಣದಲ್ಲಿ ಬೆಳೆಯು ಔಷಧಿ ತರಕಾರಿಯಾಗಿದೆ.

ನೆಲದಲ್ಲಿ ಬಳ್ಳಿಯ ರೂಪದಲ್ಲಿ ಹರಡುವ ಕಾರ್ಚಿಕಾಯಿ ಸಸ್ಯ ಉಳಿದ ಸಮಯದಲ್ಲಿ ಗಡ್ಡೆಯ ರೂಪದಲ್ಲಿ ಜಮೀನಿನ ಅಡಿಯಲ್ಲಿ ಅಡಗಿರುತ್ತದೆ. ಹಲವಾರು ರೈತರು ಇದೊಂದು ಕಳೆ ಸಸ್ಯ ಎಂದು ಭಾವಿಸುತ್ತಾರೆ. ಆದರೆ, ಶತಮಾನಗಳಿಂದ ಕಾರ್ಚಿಕಾಯಿ ಇಂತಹ ಹಲವಾರು ಅಡಚಣೆಗಳ ನಡುವೆ ಬೇಸಿಗೆಯ ಸಂದರ್ಭದಲ್ಲಿ ಉದುರುವ ಕೆಲವು ಹನಿಗಳಿಂದ ಭೂಮಿಯಲ್ಲಿ ಅಡಗಿ ಕುಳಿತ ಗಡ್ಡೆ ಮರು ಜೀವ ಪಡೆದು ಸಮೃದ್ಧವಾಗಿ ಬೆಳೆದು ರುಚಿಕರ ಆಹಾರವಾಗಿ ದೊರೆಯುತ್ತದೆ.

ADVERTISEMENT

ಬೀಜ ಬಿತ್ತನೆ ಮಾಡಲು, ಕಳೆ ತೆಗೆಯಲು, ಗೊಬ್ಬರ ಹರಡಲು ಹಾಗೂ ಇತರೆ ಕೃಷಿ ಚಟುವಟಿಕೆಗಳಿಗಾಗಿ ಹೊಲಕ್ಕೆ ಹೋಗುವ ಮಹಿಳೆಯರು ತಮ್ಮ ಕೆಲಸದ ಜೊತೆಯಲ್ಲಿ ಪುಕ್ಕಟೆಯಾಗಿ ದೊರೆಯುವ ಕಾರ್ಚಿಕಾಯಿ ಆರಿಸಿಕೊಂಡು ಬರುತ್ತಾರೆ. ತಮ್ಮ ಸೀರೆಯ ಸೆರಗನ್ನೇ ಚೀಲವಾಗಿಸಿಕೊಂಡು, ಮೈ ಬಗ್ಗಿಸಿ ನೆಲ ಮಟ್ಟದ ಬಳ್ಳಿಯಿಂದ ಕಾರ್ಚಿಕಾಯಿ ಸಂಗ್ರಹಿಸುತ್ತಾರೆ.

ಮನೆಗೆ ತಂದು ಹಸಿ ಮೆಣಸಿನಕಾಯಿ, ಅರಿಸಿನ, ಉಪ್ಪು ಅಗತ್ಯ ಮಸಾಲೆ ಹಾಕಿ ಎಣ್ಣೆಯಲ್ಲಿ ಕರಿದು ಪಲ್ಯ ಮಾಡುತ್ತಾರೆ. ಸ್ವಾದಿಷ್ಟ ಪಲ್ಯವನ್ನು ರೊಟ್ಟಿ, ತಾಲಿಪೆಟ್ಟು, ಚಪಾತಿ, ಅನ್ನ, ಮುದ್ದೆಗಳ ಜೊತೆಯಲ್ಲಿ ಸವಿಯುತ್ತಾರೆ.

‘ಕಾರ್ಚಿಕಾಯಿಗಳನ್ನು ರಾತ್ರಿ ವೇಳೆ ಮಜ್ಜಿಗೆಯಲ್ಲಿ ನೆನೆಹಾಕಿ ಮಾರನೇ ದಿನ ಬಿಸಿಲಿನಲ್ಲಿ ಒಣಗಿಸುವ (ಈ ರೀತಿ ಏಳೆಂಟು ದಿನ ಮಾಡ್ತಾರೆ) ಮೂಲಕ ಬಾಳಕ ಕೂಡ ತಯಾರಿಸುತ್ತಾರೆ. ಇವನ್ನು ಬೇಕೆನಿಸಿದಾಗ ಎಣ್ಣೆಯಲ್ಲಿ ಕರಿದು ಬಳಸಬಹುದಾಗಿದೆ. ಅಷ್ಟೇ ಅಲ್ಲದೇ, ಕಾರ್ಚಿಕಾಯಿಗಳಿಂದ ಚಟ್ನಿ, ಉಪ್ಪಿನಕಾಯಿ ಕೂಡ ತಯಾರಿಸಬಹುದಾಗಿದೆ. ಇದರ ಮೌಲ್ಯವರ್ಧನೆಗೆ ಅವಕಾಶಗಳಿವೆ’ ಎನ್ನುತ್ತಾರೆ ಬಸಮ್ಮ ಮಾರನಬಸರಿ.

