ಚಂದ್ರು ಎಂ. ರಾಥೋಡ್
ನರೇಗಲ್: ವಿವಿಧ ಇಲಾಖೆಯಲ್ಲಿ ಉನ್ನತ ಮಟ್ಟದ ಸ್ಥಾನ ಅಲಂಕರಿಸಿ, ಉದ್ಯಮ ಹಾಗೂ ಇತರೆ ಕ್ಷೇತ್ರದಲ್ಲಿ ಗುರುತಿಸಿಕೊಂಡು ನಿವೃತ್ತಿಯಾಗಿರುವ ಹಿರಿಯರು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಪುನರ್ಮಿಲನದ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ನೀಡಲು ಮುಂದಾಗಿದ್ದಾರೆ.
ಪಟ್ಟಣದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಂಗ ಸಂಸ್ಥೆಯಾದ ಅನ್ನದಾನ ವಿಜಯ ಪ್ರೌಢಶಾಲೆಯಲ್ಲಿ 1972–73ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಕಲಿತ ಹಿರಿಯ ವಿದ್ಯಾರ್ಥಿಗಳು ಪುನರ್ಮಿಲನಕ್ಕೆ ಮುಂದಾಗಿದ್ದಾರೆ. ತಾವು 50 ವರ್ಷಗಳ ಹಿಂದೆ ಕಲಿತ ಶಾಲೆಯಲ್ಲಿ ಗುರುವಂದನೆ, ಸುವರ್ಣಸಂಭ್ರಮದ ಕಾರ್ಯಕ್ರಮಗಳನ್ನು ಮಾದರಿ ರೂಪದಲ್ಲಿ ಆಯೋಜನೆ ಮಾಡಲು ನಿರ್ಧರಿಸಿದ್ದಾರೆ.
50ರ ಸಂಭ್ರಮದ ಕಾರ್ಯಕ್ರಮದ ಗೌರವಾಧ್ಯಕ್ಷ ಬಸವರಾಜ ಎ. ದಿಂಡೂರ ಅವರು ಅಂತರ ಪ್ರೌಢಶಾಲಾ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಒಂದು ದಿನದ ಉಚಿತ ವಿಮಾನ ಪ್ರಯಾಣ ಹಾಗೂ ಅಲ್ಲಿಂದ ಬೆಂಗಳೂರು, ಮೈಸೂರು, ಊಟಿ ಭಾಗದ ಪ್ರೇಕ್ಷಣಿಯ ಸ್ಥಳಗಳ ಉಚಿತ ಪ್ರವಾಸ ಕಲ್ಪಿಸಲಿದ್ದಾರೆ. ಅದೇ ರೀತಿ ಅಂತರ ಕಾಲೇಜು ಮಟ್ಟದಲ್ಲಿ ನಡೆಯುವ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಕಾಲೇಜು ವಿದ್ಯಾರ್ಥಿಗೆ ದೆಹಲಿವರೆಗೆ ಒಂದು ದಿನದ ಉಚಿತ ವಿಮಾನ ಪ್ರಯಾಣ ಸೌಲಭ್ಯ ಹಾಗೂ ಅಲ್ಲಿನ ಪ್ರೇಕ್ಷಣಿಯ ಸ್ಥಳಗಳನ್ನು ತೋರಿಸುವ ಯೋಜನೆ ಘೋಷಿಸಿದ್ದಾರೆ. ಇದರ ಸಂಪೂರ್ಣವೆಚ್ಚವನ್ನು ಅವರೇ ಭರಿಸಲಿದ್ದಾರೆ.
ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆಯುವ ವಿದ್ಯಾರ್ಥಿಗಳಿಗೆ ತಲಾ ₹10 ಸಾವಿರ ನೀಡಲು ಅಶೋಕ ಕುಲಕರ್ಣಿ, ಮಂಜುನಾಥ ಜೋಳದ, ಬಸವರಾಜ ಸಂಕನಗೌಡರ, ರುದ್ರಸ್ವಾಮಿ ಹಿರೇವಡೆಯರ ಮುಂದಾಗಿದ್ದಾರೆ. ಪ್ರತಿವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಹಾಗೂ ಆದರ್ಶ ವಿದ್ಯಾರ್ಥಿಗೆ ರೋಲಿಂಗ್ ಟ್ರೋಫಿಯನ್ನು ಪ್ರತ್ಯೇಕವಾಗಿ ಕೊಡುಗೆ ನೀಡಲು ಇದೇ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಸಮಾರಂಭ ಮುಗಿದ ನಂತರ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ತಂಡದಿಂದಲೇ ಆಯೋಜನೆ ಮಾಡಲಿದ್ದಾರೆ.
