ನರೇಗಲ್: ಹೋಬಳಿಯ ವಿವಿಧ ಗ್ರಾಮಗಳಲ್ಲಿನ ಹೊಲಗಳಲ್ಲಿ ಪವನ್ ವಿದ್ಯುತ್ ಕಂಬ ಅಳವಡಿಸುವ ಕಾಮಗಾರಿ ನಡೆಸಿರುವ ಬಹು ರಾಷ್ಟ್ರೀಯ ಪವನ ವಿದ್ಯುತ್ ಖಾಸಗಿ ಕಂಪನಿಯವರ ಅತಿ ಭಾರದ ವಾಹನಗಳು ನರೇಗಲ್-ಗಜೇಂದ್ರಗಡ ಮಾರ್ಗದ ರಸ್ತೆಬದಿ ಸಾಲುಗಟ್ಟಿ ನಿಂತಿರುವ ಕಾರಣ, ಇಕ್ಕಟ್ಟಿನ ರಸ್ತೆಯಲ್ಲಿ ಸಂಚಾರ ಮಾಡಲು ವಾಹನ ಸವಾರರು ಪರದಾಡುತ್ತಿರುವ ದೃಶ್ಯ ಮಂಗಳವಾರ ಕಂಡುಬಂದಿತು.
ನರೇಗಲ್ ಪಟ್ಟಣದಿಂದ ಗಜೇಂದ್ರಗಡ ಕಡೆಗೆ ಹೋಗುವಾಗ ಹೊಲವೊಂದರಲ್ಲಿ ಸ್ಥಾಪಿಸಲಾಗಿರುವ ಕಾಂಕ್ರೀಟ್ ಘಟಕದ ಸಮೀಪದ ರಸ್ತೆಯಿಂದ ಗಡ್ಡಿ ಹಳ್ಳದ ಸಮೀಪದ ನೀರಿನ ಟ್ಯಾಂಕ್‌ವರೆಗೆ ವಿಂಡ್ ಕಂಪನಿಯ ಅನೇಕ ವಾಹನಗಳು ಬೃಹತ್ ಆಕಾರದ ರೆಕ್ಕೆಗಳನ್ನು, ಕಂಬಗಳನ್ನು ಹೊತ್ತುಕೊಂಡು ನಿಂತಿವೆ. ರಸ್ತೆಯು ರಾಷ್ಟ್ರೀಯ ಹೆದ್ದಾರಿಯಷ್ಟು ಅಗಲವಾಗಿ ಇರದಿರುವ ಕಾರಣ ಕೇವಲ ಒಂದೇ ವಾಹನ ಸಂಚಾರ ಮಾಡುವಂತಾಗಿದೆ.
ಒಂದು ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್, ಲಾರಿ ಅಥವಾ ದೊಡ್ಡ ವಾಹನ ಬಂದರೆ ಇನ್ನೊಂದು ಕಡೆ ಇತರ ಯಾವುದೇ ವಾಹನ ಸಂಚಾರ ಮಾಡಲಾಗದಂತೆ ಬೃಹತ್ ರೆಕ್ಕೆಗಳನ್ನು ಹೊತ್ತುಕೊಂಡು ನಿಂತಿವೆ. ಆದ್ದರಿಂದ ಎಲ್ಲಾ ವಾಹನಗಳ ಚಾಲಕರು ಲೈಟ್ ಹಚ್ಚಿಕೊಂಡು ಶಬ್ದ ಮಾಡುತ್ತ ಹೋಗುತ್ತಿದ್ದಾರೆ. ರಾತ್ರಿಯಂತೂ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವಂತಾಗಿದೆ.
ಮೊದಲೇ ಕಿರಿದಾದ ರಸ್ತೆಯಲ್ಲಿ ಬೃಹತ್ ವಾಹನಗಳನ್ನು ಅಂದಾಜು ಏಳೆಂಟು ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಲ್ಲಿಸಿರುವ ಕಾರಣ ಎದುರಿನ ವಾಹನಕ್ಕೆ ದಾರಿಕೊಡಲು ತುಂಬಾ ತೊಂದರೆ ತೆಗದುಕೊಂಡೆವು ಎಂದು ಕ್ಯಾಂಟರ್ ಚಾಲಕ ಹೊನ್ನಪ್ಪ ಮಾದರ ಹೇಳಿದರು.
‘ವಿಂಡ್ ಕಂಪನಿಯವರು ತಮ್ಮ ವಾಹನಗಳನ್ನು ನಿಲ್ಲಿಸಲು ಅಲ್ಲಲ್ಲಿ ಸ್ಥಳ ನಿಗದಿ ಮಾಡಿಕೊಂಡಿದ್ದಾರೆ. ವಿಂಡ್ ರೆಕ್ಕೆ ಹೊತ್ತ ವಾಹನದ ಮುಂದೆ ಹಿಂದೆ ಎಸ್ಕಾರ್ಟ್ ವಾಹನಗಳ ಸಹಾಯದಿಂದ ಜನರಿಗೆ ತೊಂದರೆ ಆಗದಂತೆ ರಾತ್ರಿ ವೇಳೆ ಮಾತ್ರ ಸಂಚಾರ ಮಾಡುತ್ತಿದ್ದವು. ಬೆಳಗಾಗುವುದರ ಒಳಗೆ ತಮ್ಮ ಚಟುವಟಿಕೆಗಳನ್ನು ಪೂರ್ಣಗೊಳಿಸಿ ರೈತರಿಗೆ, ಸಾರ್ವಜನಿಕರಿಗೆ ಅನಕೂಲ ಮಾಡಿಕೊಡುತ್ತಿದ್ದವು. ಆದರೆ ಈಚೆಗೆ ಕಂಪನಿಯವರು ಹಗಲು ಹೊತ್ತಿನಲ್ಲಿಯೇ ಅಡ್ಡಾದಿಡ್ಡಿ ಸಂಚಾರ ಮಾಡುತ್ತಾರೆ. ಈಗಂತೂ ರಸ್ತೆಬದಿ ನಿಲ್ಲಿಸಿ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡಿ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಜನರಿಗೆ ತೊಂದರೆ ಆಗದಂತೆ ಕಾಮಗಾರಿ ಮಾಡುವಂತೆ ಎಚ್ಚರಿಕೆ ನೀಡಬೇಕು ಹಾಗೂ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗುತ್ತೇವೆ’ ಎಂದು ಜೈ ಭೀಮ್ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಮೈಲಾರಪ್ಪ ವೀ. ಚಳ್ಳಮರದ ಎಚ್ಚರಿಕೆ ನೀಡಿದರು.
ನರೇಗಲ್ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಬೆಂಗಳೂರಿಗೆ ಹೋಗದ್ದಾರೆ. ಹಾಗಾಗಿ ಗಜೇಂದ್ರಗಡ ಮಾರ್ಗದಲ್ಲಿ ಜನರ ಸಂಚಾರಕ್ಕೆ ಆಗಿರುವ ತೊಂದರೆ ಕುರಿತು ನೋಡಲಾಗುವುದುಶೇಖರ ಎಲ್. ಹೊಸಳ್ಳಿ ಎಎಸ್‌ಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.