ADVERTISEMENT

ಗದಗ | ಹೆಸರು ಬೆಲೆ ನಿಗದಿ: ದಲ್ಲಾಳಿ ಆಟಕ್ಕೆ ರೈತ ಸುಸ್ತು

ಬೆಂಬಲ ಬೆಲೆ ಅಡಿ ಹೆಸರು ಖರೀದಿ ಮಾಡುವಂತೆ ಆದೇಶ; ರೈತರಿಗಿಂತ ವರ್ತಕರಿಗೇ ಹೆಚ್ಚು ಲಾಭ– ಆರೋಪ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 26 ಆಗಸ್ಟ್ 2024, 5:47 IST
Last Updated 26 ಆಗಸ್ಟ್ 2024, 5:47 IST
ಗದಗ ಎಪಿಎಂಸಿಯಲ್ಲಿ ಹೆಸರು ಮಾರಾಟಕ್ಕೆ ಬಂದಿದ್ದ ರೈತರು
ಗದಗ ಎಪಿಎಂಸಿಯಲ್ಲಿ ಹೆಸರು ಮಾರಾಟಕ್ಕೆ ಬಂದಿದ್ದ ರೈತರು   

ಗದಗ: ಜಿಲ್ಲೆಯ ಪ್ರಮುಖ ಬೆಳೆಯಾದ ಹೆಸರು ಈ ಬಾರಿ 1.31 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಮಳೆ ಕೂಡ ಚೆನ್ನಾಗಿ ಆಗಿದ್ದರಿಂದ ಉತ್ತಮ ಇಳುವರಿ ಸಿಕ್ಕಿದೆ. ಆದರೆ, ಹೆಸರುಕಾಳಿಗೆ ಬೆಲೆ ಸಿಗದೇ ರೈತರು ತೊಂದರೆ ಅನುಭವಿಸುವಂತಾಗಿದೆ.

ಜಿಲ್ಲೆಯ ಬಹುತೇಕ ರೈತರು ಪೂರ್ವ ಮುಂಗಾರಿನಿಂದಲೇ ಹೆಸರು ಬಿತ್ತನೆ ಮಾಡಿದ್ದರು. ಉಳಿದ ಕೆಲವರು ಮುಂಗಾರು ಆರಂಭಗೊಂಡ ನಂತರ ಹೆಸರು ಬಿತ್ತಿದ್ದರು. ಜಿಟಿಜಿಟಿ ಮಳೆ, ತುಂತುರು ಮಳೆ ಹೆಸರು ಬೆಳೆಗೆ ಉತ್ತಮ ಕಸುವು ನೀಡಿತು. ರೈತರ ಹೊಲದಲ್ಲಿ ಹೆಸರಿನ ಹಸಿರು ನಳನಳಿತು. ಗಿಡದಲ್ಲಿ ಗಟ್ಟಿಕಾಳು ಕಟ್ಟಿದವು. ಈಚೆಗೆ ಕೆಲವು ದಿನಗಳಿಂದ ಹೆಸರು ಕಟಾವು ಆರಂಭಗೊಂಡಿದ್ದು, ಮಾರುಕಟ್ಟೆಗೆ ದೊಡ್ಡ ಮಟ್ಟದಲ್ಲಿ ಹೆಸರುಕಾಳಿನ ಆವಕ ಆಗುತ್ತಿದೆ. ಆದರೆ, ಹೆಸರುಕಾಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಬೆಲೆ ಸಿಗುತ್ತಿಲ್ಲ. ಇದರ ನಡುವೆ ದಲ್ಲಾಳಿಗಳ ‘ಬೆಲೆ ನಿಗದಿ’ ಆಟ ರೈತರನ್ನು ಸುಸ್ತಾಗಿಸಿದೆ.

