ಗದಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿರುವುದು ದಾಖಲೆ ಹಾಗೂ ಕಾಗದಗಳಿಗೆ ಮಾತ್ರ ಸಿಮಿತವಾಗಿದೆ. ನಗರ, ಪಟ್ಟಣಗಳೂ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜನರು ಈಗಲೂ ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ.
ಇಡೀ ಜಿಲ್ಲೆಯೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿದ್ದರೂ ಶೌಚಾಲಯ ನಿರ್ಮಿಸಿಕೊಂಡಿರುವ ಕುರಿತಂತೆ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯ್ತಿಗಳ ದಾಖಲೆಗಳಿಲ್ಲಿರುವ ಅಂಕಿ ಸಂಖ್ಯೆಗೂ ಲಭ್ಯವಿರುವ ಶೌಚಾಲಯಗಳಿಗೂ ತಾಳೆಯಾಗುತ್ತಿಲ್ಲ ಎನ್ನುವುದು ಬಹಿರಂಗ ಸತ್ಯವಾಗಿದೆ.
‘ಗದಗ ಜಿಲ್ಲೆಯು ಈ ಹಿಂದೆಯೇ ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಎಂದು ಘೋಷಣೆಯಾಗಿದೆ. ಸದ್ಯ ನಾವು ನಿಜಾರ್ಥದ ನಿರ್ವಹಣೆಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಭರತ್ ಎಸ್. ತಿಳಿಸಿದ್ದಾರೆ.
‘ಪಾಳುಬಿದ್ದಿರುವ ಹಳೆಯ ಶೌಚಾಲಯಗಳು ಸೇರಿದಂತೆ ಹೊಸದಾಗಿ ನಿರ್ಮಾಣಕ್ಕೆ ಬೇಡಿಕೆ ಬಂದಿರುವ 5 ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. ಕೇಂದ್ರ ಸರ್ಕಾರದ ಒಡಿಎಫ್ ಪ್ಲಸ್ 1 ಎಂಬುದು ಘನತ್ಯಾಜ್ಯ ವಿಲೇವಾರಿಗೆ ಮಾಡುವ ಯೋಜನೆಯಾಗಿದೆ. ಇದಕ್ಕೆ ಜಿಲ್ಲೆಯ 35 ಗ್ರಾಮ ಪಂಚಾಯ್ತಿಗಳು ಮಾನ್ಯತೆ ಪಡೆಯುವ ಅರ್ಹತೆಯನ್ನು ಹೊಂದಿವೆ’ ಎಂದು ಅವರು ತಿಳಿಸಿದರು.
‘ಬಯಲು ಶೌಚ ಮುಕ್ತದ ಯಶಸ್ಸಿಗೆ ಘನತ್ಯಾಜ್ಯ ವಿಲೇವಾರಿ ಒಡಿಎಫ್ ಪ್ಲಸ್ 1, ದ್ರವತ್ಯಾಜ್ಯ ವಿಲೇವಾರಿ ಒಡಿಎಫ್ ಪ್ಲಸ್ 2 ಇವುಗಳು ಗ್ರಾಮ ಪಂಚಾಯ್ತಿ ಹಂತದಲ್ಲಿ ಸರಿಯಾಗಿ ನಡೆದರೆ ಒಡಿಎಫ್ ಪ್ಲಸ್ 3 ಮಾನ್ಯತೆ ಪಡೆಯಲು ನಾವು ಅರ್ಹರಾಗುತ್ತೇವೆ. ಆದ್ದರಿಂದ ಜಿಲ್ಲಾದ್ಯಂತ ಬಯಲು ಬಹಿರ್ದೆಸೆ ಮುಕ್ತದ ಯಶಸ್ಸಿಗೆ ನಿರಂತರವಾಗಿ ಕೆಲಸಗಳು ನಡೆಯುತ್ತಿವೆ’ ಎಂದು ಅವರು ಹೇಳಿದರು.
ದಾಖಲೆಯಲ್ಲಿ ಮಾತ್ರ...
