ADVERTISEMENT

ಗದಗ: ಪೊಲೀಸ್ ವಾಹನಕ್ಕೆ ಡಿಕ್ಕಿ; ಗಾಯಗೊಂಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 10:50 IST
Last Updated 9 ಜನವರಿ 2024, 10:50 IST
<div class="paragraphs"><p>ನಿಖಿಲ್‌ಗೌಡ</p></div>

ನಿಖಿಲ್‌ಗೌಡ

   

ಗದಗ: ನಗರದ ಹೊರವಲಯದ ಮಲ್ಲಸಮುದ್ರ ಕ್ರಾಸ್‌ ಬಳಿ ಸೋಮವಾರ ಸಾಯಂಕಾಲ ಪೊಲೀಸ್‌ ವಾಹನ ಮತ್ತು ಬೈಕ್‌ ನಡುವೆ ನಡೆದ ಅಪಘಾತದಲ್ಲಿ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಯುವಕ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮದ ನಿಖಿಲ್‌ಗೌಡ (21) ಮೃತ ಯುವಕ. ಈತ ಲಕ್ಷ್ಮೇಶ್ವರ ತಾಲ್ಲೂಕಿನ ಅಗಡಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಏಳನೇ ಸೆಮಿಸ್ಟರ್‌ ಓದುತ್ತಿದ್ದರು.

ADVERTISEMENT

ಗದಗ ಕಡೆಗೆ ಸ್ಕೂಟಿಯಲ್ಲಿ ವೇಗವಾಗಿ ಬರುತ್ತಿದ್ದ ನಿಖಿಲ್‌, ಪೊಲೀಸ್‌ ಹೆಡ್‌ಕ್ವಾರ್ಟರ್‌ಗೆ ತೆರಳಲು ಲಕ್ಷ್ಮೇಶ್ವರ ಮುಖ್ಯರಸ್ತೆಯಲ್ಲಿ ಬಲಕ್ಕೆ ತಿರುಗಿದ ಪೊಲೀಸ್‌ ವಾಹನದ ನಡುವೆ ಡಿಕ್ಕಿಯಾಗಿದೆ. ಈ ವೇಳೆ ನಿಖಿಲ್‌ ತಲೆ ಡಿವೈಡರ್‌ಗೆ ಬಡಿದು ಗಂಭೀರ ಗಾಯವಾಗಿತ್ತು. ಆತ ಹೆಲ್ಮೆಟ್‌ ಧರಿಸಿದ್ದರೆ ಪ್ರಾಣಾಪಾಯದಿಂದ ಪಾರಾಗುತ್ತಿದ್ದ’ ಎಂದು ಗದಗ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

ಯಶ್‌ ಕಾರು ಚೇಸ್‌ ಮಾಡಿಕೊಂಡು ಬಂದಿಲ್ಲ: ಎಸ್‌ಪಿ

‘ಸೂರಣಗಿಯಲ್ಲಿ ನಡೆದ ವಿದ್ಯುತ್‌ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮೂವರು ಯುವಕರ ಆರೋಗ್ಯ ವಿಚಾರಿಸಲು ನಟ ಯಶ್‌ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಬಂದಿದ್ದರು. ಅವರು ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಹುಬ್ಬಳ್ಳಿ ಕಡೆಗೆ ತೆರಳಿದರು. ಅಲ್ಲಿಯವರೆಗೂ ನಾನು ಜತೆಯಲ್ಲಿದ್ದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ತಿಳಿಸಿದ್ದಾರೆ.

‘ನಟ ಯಶ್‌ ಬೆಂಗಾವಲಿಗಿದ್ದ ಪೊಲೀಸ್‌ ವಾಹನಕ್ಕೆ ಬೈಕ್‌ ಡಿಕ್ಕಿ ಆಗಿಲ್ಲ. ಅಲ್ಲದೇ, ಆ ಸಂದರ್ಭದಲ್ಲಿ ಯಶ್‌ ಅವರಿದ್ದ ಕಾರನ್ನು ಯಾವುದೇ ಬೈಕ್‌ ಸವಾರ ಚೇಸ್‌ ಮಾಡಿಕೊಂಡು ಬಂದಿಲ್ಲ. ಕಾರನ್ನು ಚೇಸ್‌ ಮಾಡಿಕೊಂಡು ಬರಲು ಅವಕಾಶ ಇಲ್ಲದಂತೆ ಎಚ್ಚರಿಕೆ ವಹಿಸಿದ್ದೆವು’ ಎಂದು ತಿಳಿಸಿದ್ದಾರೆ.

‘ಬೇರೊಂದು ಕಡೆ ಕರ್ತವ್ಯ ಮುಗಿಸಿ, ಪೊಲೀಸ್‌ ವಾಹನ ಹೆಡ್‌ಕ್ವಾರ್ಟರ್‌ಗೆ ತೆರಳುವಾಗ, ಮಲ್ಲಸಮುದ್ರ ಕ್ರಾಸ್‌ ಬಳಿ ಈ ದುರ್ಘಟನೆ ನಡೆದಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.