ಒಬ್ಬೊಬ್ಬ ರೈತರು ಕನಿಷ್ಠ 5ರಿಂದ ಗರಿಷ್ಠ 40 ಎಕರೆಯಲ್ಲಿ ಹೆಸರು ಬೆಳೆದಿದ್ದಾರೆ. ಬಿತ್ತನೆ, ಕಳೆ ಕೀಳುವುದು, ಕ್ರಿಮಿನಾಶಕ ಸಿಂಪಡಣೆ ಸೇರಿದಂತೆ ಬೆಳೆ ಕಟಾವು ಆಗಿ ಮಾರುಕಟ್ಟೆಗೆ ತರುವ ವೇಳೆಗೆ ಪ್ರತಿಯೊಬ್ಬ ರೈತರು ಕೂಡ ಎಕರೆಗೆ ಕನಿಷ್ಠ ₹10 ಸಾವಿರದಿಂದ ಗರಿಷ್ಠ ₹15 ಸಾವಿರದವರೆಗೆ ಖರ್ಚು ಮಾಡಿದ್ದಾರೆ. ಒಳ್ಳೆ ಇಳುವರಿ ಸಿಕ್ಕರೆ ಎಕರೆಗೆ ಆರು ಚೀಲ ಹೆಸರುಕಾಳು ಸಿಗುತ್ತದೆ. ಆದರೆ, ರೈತರಿಗೆ ಜಿಲ್ಲೆಯ ಎಪಿಎಂಸಿಗಳಲ್ಲಿ ₹4 ಸಾವಿರದಿಂದ ₹6 ಸಾವಿರದವರೆಗೆ ಮಾತ್ರ ಬೆಲೆ ಸಿಗುತ್ತಿದೆ. ಗುಣಮಟ್ಟ ಕಡಿಮೆ ಇರುವ ಹೆಸರುಕಾಳಿಗೆ ₹3,500ಕ್ಕಿಂತಲೂ ಕಡಿಮೆ ಬೆಲೆ ನಿಗದಿ ಆಗುತ್ತಿದೆ. ಇಷ್ಟು ಬೆಲೆ ಸಿಕ್ಕರೆ ಹಾಕಿದ ಖರ್ಚು, ಶ್ರಮಕ್ಕೆ ಬೆಲೆ ಸಿಗುವುದಾದರೂ ಹೇಗೆ ಎಂದು ರೈತರು ಚಿಂತೆಗೀಡಾಗಿದ್ದಾರೆ.

ADVERTISEMENT

ರೋಣ ತಾಲ್ಲೂಕಿನ ಬೆಳವಣಿಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಸರುಕಾಳು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ರಸ್ತೆಯಲ್ಲಿ ಒಣಗಲು ಹಾಕಿದ ಹೆಸರುಕಾಳು ತುಂತುರು ಮಳೆಗೆ ಸಿಲುಕಿ ಮೊಳಕೆ ಬಂದು, ಕಪ್ಪಾಗುತ್ತಿದೆ. ಒಂದು ತಿಂಗಳಿಂದ ಜಿಲ್ಲೆಯಲ್ಲಿ ಮಳೆ ಆಗುತ್ತಿರುವ ಕಾರಣ ಹೆಸರು ಬೆಳೆಗೆ ಹೆಚ್ಚು ತೇವಾಂಶವಾಗಿ ಇಳುವರಿ ಕುಂಠಿತಗೊಂಡಿದೆ. ಜತೆಗೆ ತುಂಗಭದ್ರಾ ಹಾಗೂ ಮಲಪ್ರಭಾ ನದಿ, ಬೆಣ್ಣೆ ಹಳ್ಳದ ಪ್ರವಾಹದಿಂದ ರೈತರ ಬೆಳೆ ಹಾಳಾಗಿದೆ. ಅಳಿದುಳಿದ ಹೆಸರು ಬೆಳೆ ಕಟಾವು ಮಾಡಿಕೊಂಡು ರೈತರು ಬೆಳೆಯನ್ನು ಎಪಿಎಂಸಿಗೆ ತಂದರೆ ಯೋಗ್ಯ ಬೆಲೆ ಸಿಗುತ್ತಿಲ್ಲ. ದಲ್ಲಾಳಿಗಳು ಕ್ವಿಂಟಲ್‌ಗೆ ₹4 ಸಾವಿರದಿಂದ ₹5 ಸಾವಿರಕ್ಕೆ ಕೇಳುತ್ತಿದ್ದಾರೆ. ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಬೆಳೆ ಖರೀದಿ ಕೇಂದ್ರಗಳು ಸಕಾಲದಲ್ಲಿ ಆರಂಭಗೊಳ್ಳದ ಕಾರಣ ಅನೇಕ ರೈತರು ಹಣದ ಅಡಚಣೆಯಿಂದ ಈಗಾಗಲೇ ಹೆಸರುಕಾಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ.