ನರಗುಂದ: ತಾಲ್ಲೂಕಿನ 13 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ 30 ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿವೆ. 2017ರಲ್ಲಿಯೇ ನರಗುಂದ ತಾಲ್ಲೂಕನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಂದಿದ್ದಾಗ ದೇಶದಾದ್ಯಂತ ಸುದ್ದಿಯಾಗಿತ್ತು. ಆಗಲೇ 11,800 ಶೌಚಾಲಯಗಳು ತಾಲ್ಲೂಕಿನಲ್ಲಿ ನಿರ್ಮಾಣಗೊಂಡಿದ್ದವು. ಈಗಲೂ ನಿರ್ಮಾಣಗೊಳ್ಳುತ್ತಿವೆ. ಆದರೂ ಬಯಲು ಬಹಿರ್ದೆಸೆ ನಿಂತಿಲ್ಲ!
ಕೆಲವೆಡೆ ಶೌಚಾಲಯಗಳನ್ನು ಸ್ಟೋರ್ ರೂಮ್‌ಗಳನ್ನಾಗಿಸಿ ಉಪಯೋಗ ಮಾಡದೇ ಇರುವುದು ಸಾಮಾನ್ಯವಾಗಿವೆ. ಕೆಲವು ಶಿಥಿಲಗೊಂಡಿವೆ. ಆದರೆ, ಜನರಿಗೆ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಜಾಗೃತಿ ಮೂಡಿಸಿದರೂ ಜನರು ಬಯಲು ಬಹಿರ್ದೆಸೆ ಬಿಡುತ್ತಿಲ್ಲ. ಇದಕ್ಕೆ ಇನ್ನೂ ಹೆಚ್ಚಿನ ಜಾಗೃತಿಯ ಅಗತ್ಯವಿದೆ ಎಂದು ಕೆಲವು ಗ್ರಾಮಸ್ಥರು ಹೇಳುತ್ತಾರೆ.
‘ನರಗುಂದ ತಾಲ್ಲೂಕು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿ ನಾಲ್ಕು ವರ್ಷವಾಗಿವೆ. ಈಗಲೂ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಹಣ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಜನರು ಜಾಗೃತಿಗೊಂಡು ಶೌಚಾಲಯ ಉಪಯೋಗಕ್ಕೆ ಮುಂದಾಗಬೇಕಿದೆ’ ಎಂದು ತಾಲ್ಲೂಕು ಪಂಚಾಯ್ತಿ ಇಒ ಸಿ.ಆರ್.ಕುರ್ತಕೋಟಿ ತಿಳಿಸಿದ್ದಾರೆ.
ಕಾಟಾಚಾರಕ್ಕೆ ಶೌಚಾಲಯ
ಮುಂಡರಗಿ: ಪಟ್ಟಣದ ವಿವಿಧ ಭಾಗಗಳು ಹಾಗೂ ಬಹುತೇಕ ಗ್ರಾಮಗಳಲ್ಲಿ ಮಹಿಳೆಯರಿಗಾಗಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಅವೆಲ್ಲ ಕಾಟಾಚಾರಕ್ಕೆ ನಿರ್ಮಿಸಿರುವ ಶೌಚಾಲಯಗಳಾಗಿದ್ದು ಅಲ್ಲಿ ನೀರು, ವಿದ್ಯುತ್ ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿ ಸಮುದಾಯ ಶೌಚಾಲಯಗಳಿದ್ದರೂ ಮಹಿಳೆಯರು ಶೌಚಕ್ಕೆ ಬಯಲನ್ನೇ ಆಶ್ರಯಿಸಬೇಕಾಗಿದೆ.
ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಾಕಷ್ಟು ಸಬ್ಸಿಡಿ ಸಹಿತ ಅನುದಾನ ದೊರೆಯುತ್ತಿದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಫಲಾನುಭವಿಗಳು ಒಂದಾಗಿ ಕಾಟಾಚಾರದ ಶೌಚಾಲಯಗಳನ್ನು ನಿರ್ಮಿಸಿಕೊಂಡು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಸಂಗತಿಗಳು ಬಯಲಿಗೆ ಬಂದಿವೆ. ಕಾಟಾಚಾರಕ್ಕೆ ನಿರ್ಮಿಸಿರುವ ಶೌಚಾಲಯಗಳಲ್ಲಿ ಜನರು ಕಟ್ಟಿಗೆ, ಕುಳ್ಳು ಹಾಗೂ ಮತ್ತಿತರ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಬಹಿರ್ದೆಸೆ ಈಗಲೂ ಚಾಲ್ತಿ
ಗಜೇಂದ್ರಗಡ: ತಾಲ್ಲೂಕಿನಲ್ಲಿರುವ ಬಹುತೇಕ ಹಳ್ಳಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಆದರೆ ಇದು ಕಡತಕ್ಕೆ ಮಾತ್ರ ಸೀಮಿತವಾಗಿದ್ದು, ಬಹುತೇಕ ಜನರು ಬಹಿರ್ದೆಸೆಗೆ ಈಗಲೂ ಬಯಲನ್ನೇ ಅವಲಂಬಿಸಿದ್ದಾರೆ.
ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಸ್ವಚ್ಛ ಭಾರತ ಯೋಜನೆಯಲ್ಲಿ ಸರ್ಕಾರದ ಸಹಾಯ ಪಡೆದು ಎಲ್ಲರೂ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ಬಹುತೇಕ ಶೌಚಾಲಯಗಳನ್ನು ಜನರು ಬಳಕೆ ಮಾಡದೆ ರಸ್ತೆ ಪಕ್ಕ, ಹಳ್ಳ, ಕಾಲು ದಾರಿ, ಗ್ರಾಮಗಳಲ್ಲಿರುವ ಖಾಸಗಿಯವರ ಜಾಗಗಳಲ್ಲಿ ಶೌಚಕ್ಕೆ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಕೆಲವು ಗ್ರಾಮಗಳಲ್ಲಿ ಮಹಿಳೆಯರು ಶೌಚಕ್ಕೆ ರಸ್ತೆ ಬದಿ ಅಥವಾ ಮುಳ್ಳಿನ ಪೊದೆಗಳ ಮರೆಯಲ್ಲಿ ಬೆಳಗಾಗುವುದರ ಒಳಗಾಗಿ ಇಲ್ಲವೇ ಕತ್ತಲಾದ ಮೇಲೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಜನರು ಮನೆಗಳಲ್ಲಿ ನಿರ್ಮಿಸಿಕೊಂಡಿರುವ ಶೌಚಾಲಯವನ್ನು ಬಳಸಲು ಮುಂದಾಗುತ್ತಿಲ್ಲ. ಶೌಚಾಲಯ ಬಳಸುವಾಗ ಸಾಕಷ್ಟು ನೀರು ಬೇಕಾಗುತ್ತದೆ. ಕೆಲವು ಸಲ ಕುಡಿಯಲು ಸಮರ್ಪಕವಾಗಿ ನೀರು ಸಿಗುವುದಿಲ್ಲ ಇನ್ನು ಶೌಚಾಲಯಕ್ಕೆ ನೀರು ಎಲ್ಲಿಂದ ತರಬೇಕು ಎಂಬುದು ಕೆಲ ಜನರ ವಾದವಾಗಿದೆ.
ಗ್ರಾಮಗಳಲ್ಲಿರುವ ಬಯಲು ಶೌಚಾಲಯಗಳನ್ನು ತೆರವುಗೊಳಿಸಿ ಶೌಚಾಲಯ ಬಳಸುವಂತೆ ಜನರಿಗೆ ತಿಳಿ ಹೇಳಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.
ವಿಫಲವಾದ ಯೋಜನೆ
ರೋಣ: ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ರೋಣ ನಗರ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಅಧಿಕಾರಿಗಳು ಶೌಚಾಲಯ ನಿರ್ಮಿಸದೇ ದುಡ್ಡು ಪೋಲು ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಹೆಸರಿಗೆ ಮಾತ್ರ ಬಯಲು ಶೌಚ ಮುಕ್ತ ಎಂದು ಹಲವು ಗ್ರಾಮಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಇಂದಿಗೂ ಬಹುತೇಕ ಜನರು ಶೌಚಕ್ಕೆ ರಸ್ತೆ, ಮುಳ್ಳಿನ ಕಂಟಿ, ಹೊಲದ ಬದುವು, ತೆಗ್ಗುಗಳನ್ನು ಆಶ್ರಯಿಸಿದ್ದಾರೆ.
