ADVERTISEMENT

ಮುಳಗುಂದ | ಚಿಂಚಲಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಗ್ರಾಮ ಪಂಚಾಯಿತಿ– ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 5:33 IST
Last Updated 10 ಜುಲೈ 2024, 5:33 IST
ಚಿಂಚಲಿ ಗ್ರಾಮದ ತೇರಿನಗಡ್ಡಿ ಹತ್ತಿರ ಮುಖ್ಯ ರಸ್ತೆ ಪಕ್ಕ ಚರಂಡಿ ಹೂಳು ತುಂಬಿರುವುದು
ಚಿಂಚಲಿ ಗ್ರಾಮದ ತೇರಿನಗಡ್ಡಿ ಹತ್ತಿರ ಮುಖ್ಯ ರಸ್ತೆ ಪಕ್ಕ ಚರಂಡಿ ಹೂಳು ತುಂಬಿರುವುದು   

ಚಿಂಚಲಿ (ಮುಳಗುಂದ): ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿ, ಆಡಳಿತ ಮಂಡಳಿಯು ಸ್ವಚ್ಛತೆ ನಿರ್ವಹಿಸವಲ್ಲಿ ನಿರ್ಲಕ್ಷ್ಯ ವಹಿಸಿದೆ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಇಲ್ಲಿನ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡಿವೆ. ಇದರಿಂದ ಕೊಳಚೆ ನೀರು ಮುಂದೆ ಸಾಗದೆ ದುರ್ನಾತ ಬೀರುತ್ತಿದೆ. ಇನ್ನೂ ಕೆಲವೆಡೆ ಸಿಸಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಗ್ರಾಮ ಪಂಚಾಯ್ತಿ ಹತ್ತಿರದ ಚರಂಡಿಯಲ್ಲಿ ಹುಲ್ಲು ಬೆಳೆದು ಹೂಳು ತುಂಬಿ ಸುಮಾರು ದಿನಗಳೇ ಕಳೆದಿವೆ. ಆದರೂ ಸಹ ಸ್ವಚ್ಛಗೊಳಿಸಿಲ್ಲ.

ಸೊಳ್ಳೆ ನಾಶಕ ಪೌಡರ್‌ ಮತ್ತು ಫಾಂಗಿಗ್ ಮಾಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸಿಬ್ಬಂದಿ ಕಡಿಮೆ ಇರುವ ಕಾರಣ ಚರಂಡಿ ಸ್ವಚ್ಛತೆ ನಿಧಾನವಾಗಿದೆ. ಕೂಡಲೇ ಕೆಲಸ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
ತೇಜಪ್ಪ ದೇಸಾಯಿ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಚಿಂಚಲಿ

‘ಗ್ರಾಮದ ಸೌಂದರ್ಯ ಹೆಚ್ಚಿಸಿ ಸುಗಮ ಸಂಚಾರಕ್ಕಾಗಿ ವಿವಿಧಡೆ ಸಿಸಿ ರಸ್ತೆ, ಚರಂಡಿ ಮಾಡಿದ್ದಾರೆ. ಆದರೆ ತೇರಿನಗಡ್ಡಿ ಮನೆ ಹತ್ತಿರ ಕೊಳಚೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ನೀರು ಮುಂದೆ ಸಾಗಲು ಚರಂಡಿ ಸಹ ಇಲ್ಲ. ಇದರಿಂದ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಜಾಲಿಗಿಡ, ಪಾರ್ಥೇನಿಯಂ ಕಸ ಬೆಳೆದು ನಿಂತಿದೆ. ತೆರವು ಮಾಡುವಂತೆ ಪಂಚಾಯಿತಿಗೆ ಮನವಿ ಮಾಡಿದರು ಪ್ರಯೋಜನಾವಗಿಲ್ಲ. ಸ್ವಚ್ಛತೆ ಕೈಗೊಳ್ಳಬೇಕಿದ್ದ ಗ್ರಾಮ ಪಂಚಾಯಿತಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಗ್ರಾಮದ ಕಾಶಪ್ಪ ಶಿವಳ್ಳಿ ಆರೋಪಿಸಿದರು.

ADVERTISEMENT

‘ಮಳೆಗಾಲ ಶುರು ಆಗುವ ಮುನ್ನ ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ ತಗ್ಗು ಗುಂಡಿ, ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದೆ. ಸೊಳ್ಳೆ ನಾಶಕ ಸಿಂಪಡಣೆ, ಸ್ವಚ್ಛತೆ ಕೈಗೊಳ್ಳುತ್ತಿಲ್ಲ. ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲ ಕಳೆಯುವ ಸ್ಥಿತಿ ಎದುರಾಗಿದೆ. ಕೊಡಲೇ ಗ್ರಾಮ ಪಂಚಾಯಿತಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.