ರಾಣೆಬೆನ್ನೂರು: ‘ಆರ್.ಎನ್.ಆರ್- 15048 (ತೆಲಂಗಾಣ ಸೋನಾ) ಭತ್ತದ ತಳಿಯು ಕಡಿಮೆ ಸಕ್ಕರೆ ಅಂಶವನ್ನು ಹೊಂದಿದ್ದು, ಈ ತಳಿಯು ಸಕ್ಕರೆ ರಹಿತ ಭತ್ತದ ತಳಿಯಾಗಿದ್ದು, ಉತ್ತಮವಾದ ಧಾನ್ಯ ಮತ್ತು ಉತ್ತಮ ಅಡುಗೆ ಗುಣಮಟ್ಟದಿಂದಾಗಿ ಹೆಚ್ಚಿನ ಮಾರುಕಟ್ಟೆ ಬೆಲೆಯನ್ನು ಪಡೆಯುತ್ತದೆ’ ಎಂದು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ ಜಿ.ಎಸ್ ಹೇಳಿದರು.
ತಾಲ್ಲೂಕಿನ ಫತ್ತೇಪುರ ಗ್ರಾಮದ ರೈತ ನಾಗರಾಜ್ ಅವರ ಕ್ಷೇತ್ರದಲ್ಲಿ ಸೋಮವಾರ ಹೊಸ ಭತ್ತದ ತಳಿ ಆರ್.ಎನ್.ಆರ್ -15048 (ತೆಲಂಗಾಣ ಸೋನಾ) ತಳಿಯ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಭತ್ತದ ಹೊಸ ತಳಿ ಬೆಂಕಿ ಮತ್ತು ಕೊಳೆ ರೋಗಕ್ಕೆ ಹೆಚ್ಚು ನಿರೋಧಕವಾಗಿದೆ. ಇದು ಸಣ್ಣ ತೆಳ್ಳಗಿನ ಧಾನ್ಯವಾಗಿದೆ ಮತ್ತು ಇದು ಛಿದ್ರವಾಗದ ವಿಧವಾಗಿದೆ. ಉತ್ತಮ ಇಳುವರಿ ಪಡೆಯಲು ಬೀಜೋಪಚಾರದಿಂದ ಹಿಡಿದು ಕೊಯ್ಲಿನ ವರೆಗೆ ರೋಗ ಮತ್ತು ಕೀಟ ನಿರ್ವಹಣೆ ಬಹಳ ಮುಖ್ಯ’ ಎಂದರು.
ಕೇಂದ್ರದ ಮಣ್ಣು ವಿಷಯ ತಜ್ಞೆ ಡಾ.ರಶ್ಮಿ ಸಿ. ಎಂ ಮಾತನಾಡಿ, ‘ಸಸಿ ಮಡಿಯಲ್ಲಿ ಪೋಷಕಾಂಶಗಳ ನಿರ್ವಹಣೆಗೆ ಸಂಯುಕ್ತ ಗೊಬ್ಬರ 15: 15: 15: ಮೂರು ಗುಂಟಗೆ 3 ಕೆಜಿ ಯಂತೆ ಬಳಸಬೇಕು. ಪ್ರತಿ 100 ಚದರ ಮೀಟರ್ ಕ್ಷೇತ್ರಕ್ಕೆ 1 ಕಿ. ಗ್ರಾಂ ಸಾರಜನಕ, 0.4 ಕಿ.ಗ್ರಾಂ. ರಂಜಕ ಮತ್ತು 0.5 ಕಿ. ಗ್ರಾಂ ಪೋಟ್ಯಾಷ್ ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು 250 ಕಿಗ್ರಾಂ ಕೊಟ್ಟಿಗೆ ಗೊಬ್ಬರದೊಡನೆ ಬೆರೆಸಬೇಕು. ಮಣ್ಣಿನಲ್ಲಿ ತಂಪು ಹವೆ ಇರುವ ಪ್ರದೇಶದಲ್ಲಿ ರಂಜಕ ಒದಗಿಸುವುದರಿಂದ ಉತ್ತಮ ಸಸಿಗಳನ್ನು ಪಡೆಯಲು ಸಾಧ್ಯ’ ಎಂದರು.
ಹಸಿರೆಲೆ ಗೊಬ್ಬರವನ್ನು ಒದಗಿಸಲು ಎಕರೆಗೆ 4 ಟನ್ ಎಲೆ ಮತ್ತು ಎಳೆ ಕಾಂಡಗಳನ್ನು ಮಾತ್ರ ನಾಟಿಗೆ 3 ವಾರಗಳ ಮುಂಚೆ ಮಣ್ಣಿನಲ್ಲಿ ಬೆರೆಸಬೇಕು. ಭತ್ತದಲ್ಲಿ ಎಕರೆಗೆ 10 ಕಿ.ಗ್ರಾಂ. ಸತುವಿನ ಸಲ್ಫೇಟ್
ಮತ್ತು 10 ಕಿ.ಗ್ರಾಂ. ಕಬ್ಬಿಣದ ಸಲ್ಫೇಟ್ ಬಳಸುವುದರಿಂದ ಲಘು ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿದರು.
ಈ ಕ್ಷೇತ್ರೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.