ಜಾಲಿ ಮುಳ್ಳಿನ ಆಸರೆ
ಶಿರಹಟ್ಟಿ: ಪಟ್ಟಣ ಹಾಗೂ ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳ ಜನ ಈಗಲೂ ನಿತ್ಯ ಕರ್ಮಕ್ಕೆ ಪೊದೆ, ಪಾಳು ಹೊಂಡ, ಬತ್ತಿದ ಕೆರೆಗಳು ಮತ್ತು ಜಾಲಿ ಮುಳ್ಳಿನ ಮರೆಯನ್ನೇ ಆಶ್ರಯಿಸಿದ್ದಾರೆ.
ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ 17ಕ್ಕೂ ಹೆಚ್ಚು ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಇವುಗಳನ್ನು ಯಾವ ಉದ್ದೇಶಕ್ಕೆ ನಿರ್ಮಿಸಲಾಗಿದೆಯೋ ಆ ಉದ್ದೇಶ ಇನ್ನೂ ಈಡೇರಿಲ್ಲ. ನೀರಿನ ಕೊರತೆಯಿಂದ ಹಲವೆಡೆ ಶೌಚಾಲಯಗಳು ಪಾಳು ಬಿದ್ದಿರುವುದು ಸ್ಥಳೀಯ ಆಡಳಿತದ ವೈಫಲ್ಯಕ್ಕೆ ನಿದರ್ಶನ ಎಂಬುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮುದಾಯ ಶೌಚಾಲಯಗಳ ಉದ್ಘಾಟನೆ ಸಂದರ್ಭದಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು. ನಂತರ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡಿದೆ. ಪಟ್ಟಣದ ಗ್ರಂಥಾಲಯದ ಹಿಂದಿರುವ ಶೌಚಾಲಯ ಗಿಡಗಂಟಿಗಳಿಂದ ಆವೃತಗೊಂಡಿದ್ದು, ಶೌಚಾಲಯಕ್ಕೆ ಹೋಗಲು ದಾರಿಯೇ ಇಲ್ಲದಂತಾಗಿದೆ. ಇದರಿಂದಾಗಿ ಈ ಜಾಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಪಟ್ಟಣದ ಉರ್ದು ಶಾಲೆ ಹಿಂಬದಿ ಇರುವ ಶೌಚಾಲಯ ಪಾಳು ಕೊಂಪೆಯಾಗಿ ಬದಲಾಗಿರುವುದು ದುರಂತವೇ ಸರಿ ಎಂದು ಸ್ಥಳೀಯ ನಿವಾಸಿ ಗುಲಾಬಷ್ಯಾ ಮಕಾನದಾರ, ಮಲ್ಲಿಕಾರ್ಜುನ, ಸಲ್ಮಾನ್, ಚನ್ನಬಸಪ್ಪ ಸಜ್ಜನ ಆಕ್ರೋಶ ವ್ಯಕ್ತಪಡಿಸಿದರು.
ಸಾಕಾರಗೊಳ್ಳದ ಗುರಿ
ನರೇಗಲ್: ಸ್ಥಳೀಯ ಪಟ್ಟಣ ಹಾಗೂ ಹೋಬಳಿಯ ವಿವಿಧ ಗ್ರಾಮಗಳನ್ನು ಬಯಲು ಶೌಚ ಮುಕ್ತ ಗ್ರಾಮ ಹಾಗೂ ವಾರ್ಡ್‌ಗಳು ಎಂದು ಘೋಷಿಸಿದ್ದಾರೆ. ಆದರೆ, ಇಲ್ಲೆಲ್ಲಿಯೂ ಬಯಲು ಶೌಚ ಮುಕ್ತವಾಗಿಲ್ಲ ಎಂಬುದು ವಾಸ್ತವದ ಸಂಗತಿಯಾಗಿದೆ.
