ADVERTISEMENT

ಗಜೇಂದ್ರಗಡ ತಾಲ್ಲೂಕು ಜನರಲ್ಲಿ ಕಾಡು ಪ್ರಾಣಿಗಳ ಭಯ

ಶ್ರೀಶೈಲ ಎಂ.ಕುಂಬಾರ
Published 9 ಫೆಬ್ರುವರಿ 2024, 4:41 IST
Last Updated 9 ಫೆಬ್ರುವರಿ 2024, 4:41 IST
<div class="paragraphs"><p>ಗಜೇಂದ್ರಗಡ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿರುವುದು</p></div>

ಗಜೇಂದ್ರಗಡ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿರುವುದು

   

(ಸಂಗ್ರಹ ಚಿತ್ರ)

ಗಜೇಂದ್ರಗಡ: ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗುಡ್ಡಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಜನರು ಹಾಗೂ ಜಮೀನುಗಳ ರೈತರು ಕಾಡು ಪ್ರಾಣಿಗಳ ಭಯ ಆವರಿಸಿದೆ.

ADVERTISEMENT

ತಾಲ್ಲೂಕಿನ ಕುಂಟೋಜಿ ಗ್ರಾಮದಿಂದ ಬೊಮ್ಮಸಾಗರಗ್ರಾಮದವರೆಗೆ ವಿವಿಧ ಗ್ರಾಮಗಳನ್ನು ಒಳಗೊಂಡ ಕುರುಚಲು ಪ್ರದೇಶ ಹೊಂದಿರುವ ಸಾಲು ಗುಡ್ಡಗಳು ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಸುಮಾರು 15ಕ್ಕೂ ಹೆಚ್ಚು ಗ್ರಾಮಗಳು‌, ನೂರಾರು ಎಕರೆ ಕೃಷಿ ಭೂಮಿ ಈ ಗುಡ್ಡಕ್ಕೆ ಹೊಂದಿಕೊಂಡಂತಿದ್ದು, ಕಳೆದ ನಾಲ್ಕು ವರ್ಷಗಳಿಂದ ಗುಡ್ಡದಲ್ಲಿ ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜನರು, ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ತಾಲ್ಲೂಕಿನ ಕುರುಚಲು ಪ್ರದೇಶ ಹೊಂದಿರುವ ಸಾಲು ಗುಡ್ಡಗಳಿಗೆ ಹೊಂದಿಕೊಂಡಂತೆ ನೂರಾರು ಎಕರೆ ಕೆಂಪು (ಮಸಾರಿ) ಭೂಮಿಯಿದ್ದು, ಬಹುತೇಕ ರೈತರು ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ನೀರಾವರಿ ವ್ಯವಸಾಯ ಮಾಡುತ್ತಿದ್ದಾರೆ. ಹೀಗಾಗಿ ಹಗಲು-ರಾತ್ರಿ ಬೆಳೆಗಳಿಗೆ ನೀರು ಹಾಯಿಸಲು ರೈತರು ಜಮೀನುಗಳಿಗೆ ತೆರಳುತ್ತಾರೆ. ಅಲ್ಲದೆ ಕೆಲವರು ಜಮೀನುಗಳಲ್ಲಿ ಮನೆ ಅಥವಾ ಶೆಡ್‌ ನಿರ್ಮಿಸಿಕೊಂಡು ಅಲ್ಲಿಯೇ ವಾಸವಾಗಿದ್ದಾರೆ. ಆದರೆ ಕಳೆದ 3-4 ವರ್ಷಗಳಿಂದ ಗುಡ್ಡಕ್ಕೆ ಹೊಂದಿಕೊಂಡಿರುವ ಗ್ರಾಮಗಳು, ಜಮೀನುಗಳಲ್ಲಿ ಚಿರತೆ ಕಾಣಿಸಿಕೊಳ್ಳುವುದರ ಜೊತೆಗೆ ದಾಳಿ ನಡೆಸುತ್ತಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.