ಹೆಸರು ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ಕಳೆದ ಮೂರು ವಾರಗಳಿಂದ ಹೆಸರು ಬೆಳೆಗಾರರು ಒತ್ತಾಯಿಸುತ್ತಲೇ ಇದ್ದಾರೆ. ಈಗಾಗಲೇ ಹೆಸರು ಬೆಳೆ ಮಾರಾಟಕ್ಕೆ ಬರುತ್ತಿದೆ. ಆದರೆ ಖರೀದಿ ಇನ್ನೂ ಆರಂಭ ಆಗದೆ ಇರುವುದರಿಂದ ವ್ಯಾಪಾರಸ್ಥರು ಕೇಳಿದ ಬೆಲೆಗೆ ರೈತರು ಫಸಲು ಮಾರುವಂತಾಗಿದೆ.

₹3 ಸಾವಿರದಿಂದ ಹಿಡಿದು ಗುಣಮಟ್ಟದ ಹೆಸರು ₹7 ಸಾವಿರದವರೆಗೆ ಮಾರಾಟವಾಗುತ್ತಿದೆ. ಸರ್ಕಾರ ₹8,682 ಬೆಂಬಲ ಬೆಲೆ ಘೋಷಿಸಿದೆ. ಆದರೆ, ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ. ಈಗಾಗಲೇ ಶೇ 40ರಿಂದ ಶೇ 70ರಷ್ಟು ರೈತರು ಹೆಸರು ಮಾರಿದ್ದಾರೆಂಬ ಮಾಹಿತಿ ಇದೆ.

‘ಕಳೆದ ಎರಡು ಮೂರು ದಿನಗಳ ಹಿಂದೆ ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ಕೇಂದ್ರ ಶುರುವಾದರೆ ಉಳಿದ ರೈತರಿಗಾದರೂ ಸ್ವಲ್ಪ ಲಾಭ ಆಗುತ್ತದೆ. ಇಲ್ಲದಿದ್ದರೆ ಅವರಿಗೆ ಬಹಳಷ್ಟು ನಷ್ಟ ಉಂಟಾಗುತ್ತದೆ.
ಆದಕಾರಣ ಬೇಗ ಹೆಸರು ಖರೀದಿ ಕೇಂದ್ರ ಆರಂಭಿಸಿ ಬೆಳೆಗಾರರ ಹಿತ ಕಾಪಾಡಬೇಕು’ ಎಂದು ಲಕ್ಷ್ಮೇಶ್ವರದ ಪ್ರಗತಿಪರ ರೈತ ಬಸವರಾಜ ಬೆಂಡಿಗೇರಿ ಆಗ್ರಹಿಸಿದ್ದಾರೆ.

ಪೂರಕ ಮಾಹಿತಿ: ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್‌.ಹಣಗಿ, ಬಸವರಾಜ ಹಲಕುರ್ಕಿ, ಶ್ರೀಶೈಲ ಎಂ.ಕುಂಬಾರ.