ಕೆಲವು ಮಹಿಳೆಯರು ಕಾರ್ಚಿಕಾಯಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಪ್ರತಿ ಕೆಜಿಗೆ ₹50 ರಿಂದ ₹80 ವರೆಗೆ ಮಾರಾಟ ಮಾಡುತ್ತಾರೆ. ಗಾಡಿ ಮೂಲಕ ಮಾರಾಟ ಮಾಡುವ ಸಂಚಾರಿ ವ್ಯಾಪಾರಸ್ಥರು ಮನೆ, ಮನೆಗೆ ಹೋಗಿ ಪ್ರತಿ ಕೆಜಿಗೆ ₹100 ರಿಂದ ₹150 ವರೆಗೆ ಮಾರಾಟ ಮಾಡುತ್ತಾರೆ. ಕಾರ್ಚಿಕಾಯಿ ಒಟ್ಟಾಗಿದ್ದರೆ ಉಂಟಾಗುವ ಕಾವಿನಿಂದ ಬೀಜಗಳು ಒಡೆದು ಹೋಗುತ್ತವೆ. ಆಗ ಪಲ್ಯ ಮಾಡಲು ಬರುವುದಿಲ್ಲ. ಹಾಗಾಗಿ ಬೇಗನೆ ಮಾರಾಟ ಮಾಡುವ ಉದ್ದೇಶದಿಂದ ಕೆಲವೊಮ್ಮೆ ಕಡಿಮೆ ಬೆಲೆಗೂ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ’ ಎನ್ನುತ್ತಾರೆ ರೈತ ಮಹಿಳೆ ಫಕೀರವ್ವ ತಳವಾರ.

ಕಾರ್ಚಿಕಾಯಿಯು ಕಕುರಬಿಟೇಸಿ ಕುಟಂಬಕ್ಕೆ ಸೇರಿದ್ದು ವೈಜ್ಞಾನಿಕವಾಗಿ ಮೊಮೊರ್ಡಿಕಾ ಸಿಂಬಲೇರಿಯಾ ಎಂದು ಕರೆಯುತ್ತಾರೆ ಔಷಧೀಯ ವಿಶಿಷ್ಟ ಗುಣಗಳನ್ನೇ ಹೊಂದಿದ್ದರು ರೈತರು ಅಧಿಕ ರಾಸಾಯನಿಕ ಬಳಕೆ ಮಾಡುತ್ತಿರುವ ಕಾರಣ ಅಳವಿನಂಚಿನಲ್ಲಿದೆ

ಮಂಜುನಾಥ.ಎಸ್.ನಾಯಕ, ಜೀವವೈವಿಧ್ಯ ಸಂಶೋಧಕ

ಹೊಲದಿಂದ ತಂದಿರುವ ಕಾರ್ಚಿಕಾಯಿಗಳನ್ನು ತಟ್ಟೆಯಲ್ಲಿ ಹಾಕಿರುವುದು
ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಕಾರ್ಚಿಕಾಯಿಯು ದೇಹದಲ್ಲಿ ಚೈತನ್ಯ ತುಂಬುವುದಲ್ಲದೆ ತನ್ನ ಔಷಧೀಯ ಗುಣಗಳಿಂದ ಅನೇಕ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ
ಡಾ.ಶಿವಯ್ಯ.ಎ.ರೋಣ ಆಯುರ್ವೇದ ವೈದ್ಯ

ಔಷಧೀಯ ಗುಣಗಳ ಆಗರ ಕಾರ್ಚಿಕಾಯಿ

ಔಷಧೀಯ ಗುಣಗಳ ಆಗರವಾಗಿರುವ ಕಾರ್ಚಿಕಾಯಿಯನ್ನು ರಕ್ತನಾಳಗಳಲ್ಲಿ ತುಂಬಿರುವ ಕೊಬ್ಬಿನ ಅಂಶವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ. ಹೃದಯಾಘಾತವನ್ನು ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕೆಂಪು ರಕ್ತಕಣಗಳ ಉತ್ಪತ್ತಿಗೆ ಸಹಕರಿಸಿ ಉತ್ತೇಜನ ನೀಡುತ್ತದೆ. ಕೀಲು ಸಂಧು ನೋವುಗಳ ನಿವಾರಣೆಗೂ ಯಕೃತ್ ಸಂರಕ್ಷಕವಾಗಿಯೂ ಮೂತ್ರಪಿಂಡದ ಹರಳುಗಳನ್ನು ಕರಗಿಸಲೂ ಬಳಕೆಯಾಗುತ್ತದೆ. ಕಾರ್ಚಿಕಾಯಿ ಸೇವನೆಯಿಂದ ಹೊಟ್ಟೆಯ ಜಂತುಗಳು ನಾಶವಾಗುತ್ತವೆ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ ಎನ್ನುವ ಪಾರಂಪರಿಕ ನಂಬಿಕೆ ಇಂದಿಗೂ ಜನರಲ್ಲಿ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.