ತಾಲ್ಲೂಕಿನ ಪ್ಯಾಟಿ ಗ್ರಾಮದಲ್ಲಿ 2021ರಲ್ಲಿ ಆರಂಭವಾದ ಚಿರತೆ ಹಾವಳಿ ಇಲ್ಲಿಯವರೆಗೂ ಮುಂದುವರೆದಿದೆ. ಈ ವರೆಗೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಕಳೆದೊಂದು ವರ್ಷದಿಂದ ನೆಮ್ಮದಿಯಾಗಿದ್ದ ಜನರಿಗೆ ಈಗ ಮತ್ತೊಂದು ಚಿರತೆ ಕಾಣಿಸಿಕೊಂಡಿರುವುದು ಭಯ ಹೆಚ್ಚಿಸಿದೆ. ಈ ವರೆಗೆ ಜಮೀನುಗಳಲ್ಲಿ ಕಟ್ಟಿದ್ದ ಜಾನುವಾರುಗಳು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಗಳು ಇದೇ ಮೊದಲ ಬಾರಿಗೆ ಮನುಷ್ಯರ ಮೇಲೆ ದಾಳಿ ಮಾಡಿದೆ.

ಸಮೀಪದ ಜಿಗೇರಿ ಗ್ರಾಮದ ಬಾಳೆ ತೋಟದಲ್ಲಿ ಬಾಳೆ ಗೊನೆ ಕಟಾವು ಮಾಡಲು ಹೋಗಿದ್ದ ಉದಯಕುಮಾರ ಎಂಬ ಯುವಕನ ಮೇಲೆ ಚಿರತೆ ದಾಳಿ ನಡೆಸಿ ಗಂಭಿರ ಗಾಯಗೋಳಿಸಿದೆ. ಅದೇ ಸಮಯದಲ್ಲಿ ಕುರಿಗಾಹಿ ಕಾಲಿಗೆ ಕಚ್ಚಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಶೋಧ ಕಾರ್ಯಾಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಹುಂಬತನ ಪ್ರದರ್ಶನ ಮಾಡಿದ ಮತ್ತೊಬ್ಬ ಯುವಕನ ಮೇಲೆ ಚಿರತೆ ದಾಳಿ ನಡೆಸಿ ಮತ್ತೆ ಕಣ್ಮರೆಯಾಗಿತ್ತು. ದಾಳಿ ಮಾಡಿರುವ ಚಿರತೆಗೆ ಮರಿಗಳಿರುವ ಶಂಕೆ ವ್ಯಕ್ತವಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

‘ಕಾಡು ಪ್ರಾಣಿಗಳು ಮನುಷ್ಯರನ್ನು ಕಂಡರೆ ಭಯಗೊಂಡು ಮನುಷ್ಯನಿಂದ ದೂರ ಹೋಗುತ್ತವೆ. ಆಹಾರ ಅರಸಿ ಜಮೀನು, ಊರುಗಳಿಗೆ ಬಂದಾಗ ಜೀವ ಭಯದಿಂದ ದಾಳಿ ನಡೆಸುತ್ತವೆ. ಅದರಲ್ಲೂ ಚಿರತೆ ಅತ್ಯಂತ ಸೂಕ್ಷ್ಮ ಸ್ವಭಾವದ ಪ್ರಾಣಿಯಾಗಿದೆ. ಅದನ್ನು ಸೆರೆ ಹಿಡಿಯಲು ಅತ್ಯಂತ ಎಚ್ಚರಿಕೆಯಿಂದ ಅದರ ಚಲನ-ವಲನ, ನೀರು ಕುಡಿಯಲು ಬಂದು-ಹೋಗುವ ಸ್ಥಳಗಳನ್ನು ಗುರುತಿಸಿ ಬೋನು ಅಳವಡಿಸಿ ಸೆರೆ ಹಿಡಿಯಬೇಕು. ಬೋನು ಅಳವಡಿಸುವಾಗ ಚಿರತೆ ಬೋನಿನಲ್ಲಿ ಬಂದಾಗ ಅದಕ್ಕೆ ಕಾಡಿನಲ್ಲಿಯೇ ಬಂದಿದ್ದೇನೆ ಎಂಬ ಭಾವನೆ ಬರುವಂತಿರಬೇಕು. ಚಿರತೆಗೆ ಸ್ವಲ್ಪ ಅನುಮಾನ ಬಂದರೆ ಅದು ಬೋನಿನ ಸನಿಹ ಬರುವುದಿಲ್ಲʼ ಎಂದು ರೋಣ ಉಪ ವಲಯ ಅರಣ್ಯಾಧಿಕಾರಿ ಅನ್ವರ್‌ ಕೊಲ್ಹಾರ ಮಾಹಿತಿ ನೀಡಿದರು.