ಗುಣಮಟ್ಟದ ಹೆಸರುಕಾಳು
ಹೆಸರು ಬೆಳೆಯ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಈಗಾಗಲೇ ಹೋರಾಟ ಮಾಡಲಾಗಿದೆ. ಖರೀದಿ ಕೇಂದ್ರ ತೆರೆಯಲು ಸರ್ಕಾರ ಸಮ್ಮತಿಸಿದ್ದು ತಾಲ್ಲೂಕಿನ ಎರಡು ಹೋಬಳಿಗಳಲ್ಲಿ ತಕ್ಷಣ ಖರೀದಿ ಕೇಂದ್ರ ಆರಂಭಿಸಬೇಕು
ಶಿವಾನಂದ ಇಟಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುಂಡರಗಿ
ಅಗತ್ಯ ವಿದ್ದಾಗ ಬೆಂಬಲ ಬೆಲೆ ಕೇಂದ್ರ ಸ್ಥಾಪಿಸದೇ ರೈತರು ತಮ್ಮ ಫಸಲನ್ನು ಮಾರಿದ ಮೇಲೆ ವರ್ತಕರ ಹಿತಾಸಕ್ತಿಗೆ ಖರೀದಿ ಕೇಂದ್ರ ತೆರೆಯುವ ಸರ್ಕಾರದ ಕ್ರಮ ಖಂಡನೀಯ. ಆದ್ದರಿಂದ ಬೆಂಬಲ ಬೆಲೆ ಯೋಜನೆ ಅಡಿ ಶಾಶ್ವತ ಹೆಸರು ಬೆಳೆ ಖರೀದಿ ಕೇಂದ್ರ ಸ್ಥಾಪಿಸಬೇಕು
ವೀರೇಶ ಸೊಬರದಮಠ ಅಧ್ಯಕ್ಷರು ರೈತ ಸೇನೆ ನರಗುಂದ
ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಲ್‌ ಖರೀದಿ
ಮುಂಗಾರು ಹಂಗಾಮಿನ ಪ್ರಮುಖ ಬೆಳೆ ಹೆಸರು ಕಟಾವು ಪ್ರಾರಂಭವಾಗಿ ಸುಮಾರು ದಿನಗಳಾಗಿವೆ. ತಕ್ಷಣವೇ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ತೆರೆಯಲು ಕ್ರಮವಹಿಸಬೇಕು ಎಂದು ಆಗ್ರಹಿಸಿ ರೈತರು ರೈತ ಸಂಘಟನೆಗಳು ಕನಿಷ್ಠ ಒಂದು ಒಂದೂವರೆ ತಿಂಗಳಿಂದ ಹೋರಾಟ ಮನವಿಗಳನ್ನು ಮಾಡುತ್ತಲೇ ಬಂದಿದ್ದರು.  ಇದರ ನಡುವೆ ಹಣದ ಅಡಚಣೆಯ ಕಾರಣದಿಂದಾಗಿ ರೈತರು ತಾವು ಬೆಳೆದ ಮುಕ್ಕಾಲು ಪಾಲು ಹೆಸರುಕಾಳನ್ನು ಈಗಾಗಲೇ ಮಾರಾಟ ಮಾಡಿದ್ದಾರೆ.  ಆದರೆ ಸರ್ಕಾರ ಬೆಂಬಲ ಬೆಲೆ ಅಡಿ ಹೆಸರು ಖರೀದಿ ಮಾಡುವಂತೆ ಹೇಳಿ ಸರ್ಕಾರ ಆಗಸ್ಟ್‌ 24ರಂದು ಆದೇಶಿಸಿದೆ. ಪ್ರತಿ ಎಕರೆಗೆ ಎರಡು ಕ್ವಿಂಟಲ್‌ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಲ್‌ ಖರೀದಿ ಪ್ರಮಾಣ ನಿಗದಿಪಡಿಸಿ ಹೆಚ್ಚಿನ ರೈತರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದೆ. ಈ ಆದೇಶ ಹೊರಡಿಸಿ ಮೂರು ದಿನಗಳೊಳಗಾಗಿ ಖರೀದಿ ಕೇಂದ್ರಗಳನ್ನು ತೆರೆದು ನೋಂದಣಿ ಕಾರ್ಯ ಪ್ರಾರಂಭಿಸುವಂತೆ ಸೂಚನೆ ನೀಡಿದೆ. ಹೆಸರುಕಾಳು ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಹೆಸರುಕಾಳು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯಲ್ಲಿ ದುರುಪಯೋಗ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಷರತ್ತಿನಲ್ಲಿ ಸೂಚಿಸಿದೆ. ‘ಆದರೆ ಹೆಚ್ಚಾನು ಹೆಚ್ಚು ರೈತರು ಈಗಾಗಲೇ ತಮ್ಮ ಬೆಳೆಯನ್ನು ವರ್ತಕರಿಗೆ ಮಾರಿರುವುದರಿಂದ ಇದರ ಹೆಚ್ಚಿನ ಲಾಭ ಅವರಿಗೆ ಸಿಗುತ್ತದೆ’ ಎಂದು ರೈತರು ದೂರಿದ್ದಾರೆ.
