ಹೊಳೆಆಲೂರ: ಆಡಳಿತ ವ್ಯವಸ್ಥೆಯನ್ನು ಗ್ರಾಮಕ್ಕೆ ಕರೆತಂದು ಸಮಸ್ಯೆಗಳನ್ನು ಬಗೆಹರಿಸಲು ಜಾರಿಗೆ ತಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಪ್ರವಾಹದಿಂದಾಗಿ ಸ್ಥಳಾಂತರವಾದ ಗ್ರಾಮಗಳಿಗೆ ಯಾವಾಗ ಬರುತ್ತದೆ ಎಂದು ಹೊಳೆಆಲೂರ ಭಾಗದ ಗ್ರಾಮಗಳ ಜನರು ಕಾದಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿ ನೆಪ ಮಾತ್ರಕ್ಕೆ ಸೀಮಿತವಾಗುತ್ತಿದ್ದು, ಪರಿಹಾರವಾದ ಸಮಸ್ಯೆಗಳ ಪ್ರತಿಶತ ತೀರಾ ಕಡಿಮೆಯಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವಷ್ಟರಲ್ಲಿಯೇ ಅಧಿಕಾರಿಗಳು ಸುಸ್ತು ಹೊಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹೊಳೆಆಲೂರ ಭಾಗದಲ್ಲಿ ಪ್ರವಾಹಕ್ಕೆ ತುತ್ತಾಗಿ ಸ್ಥಳಾಂತರವಾದ ನವ ಗ್ರಾಮಗಳು ಹಲವಾರು ಸಮಸ್ಯೆಗಳಿಗೆ ತುತ್ತಾಗಿ ವರ್ಷಗಳೇ ಕಳೆದರೂ ಆಡಳಿತ ವ್ಯವಸ್ಥೆಗೆ ಮಾತ್ರ ಕಾಣದಿರುವುದು ದುರದೃಷ್ಟಕರ. ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಮನೆ ಹಂಚಿಕೆ ಪ್ರಕ್ರಿಯೆ ಈಚೆಗೆ ಪೂರ್ಣಗೊಂಡಿದೆ. ಆದರೆ, ಶಿಥಿಲಗೊಂಡು ಹಾಳು ಕೊಂಪೆಯಂತಾಗಿದ್ದ ಮನೆಗಳನ್ನೇ ಹಂಚಿಕೆ ಮಾಡಿ ಕೈತೊಳೆದುಕೊಳ್ಳಲಾಗಿದೆ. ಯಾವುದೇ ಅಧಿಕಾರಿಗಳು ತಿರುಗಿಯೂ ನೋಡಿಲ್ಲ ಎಂದು ಸ್ಥಳೀಯರು ಅಲವತ್ತು
ಕೊಂಡಿದ್ದಾರೆ.
ಇತ್ತ ಗ್ರಾಮಸ್ಥರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಜಿಲ್ಲಾಡಳಿತದಿಂದ ನಡೆಯುವ ಗ್ರಾಮ ವಾಸ್ತವ್ಯ ಎದುರು ನೋಡುತ್ತಿದ್ದಾರೆ.
ಬಿದ್ದ ಮನಿ ಕೊಟ್ಟು ಇರ್ತಿದ್ರಿರ್ರಿ ಇಲ್ಲಂದ್ರ ಬಿಡ್ರಿ ಅಂತಾರ್ರಿ ಯಾವು ಅನುದಾನ ಇಲ್ಲ ಅಂತಾರ ಬಿದ್ದ ಮನಿ ರಿಪೇರಿ ಹೆಂಗ ಮಾಡ್ಕೊಳ್ಳುದು
ರಾಮಪ್ಪ, ಗಾಡಗೋಳಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.