ಗದಗ ಅರಣ್ಯ ಇಲಾಖೆ, ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನರೇಗಲ್ ಪಟ್ಟಣದ ಅನ್ನದಾನೇಶ್ವರ ಶಾಲೆಯ ಆವರಣದಲ್ಲಿ ಜುಲೈ 10ಕ್ಕೆ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಇನ್ನೂ ಅನೇಕ ಮಾದರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ.
ಹಾಲಕೆರೆ ಅನ್ನದಾನೇಶ್ವರ ಮಠದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಶಿಕ್ಷಣಸಂಸ್ಥೆಯು ಲಕ್ಷಾಂತರ ಮಕ್ಕಳಿಗೆ ವಿದ್ಯೆ, ಸಂಸ್ಕಾರ ನೀಡಿದೆ. ನಮ್ಮ ಭಾಗವಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕದ ರಾಯಚೂರ, ಕೊಪ್ಪಳ, ಸಿಂಧನೂರ, ಮಾನ್ವಿ, ಗಂಗಾವತಿ ಭಾಗದ ಅನೇಕರು ಶಿಕ್ಷಣ ಕಲಿತು ಬದುಕು ಕಟ್ಟಿಕೊಂಡಿದ್ದಾರೆ ಹಾಗೂ ಸಮಾಜಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ನಮ್ಮ ಸಂಸ್ಥೆಗೆ ಹಳೆ ವಿದ್ಯಾರ್ಥಿಗಳೇ ಸಂಪತ್ತಾಗಿದ್ದಾರೆ. ಅದರಲ್ಲೂ 1972, 1973ನೇ ಸಾಲಿನ ವಿದ್ಯಾರ್ಥಿಗಳು ಪುನರ್ಮಿಲನದ ಮೂಲಕ ಕಲಿತ ಸಂಸ್ಥೆಯ ಸ್ಮರಣೆ ಮಾಡಿಕೊಂಡು ಸ್ಪೂರ್ತಿದಾಯಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
50 ವರ್ಷಗಳ ನಂತರ ಶಿಕ್ಷಣ ಸಂಸ್ಥೆಯನ್ನು ನೆನಪಿಸಿಕೊಂಡು ಸ್ಪೂರ್ತಿದಾಯಕ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇದೆ ರೀತಿ ಎಲ್ಲರೂ ತಾವು ವಿದ್ಯೆ ಕಲಿತ ಶಿಕ್ಷಣ ಸಂಸ್ಥೆಗಳನ್ನು ಸ್ಮರಿಸಲು ಮುಂದಾಗಬೇಕು-ಮುಪ್ಪಿನ ಬಸವಲಿಂಗ ಸ್ವಾಮೀಜಿ, ಅಧ್ಯಕ್ಷರು, ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ನರೇಗಲ್
ಶಿಕ್ಷಣ ಸಂಸ್ಕಾರ ಹಾಗೂ ಜೀವನವನ್ನು ಕಟ್ಟಿಕೊಟ್ಟ ಶಿಕ್ಷಣ ಸಂಸ್ಥೆ ಮತ್ತು ಗುರುಗಳ ಸ್ಮರಣೆ ಹಾಗೂ ಎಲ್ಲರೊಂದಿಗೆ ಬೆರೆಯುವ ಉದ್ದೇಶದಿಂದ ಮಾದರಿ ಕಾರ್ಯಕ್ರಮ ಆಯೋಜಿಸಿದ್ದೇವೆ-ಡಾ. ಬಸವರಾಜ ಎ. ದಿಂಡೂರ, ಕಾರ್ಯಕ್ರಮದ ಗೌರವಾಧ್ಯಕ್ಷ
1972 ಮತ್ತು 1973ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಸುವರ್ಣ ಸಂಭ್ರಮ ಹಾಗೂ ಪುನರ್ಮಿಲನದ ಅಂಗವಾಗಿ ಅನ್ನದಾನೇಶ್ವರ ಸಂಸ್ಥೆಯ ಆವರಣದಲ್ಲಿ ಗುರುವಂದನೆ- ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಗಸ್ಟ್ 14ರಂದು ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.