ಈಗಾಗಲೇ ಶೇ 70ರಷ್ಟು ಬೆಳೆ ಮಾರಾಟ
ಮುಂಡರಗಿ: ತಾಲ್ಲೂಕಿನ ಡಂಬಳ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ರೈತರು ಸಾಕಷ್ಟು ಪ್ರಮಾಣದಲ್ಲಿ ಹೆಸರು ಬಿತ್ತನೆ ಮಾಡಿದ್ದು ಶೇ 70ರಷ್ಟು ರೈತರು ಈಗಾಗಲೇ ಹೆಸರು ಬೆಳೆಯನ್ನು ಕೊಯ್ಲು ಮಾಡಿ ಮಾರಾಟ ಮಾಡಿದ್ದಾರೆ. ಬೆಳೆಯನ್ನು ಸಂಗ್ರಹಿಸಿ ಇಟ್ಟರೆ ಕೆಡುತ್ತದೆ ಮತ್ತು ಖರ್ಚಿಗೆ ಕಾಸಿಲ್ಲದಂತಾಗುತ್ತದೆ ಎನ್ನುವ ಕಾರಣದಿಂದ ಬಹುತೇಕ ರೈತರು ತುಂಬಾ ಕಡಿಮೆ ಬೆಲೆಗೆ ತಮ್ಮ ಫಸಲನ್ನು ಮಾರಾಟ ಮಾಡಿದ್ದಾರೆ. ಆ.24ರಂದು ಸ್ಥಳೀಯ ಮಾರುಕಟ್ಟೆಯಲ್ಲಿ ಹೆಸರು ಬೆಳೆ ಕನಿಷ್ಠ ₹2080 ಗರಿಷ್ಠ ₹8075 ಮಾರಾಟವಾಗಿದೆ. ಗರಿಷ್ಠ ಬೆಲೆಗೆ ಮಾರಾಟವಾಗುವ ಫಸಲಿನ ಪ್ರಮಾಣ ತುಂಬಾ ಕಡಿಮೆ ಇದ್ದು ಬಹುತೇಕ ರೈತರು ₹4 ಸಾವಿರದಿಂದ ₹5ಸಾವಿರಕ್ಕೆ ಕ್ವಿಂಟಲ್ ಹೆಸರು ಮಾರಾಟ ಮಾಡುತ್ತಾರೆ. ಸಾಲ ಸೋಲ ಮಾಡಿ ಬಿತ್ತಿದ ಹೆಸರಿಗೆ ಸಮರ್ಪಕವಾಗಿ ಬೆಲೆ ದೊರೆಯದ್ದರಿಂದ ಬಹುತೇಕ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗುತ್ತದೆ. ರೈತರು ತಮ್ಮ ಬೆಳೆಯನ್ನು ಕನಿಷ್ಠ ದರಕ್ಕೆ ಮಾರಾಟ ಮಾಡುವ ಪೂರ್ವದಲ್ಲಿ ಸರ್ಕಾರ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಹೆಸರು ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಮತ್ತು ಪಟ್ಟಣದಲ್ಲಿ ಹೆಸರು ಬೆಳೆ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಈಗಾಗಲೇ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಈವರೆಗೂ ಹೆಸರು ಬೆಳೆಯ ಖರೀದಿ ಕೇಂದ್ರ ತೆರೆಯದೆ ರೈತರಿಗೆ ಪಯಕ್ತಪಡಿಸಿದ್ದಾರೆ.
