ADVERTISEMENT

ಪ್ರವಾಹದ ಕಹಿ ಮರೆತು ಹೊಸ ವರ್ಷಕ್ಕೆ ಸ್ವಾಗತ ಕೋರಿದ ಗದಗದ ಜನ

ಮನೆ, ಮಳಿಗೆಗಳಿಗೆ ವಿದ್ಯುತ್‌ ದೀಪಾಲಂಕಾರ; ಯುವಕರ ಹರ್ಷೋದ್ಗಾರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 9:09 IST
Last Updated 1 ಜನವರಿ 2020, 9:09 IST
2019ಕ್ಕೆ ವಿದಾಯ ಮಂಗಳವಾರ ದಿನವಿಡೀ ಬೆಳಗಿದ ದಿನಕರ, ಸಂಜೆ ದಿನದ ಕಾಯಕ ಮುಗಿಸಿ 2019ಕ್ಕೆ ವಿದಾಯ ಹೇಳುತ್ತಾ ಗದಗ ನಗರದ ಹೊರವಲಯದಲ್ಲಿ ಗುಡ್ಡದ ಮರೆಯಲ್ಲಿ, ಮರೆಯಾಗುವಾಗ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಬಗೆ – ಪ್ರಜಾವಾಣಿ ಚಿತ್ರ, ಬನೇಶ ಕುಲಕರ್ಣಿ
2019ಕ್ಕೆ ವಿದಾಯ ಮಂಗಳವಾರ ದಿನವಿಡೀ ಬೆಳಗಿದ ದಿನಕರ, ಸಂಜೆ ದಿನದ ಕಾಯಕ ಮುಗಿಸಿ 2019ಕ್ಕೆ ವಿದಾಯ ಹೇಳುತ್ತಾ ಗದಗ ನಗರದ ಹೊರವಲಯದಲ್ಲಿ ಗುಡ್ಡದ ಮರೆಯಲ್ಲಿ, ಮರೆಯಾಗುವಾಗ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಬಗೆ – ಪ್ರಜಾವಾಣಿ ಚಿತ್ರ, ಬನೇಶ ಕುಲಕರ್ಣಿ   

ಗದಗ: ನಾಲ್ಕು ತಿಂಗಳ ಹಿಂದೆ ಬದುಕನ್ನೇ ಬುಡಮೇಲು ಮಾಡಿದ್ದ ಭೀಕರ ಪ್ರವಾಹದ ಕರಾಳ ನೆನಪುಗಳನ್ನು ಮರೆತು, ಜಿಲ್ಲೆಯ ಜನತೆ ಮಂಗಳವಾರ ರಾತ್ರಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಹಳೆಯ ಕಹಿ ನೆನಪುಗಳನ್ನು ಮರೆತು, 2020 ಎದುರುಗೊಂಡರು. ಸಂಗೀತಕ್ಕೆ ಹೆಜ್ಜೆ ಹಾಕುತ್ತಾ, ಮೊಬೈಲ್‌ನಲ್ಲಿ ವರ್ಷದ ಹರ್ಷವನ್ನು ಸೆರೆಹಿಡಿದು, ಸಂಭ್ರಮೋಲ್ಲಾಸದಲ್ಲಿ ತೇಲಿದರು.

ಗದಗ–ಬೆಟಗೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಹೋಟೆಲ್‌, ರೆಸ್ಟೊರೆಂಟ್‌, ಡಾಬಾಗಳಲ್ಲಿ ಸಂಭ್ರಮಾಚರಣೆ ಪ್ರಯುಕ್ತ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಮಂಗಳವಾರ ಸಂಜೆ 7 ಗಂಟೆಯಿಂದಲೇ ಹಲವೆಡೆ ಮನರಂಜನಾ ಕೂಟಗಳು ಆರಂಭಗೊಂಡವು.

ನಗರದ ಹೊರವಲಯದ ತೋಟಗಳಲ್ಲಿ ಪಾರ್ಟಿ ಆಯೋಜಿಸುವ ಮೂಲಕ ಯುವಕರ ತಂಡಗಳು ಹೊಸ ವರ್ಷವನ್ನು ಸ್ವಾಗತಿಸಿದರು. ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆಯ ಮೇಲೆ ‘2019ಕ್ಕೆ ವಿದಾಯ 2020ಸ್ವಾಗತ’ ಎಂದು ಸುಣ್ಣದಲ್ಲಿ ಬರೆದು ಯುವ ಜನತೆ ಹೊಸ ವರ್ಷವನ್ನು ಬರಮಾಡಿಕೊಂಡರು.

ADVERTISEMENT

ಬೆಟಗೇರಿಯ ಹೆಲ್ತ್‌ಕ್ಯಾಂಪ್‌, ಕ್ರಿಶ್ಚಿಯನ್‌ ಕಾಲೋನಿಯಲ್ಲಿ ಕೆಲವು ಮನೆಗಳು ವಿದ್ಯುತ್‌ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದವು. ಕ್ರಿಸ್‌ಮಸ್‌ ಬೆನ್ನಲ್ಲೇ ಹೊಸ ವರ್ಷ ಬಂದಿರುವುದರಿಂದ ಒಂದು ವಾರದಿಂದಲೇ ಈ ಭಾಗದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಹೊಸ ವರ್ಷದ ನಿಮಿತ್ತ ಕೆಲವರು ಮನೆಯಲ್ಲೇ ಕೇಕ್‌ ಕತ್ತರಿಸಿ, ಮಾಂಸಾಹಾರ ಮತ್ತು ಸಿಹಿ ಅಡುಗೆ ಸಿದ್ಧಪಡಿಸಿ ಕುಟುಂಬ ಸದಸ್ಯರ ಜತೆಗೆ ಸಂಭ್ರಮಾಚರಣೆ ಮಾಡಿದರು. ಇನ್ನು ಕೆಲವರು ಹೋಟೆಲ್‌ಗಳಿಗೆ ತೆರಳಿ ಜತೆಯಾಗಿ ಭೋಜನ ಸವಿದರು.

‘ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿ ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸಿಲ್ಲ. ರೆಸ್ಟೋರೆಂಟ್‌ಗೆ ಭೇಟಿ ನೀಡುವ ಗ್ರಾಹಕರಿಗೆ ಎಂದಿನಂತೆ ಆಹಾರ, ಸೇವೆಗಳನ್ನು ಒದಗಿಸಲಾಯಿತು, ಸಂಭ್ರಮಾಚರಣೆ ಅವಕಾಶ ನೀಡಲಾಗುವುದು, ದರದಲ್ಲೂ ಯಾವುದೇ ವ್ಯತ್ಯಾಸ ಇಲ್ಲ’ ಎಂದು ನಗರದ ಪ್ರಮುಖ ಹೋಟೆಲ್‌ಗಳ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.