ADVERTISEMENT

ನರಗುಂದ: ಹದಗೆಟ್ಟ ಎನ್ಎಚ್‌ಟಿ ಮಿಲ್ ಕಾಲೊನಿ ರಸ್ತೆ

ಶೀಘ್ರ ರಸ್ತೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆ– ಸಾರ್ವಜನಿಕರಿಂದ ಎಚ್ಚರಿಕೆ

ಬಸವರಾಜ ಹಲಕುರ್ಕಿ
Published 27 ಸೆಪ್ಟೆಂಬರ್ 2024, 4:23 IST
Last Updated 27 ಸೆಪ್ಟೆಂಬರ್ 2024, 4:23 IST
ನರಗುಂದ ಎನ್ಎಚ್‌ಟಿ ಮಿಲ್ ಕಾಲೊನಿ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಸಂಚಾರಕ್ಕೆ ಪರದಾಡುತ್ತಿರುವ ದೃಶ್ಯ
ನರಗುಂದ ಎನ್ಎಚ್‌ಟಿ ಮಿಲ್ ಕಾಲೊನಿ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಸಂಚಾರಕ್ಕೆ ಪರದಾಡುತ್ತಿರುವ ದೃಶ್ಯ   

ನರಗುಂದ: ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಹೊರಕೇರಿ ಓಣಿಯ ಎನ್ಎಚ್‌ಟಿ ಮಿಲ್ ಕಾಲೊನಿ ಹಾಗೂ ಟಿಎಪಿಸಿಎಂಎಸ್‌ಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ, ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ರಸ್ತೆ ಅವ್ಯವಸ್ಥೆಯಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಪುರಸಭೆಗೆ ತೆರಳುವ ಮುಖ್ಯರಸ್ತೆಯನ್ನು ಸಂಪರ್ಕಿಸುವ ರಸ್ತೆಯಿಂದ ಟಿಎಪಿಸಿಎಂಎಸ್‌, ಎಸ್‌ವೈಎಸ್ ಪದವಿ ಹಾಗೂ ಶಿಕ್ಷಣ ಮಹಾವಿದ್ಯಾಲಯ, ಹೆಸ್ಕಾಂನ ಗ್ರಿಡ್, ಎಂಪಿಎಸ್ ನಂ. 4 ಸರ್ಕಾರಿ ಶಾಲೆ, ಸಹಕಾರಿ ಇಲಾಖೆ ಕಚೇರಿ, ಎಂಎಸ್‌ಬಿಸಿ ಘಟಕ, ಈದ್ಗಾ ಮೈದಾನ, ಖಬರಸ್ತಾನಕ್ಕೆ ತೆರಳಲು ಈ ರಸ್ತೆ ಬಳಕೆಯಾಗುತ್ತದೆ. ಆದರೆ, ರಸ್ತೆ ಹದಗೆಟ್ಟಿರುವ ಪರಿಣಾಮ ಜನರ ಪರದಾಟ ಹೇಳತೀರದಾಗಿದೆ. ಅದರಲ್ಲೂ ಮಳೆಯಾದರೆ ಇಲ್ಲಿನ ಕೆಸರಿನ ಹೊಂಡದಂತಾಗಿ ಎಲ್ಲಿ ಪಾದವಿಡಬೇಕು ಎಂಬ ಗೊಂದಲ ಜನರಲ್ಲಿ ಮೂಡುತ್ತದೆ. ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸಲು ಅನುದಾನ ಬಿಡುಗಡೆ ಆಗಿದ್ದರೂ ಕಾಮಗಾರಿ ವಿಳಂಬವಾಗಿದೆ. ಆದರೆ, ತಾತ್ಕಾಲಿಕವಾದರೂ ದುರಸ್ತಿ ಮಾಡದೇ ರಸ್ತೆಗೆ ಕೆಂಪು ಮಣ್ಣು ಹಾಕಿರುವ ಪರಿಣಾಮ ಸಂಚಾರ ಮತ್ತಷ್ಟು ದುಸ್ತರವಾಗಿದೆ.

ಕಳೆದ ಎರಡು ದಿನ ಮಳೆ ಸುರಿದ ಪರಿಣಾಮ ಈ ರಸ್ತೆ ಸ್ಥಿತಿ ತೀವ್ರ ಹದಗೆಟ್ಟಿದೆ. ಪುರಸಭೆ ಆಡಳಿತ ಏನು ಮಾಡುತ್ತಿದೆ ಎಂದು ತಿಳಿಯದಾಗಿದೆ. ರಸ್ತೆ ನಿರ್ಮಾಣಕ್ಕೆ ಹಲವಾರು ಸಲ ಪುರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಎನ್ಎಚ್‌ಟಿ  ಮಿಲ್ ಕಾಲೊನಿ ರಸ್ತೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದು ಪ್ರಮುಖ ರಸ್ತೆಯಾಗಿದ್ದು, ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ದಿನನಿತ್ಯ ಪರದಾಡುವಂತಾಗಿದೆ. ಬೇಗನೆ ರಸ್ತೆ ನಿರ್ಮಿಸಬೇಕು. ಇಲ್ಲವಾದರೆ ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಇಲ್ಲಿನ ನಿವಾಸಿಗಳು ಎಚ್ಚರಿಸಿದ್ದಾರೆ.

ನರಗುಂದ ಎನ್ಎಚ್‌ಟಿ ಮಿಲ್ ಕಾಲೊನಿ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಖಬರಸ್ತಾನಕ್ಕೆ ತೆರಳಲು ಹರಸಾಹಸ ಪಡುತ್ತಿರುವ ದೃಶ್ಯ.
ಎನ್ಎಚ್‌ಟಿ ಮಿಲ್ ಕಾಲೊನಿ ರಸ್ತೆ ಸಂಪರ್ಕಿಸುವ ರಾಟಿ ಬಾವಿ ಕೆರೆ ತೋಟದ ಕೆರೆ ರಸ್ತೆಯನ್ನು ನಗರೋತ್ಥಾನ ಯೋಜನೆಯಡಿ ಕಾಮಗಾರಿ ನಡೆಸಲಾಗುತ್ತಿದೆ. ಅನುದಾನದ ಕೊರತೆ ಪರಿಣಾಮ ಕಾಮಗಾರಿ ವಿಳಂಬವಾಗಿದೆ.
ಎಸ್.ಸಿ.ಹುಣಸಿಮರದ ಕಿರಿಯ ಎಂಜಿನಿಯರ್‌ ಪುರಸಭೆ ನರಗುಂದ
ಎನ್ಎಚ್‌ಟಿ ಮಿಲ್ ಕಾಲೊನಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆ ಬಂದರಂತೂ ಇಲ್ಲಿ ಸಂಚರಿಸದಂತಹ ಸ್ಥಿತಿ ಇದೆ. ರಸ್ತೆ ಅವಸ್ಥೆ ನೋಡಿ ಪುರಸಭೆಗೆ ನಿತ್ಯ ಶಪಿಸುವಂತಾಗಿದೆ. ಕೂಡಲೇ ರಸ್ತೆ ನಿರ್ಮಿಸಲು ಕ್ರಮವಹಿಸಬೇಕು
ಮಗುತಮಸಾಬ ಮುಲ್ಲಾನವರ ಕಾಲೊನಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.