ಸಕಾಲಕ್ಕೆ ಆರಂಭವಾಗದ ಬೆಂಬಲ ಬೆಲೆ ಹೆಸರು ಖರೀದಿ ಕೇಂದ್ರ: ರೈತರ ಬೇಸರ
ನರಗುಂದ: ತಾಲ್ಲೂಕಿನಲ್ಲಿ ಮುಂಗಾರು ಪ್ರಮುಖ ವಾಣಿಜ್ಯ ಬೆಳೆ ಹೆಸರು ಬಿತ್ತನೆಯಾಗಿ ಈಗ ಕಟಾವು ಯಂತ್ರದ ಮೂಲಕ ರಾಶಿ ನಡೆಯುತ್ತಿದೆ. ಆದರೆ ಇಲ್ಲೀವರೆಗೆ ಜಿಲ್ಲಾಡಳಿತ ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಬೆಳೆ ಖರೀದಿ ಕೇಂದ್ರವನ್ನು ತೆರೆದಿಲ್ಲ. ಇದು ರೈತರ ಬೇಸರಕ್ಕೆ ಕಾರಣವಾಗಿದೆ. ಅದರಲ್ಲೂ ಈ ಸಲ ನಿರಂತರ ಮಳೆಯಿಂದ ಬೆಳೆ ಹಾನಿ ಹಾಗೂ ರೋಗದ ಪರಿಣಾಮ ಸರಿಯಾದ ಇಳುವರಿ ಬಂದಿಲ್ಲ. ಬಂದ ಬೆಳೆಗೂ ಮಾರುಕಟ್ಟೆಯಲ್ಲಿ ಸರಿಯಾಗಿ ದರವೂ ಇಲ್ಲ.ಇದರಿಂದ ರೈತರು ಹೆಸರು ಬೆಳೆದು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೆಸರಿನ ಬೆಂಬಲ ಬೆಲೆ ₹8682 ಇದೆ. ಆದರೆ ಮಾರುಕಟ್ಟೆಯಲ್ಲಿ ₹5500 ದಿಂದ ₹7000ಕ್ಕೆ ಮಾತ್ರ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಖರ್ಚು ಮಾಡಿದ ಹಣವೂ ದೊರೆಯದಂತಾಗಿದೆ. ತಾಲ್ಲೂಕಿನಲ್ಲಿ 12500 ಹೆಕ್ಟೇರ್ ಹೆಸರು ಬಿತ್ತನೆಯಾಗಿದೆ. ಈಗ ಅದನ್ನು ಕಟಾವು ಮಾಡಿ ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಿದೆ. ಮಳೆಯೂ ಜೋರಾಗಿದೆ. ಆದ್ದರಿಂದ ಕೂಡಲೇ ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಬೆಳೆ ಖರೀದಿ ಕೇಂದ್ರವನ್ನು ತೆರೆಯಬೇಕು. ಇದು ವಿಳಂಬವಾದರೆ ಬೆಂಬಲ ಬೆಲೆ ಕೇಂದ್ರದ ಲಾಭವನ್ನು ದಲ್ಲಾಳಿಗಳು ವರ್ತಕರು ಪಡೆಯುವಲ್ಲಿ ಯಾವುದೇ ಸಂಶಯವಿಲ್ಲ. ಕಡಿಮೆ ಬೆಲೆಗೆ ತೆಗೆದುಕೊಂಡು ರೈತರನ್ನು ಶೋಷಿಸುವ ವರ್ತಕರು ಬೆಂಬಲ ಬೆಲೆ ಪಡೆಯಲು ಅದೇ ರೈತರ ಪಹಣಿ ಪಡೆದು ಸರ್ಕಾರಕ್ಕೆ ಹೆಸರು ಮಾರಿ ದುಪ್ಪಟ್ಟು ಲಾಭ ಪಡೆಯುವುದು ನಿಶ್ಚಿತ ಎಂದು ರೈತರು ದೂರಿದ್ದಾರೆ.