ಅದರಲ್ಲೂ ಮಹಿಳೆಯರು ಅನಿವಾರ್ಯವಾಗಿ ಬಯಲನ್ನೇ ಆಶ್ರಯಿಸಿ ಪ್ರತಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಸರ್ಕಾರದ ಯೋಜನೆ ಅಡಿ ಹಣ ಪಡೆದುಕೊಂಡಿದ್ದರೂ ಸಹ ಜನರು ಶೌಚಾಲಯ ನಿರ್ಮಾಣ ಮಾಡಿಕೊಂಡಿಲ್ಲ. ಈ ಕಾರಣದಿಂದಾಗಿ ಶೌಚಕ್ಕೆ ಹೋಗಬೇಕಾದರೆ ಸೂರ್ಯೋದಯಕ್ಕೆ ಮುನ್ನ ಇಲ್ಲದಿದ್ದರೆ ಸೂರ್ಯಾಸ್ತದ ನಂತರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಜನೆಯ ದುರುಪಯೋಗ
ಡಂಬಳ: ಸರ್ಕಾರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ₹15 ಸಾವಿರ ಹಾಗೂ ಸಾಮಾನ್ಯ ವರ್ಗದವರಿಗೆ ₹12 ಸಾವಿರ ನೀಡುತ್ತದೆ. ಬಹುತೇಕ ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದರೂ ಶೌಚಾಲಯ ಬಳಸದೇ, ಬಯಲು ಆಶ್ರಯಿಸಿದ್ದಾರೆ.
ಡಂಬಳ, ಡೋಣಿ, ಶಿಂಗಟರಾಯನಕೇರಿ ತಾಂಡ, ಮೇವುಂಡಿ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ, ಜಂತಲಿಶಿರೂರ ಸೇರಿದಂತೆ ಡಂಬಳ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮ ಪಂಚಾಯ್ತಿಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿದ್ದು, ಕೇವಲ ಕಡತಗಳಿಗೆ ಸೀಮಿತವಾಗಿವೆ.
ಈ ಹಳ್ಳಿಗಳ ವ್ಯಾಪ್ತಿಯಲ್ಲಿ ಸುಶಿಕ್ಷಿತ ಜನರು, ಗ್ರಾಮ ಪಂಚಾಯ್ತಿ ಹಾಲಿ ಸದಸ್ಯರು ಹಾಗೂ ಮಾಜಿ ಸದಸ್ಯರು ಆಯಾ ಗ್ರಾಮದ ಬಯಲು ಜಾಗ, ರಸ್ತೆ ಬದಿಯಲ್ಲೇ ಬಹಿರ್ದೆಸೆಗೆ ನಿತ್ಯ ಹೋಗುತ್ತಿರುವುದು ಯೋಜನೆಯ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತದೆ.
ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹೈಟೆಕ್ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಸಾಕಷ್ಟು ಬೇಡಿಕೆ ಇದೆ. ಸರ್ಕಾರ ಬಯಲು ಬಹಿರ್ದೆಸೆಗೆ ಸಾಕಷ್ಟು ಆದ್ಯತೆ ನೀಡಿದೆ. ಅನುದಾನವೂ ಇದೆ. ಆದರೆ, ಯೋಜನೆ ಮಾತ್ರ ಯಶಸ್ವಿಯಾಗುತ್ತಿಲ್ಲ. ಯೋಜನೆಯ ಯಶಸ್ಸಿಗೆ ಜನಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಬರದೂರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಮಾರುತಿ ಹೊಸಮನಿ, ಡಂಬಳದ ಮುತ್ತು ಮಠದ, ಮಂಜುನಾಥ ಬಿಸನಳ್ಳಿ.
ಪ್ರಜಾವಾಣಿ ತಂಡ: ಕೆ.ಎಂ.ಸತೀಶ್ ಬೆಳ್ಳಕ್ಕಿ, ಡಾ. ಬಸವರಾಜ ಹಲಕುರ್ಕಿ, ಕಾಶೀನಾಥ ಬಿಳಿಮಗ್ಗದ, ಶ್ರೀಶೈಲ ಎಂ. ಕುಂಬಾರ, ಖಲೀಲಅಹ್ಮದ ಶೇಖ, ಚಂದ್ರ ಎಂ.ರಾಥೋಡ್, ಲಕ್ಷ್ಮಣ ಎಚ್.ದೊಡ್ಡಮನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.