ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಿಂದ ಹರದಗಟ್ಟಿವರೆಗೆ ರಸ್ತೆಯಲ್ಲಿ ಅಪಘಾತ ಸಂಭವಿಸದಂತೆ ರಸ್ತೆಗೆ ಅಡೆತಡೆ ನಿರ್ಮಿಸಿ ಅಪಘಾತ ವಲಯ ಎಂಬ ನಾಮಫಲಕ ಹಾಕುವಂತೆ ಶಾಸಕ ಡಾ.ಚಂದ್ರು ಲಮಾಣಿ ಅವರು ಸೂಚಿಸಿದ್ದರೂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅವರ ಮಾತನ್ನು ಪಾಲಿಸಿಲ್ಲ.
ಮುಳಗುಂದ ಅವರ ತೋಟ ದಾಟಿದ ನಂತರ ದೊಡ್ಡ ತಿರುವು ಇದ್ದು ಅಲ್ಲಿ ಅಪಘಾತಗಳು ಸಂಭವಿಸುವ ಭಯ ಇದೆ. ತಿಂಗಳ ಹಿಂದೆ ಇದೇ ರಸ್ತೆ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಹತ್ತು ದಿನಗಳ ಹಿಂದೆ ಲಕ್ಷ್ಮೇಶ್ವರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜರುಗಿದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಿಸಿದ ಅಡೆತಡೆ ನಿರ್ಮಿಸುವಂತೆ ಶಾಸಕರು ಅಧಿಕಾರಿಗಳಿಗೆ ಹೇಳಿದ್ದರು. ಆದರೆ ಲೋಕೋಪಯೋಗಿ ಇಲಾಖೆ ಹಾಗೇಯೇ ಹೊಸ ರಸ್ತೆ ನಿರ್ಮಿಸಿದೆ.
ಕೆಡಿಪಿ ಸಭೆ ಆರಂಭವಾಗುತ್ತಿದ್ದಂತೆ ಸಭೆಗೆ ಬಂದಿದ್ದ ಲೋಕೋಪಯೋಗಿ ಇಲಾಖೆ ಎಇಇ ಅವರಿಗೆ ತಕ್ಷಣ ರಸ್ತೆಗೆ ಅಡೆತಡೆ ನಿರ್ಮಿಸಿ ವರದಿ ಒಪ್ಪಿಸುವಂತೆ ಸೂಚಿಸಿ ಸಭೆಯಿಂದ ಹೊರ ಕಳಿಸಿದ್ದರು. ಆದರೆ ಇದುವರೆಗೂ ಅಡೆತಡೆ ನಿರ್ಮಿಸಲು ಕ್ರಮಕೈಗೊಂಡಿಲ್ಲ. ಇದರಿಂದಾಗಿ ಚಾಲಕರು ಭಯದ ವಾತಾವರಣದಲ್ಲೇ ವಾಹನಗಳನ್ನು ಓಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.