ನಿರಂತರ ಮಳೆಗೆ ಕುಸಿದ ಇಳುವರಿ
ಗಜೇಂದ್ರಗಡ: ತಾಲ್ಲೂಕಿನಲ್ಲಿ 18516  ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದ್ದು ಈಗಾಗಲೇ ಶೇ75ರಷ್ಟು ಕಟಾವು ಮುಗಿದಿದ್ದು ಸರ್ಕಾರದಿಂದ ಹೆಸರು ಖರೀದಿಸುವ ಖರೀದಿ ಕೇಂದ್ರಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಬಹುತೇಕ ರೈತರು ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ತಮ್ಮ ಹೆಸರಿನ ಫಸಲನ್ನು ದಲ್ಲಾಳಿಗಳ ಮೂಲಕ ಮಾರಾಟ ಮಾಡಿದ್ದಾರೆ. ನಿರಂತರ ಮಳೆ ಮೋಡ ಕವಿದ ವಾತಾವರಣದಿಂದ ಸಾಕಷ್ಟು ಪ್ರಮಾಣದಲ್ಲಿ ಹೆಸರಿನ ಬೆಳೆ ಹಾಳಾಗುವುದರ ಜೊತೆಗೆ ಕಟಾವು ಮಾಡಲು ಅಡ್ಡಿಯುಂಟು ಮಾಡಿತ್ತು. ಹೆಚ್ಚಿನ ರೈತರು ಸಾಂಪ್ರದಾಯಿಕ ಕಟಾವು ಮಾಡುವ ಬದಲು ಬೃಹತ್ ಯಂತ್ರಗಳ ಮೂಲಕ ಫಸಲು ಕಟಾವು ಮಾಡಿದ್ದಾರೆ. ಇದರಿಂದ ಹೆಸರಿನ ಕಾಳು ಹೊಳಪು ಕಳೆದುಕೊಳ್ಳುವುದರ ಜೊತೆಗೆ ಕಸ-ಕಡ್ಡಿಗಳಿಂದ ಕೂಡಿರುತ್ತದೆ. ಅವುಗಳನ್ನು ಒಣಗಿಸಲು ಸ್ವಚ್ಛಗೊಳಿಸಲು ಸರಿಯಾಗಿ ಬಿಸಿಲು ಬೀಳದ ಕಾರಣ ರೈತರು ಕಟಾವು ಮಾಡಿದ ತಕ್ಷಣ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿದ್ದಾರೆ. ಗಜೇಂದ್ರಗಡ ಎಪಿಎಂಸಿಗೆ ಆರಂಭದಲ್ಲಿ ಪ್ರತಿದಿನ ಸುಮಾರು 4 ಸಾವಿರ ಚೀಲದಷ್ಟು ಹೆಸರು ಆವಕವಾಗುತ್ತಿತ್ತು. ಸದ್ಯ 300-400 ಚೀಲ ಆವಕವಾಗುತ್ತಿದೆ. ‘ಹೆಸರು ಬುಡ್ಡಿ ಬಿಡಿಸಿ ಒಣಗಿಸಿ ಮಿಷನ್ ಹಾಕಿಸುವಷ್ಟರಲ್ಲಿ ಫಸಲು ಮಾರಿ ಬರುವ ಹಣದಲ್ಲಿ ಅರ್ಧದಷ್ಟು ಕೂಲಿ ಕಾರ್ಮಿಕರ ಕೂಲಿ ಕೊಡಕ್ಬೇಕಾಗುತ್ತದೆ. ಹೀಗಾಗಿ ಬಂದಷ್ಟು ಬರಲಿ ಎಂದು ಕಟಾವು ಮಿಷನ್ ನಿಂದ ರಾಶಿ ಮಾಡಿಸಿದ್ದೇವೆ. ಇದರಿಂದ ಮಾರುಕಟ್ಟೆಯಲ್ಲಿ ಸ್ವಲ್ಪ ಕಡಿಮೆ ಬೆಲೆ ಸಿಕ್ಕಿದೆ. ಆದರೆ ಕೂಲಿ ಕಾರ್ಮಿಕರ ಖರ್ಚು ಹಾಗೂ ಸಮಯ ಉಳಿತಾಯವಾಗಿದೆ’ ಎನ್ನುತ್ತಾರೆ ಕೊಡಗನೂರ ಗ್ರಾಮದ ರೈತ ರೇಣುಕಯ್ಯ ಅಂಗಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.