ʼನಾವು ಹೊಲದಲ್ಲಿ ವಾಸ ಮಾಡುತ್ತಿದ್ದೇವೆ. ಈ ಮೊದಲು ನಿರ್ಭಿತಿಯಿಂದ ಹೊಲದಲ್ಲಿ ಇರುತ್ತಿದ್ದೇವು. ಆದರೆ ಚಿರತೆ ಕಂಡಾಗಿನಿಂದ ಜೀವ ಭಯದಲ್ಲಿ ಹೊಲಕ್ಕೆ ಮನೆಗೆ ಓಡಾಡುವಂತಾಗಿದೆ. ಸಂಜೆಯಾದರೆ ಸಾಕು ಹೊಲದಲ್ಲಿ ಬಾಗಿಲು ಹಾಕಿಕೊಂಡು ಜೀವ ಭಯದಲ್ಲಿ ಕಾಲ ಕಳೆಯುವಂತಾಗಿದೆʼ ಎಂದು ಜಿಗೇರಿ ಕೆರೆ ಪಕ್ಕದ ಜಮೀನಿನಲ್ಲಿ ವಾಸವಾಗಿರುವ ವದೇಗೋಳ ಗ್ರಾಮದ ಕುಮಾರಪ್ಪ ದಾಸರ ತಮ್ಮ ಅಳಲು ತೋಡಿಕೊಂಡರು.

‘ʼಗಜೇಂದ್ರಗಡ ತಾಲ್ಲೂಕಿನಲ್ಲಿ ಕಳೆದ 2-3 ವರ್ಷಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ರೈತರ ಸಾಕು ಪ್ರಾಣಿಗಳು, ದನ-ಕರುಗಳಿಗೆ ಹಾನಿ ಮಾಡುತ್ತಿವೆ. ಇಂದು ಇದ್ದ ಸಾಕು ಪ್ರಾಣಿಗಳು ನಾಳೆ ಇಲ್ಲದಂತಾಗುತ್ತಿವೆ. ಸದ್ಯ ಶೇಂಗಾ ಬಿತ್ತನೆ ಮಾಡಿರುವ ರೈತರು ಕಟಾವು ಮಾಡುತ್ತಿದ್ದಾರೆ. ಹಗಲಲ್ಲಿ ರಾಶಿ ಮಾಡಿ, ರಾತ್ರಿ ರಾಶಿ, ಹೊಟ್ಟು ಕಾಯಲು ಹೊಲಗಳಿಗೆ ಹೋಗುವುದು ಅನಿವಾರ್ಯ. ಆದರೆ ಸದ್ಯ ಚಿರತೆ ಭಯದಿಂದ ಗುಡ್ಡದಂಚಿನ ಜನರು ಓಡಾಡಲು ಜೀವ ಭಯ ಆವರಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ದಾಳಿ ಮಾಡಿದಾಗ ಒಂದೆರಡು ದಿನ ಬಂದು ಕಾರ್ಯಾಚರಣೆ ಮಾಡುವ ಬದಲು ಅದರ ಚಲನ-ವಲನ ಆಧರಿಸಿ ಎಲ್ಲ ಚಿರತೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಿ ಜನರ ಭಯ ದೂರ ಮಾಡಬೇಕುʼ ಎಂದು ಕಾಲಕಾಲೇಶ್ವರ ಗ್ರಾಮದ ರಾಜೂರ ಗ್ರಾಮ ಪಂಚಾಯ್ತಿ ಸದಸ್ಯ ಮುತ್ತಣ್ಣ ತಳವಾರ ಆಗ್ರಹಿಸಿದರು.

ಗಜೇಂದ್ರಗಡ ಸಮೀಪದ ಪ್ಯಾಟಿ ಗ್ರಾಮದ ಭೀಮಪ್ಪ ಧರ್ಮರ ಎಂಬುವವರ ಹೊಲದಲ್ಲಿ ಕಟ್ಟಿದ್ದ ಕುದುರೆಗಳ ಮೇಲೆ ಚಿರತೆ ದಾಳಿ ನಡೆಸಿರುವುದು (ಸಂಗ್ರಹ ಚಿತ್ರ)
ಗಜೇಂದ್ರಗಡ ಭೈರಾಪೂರ ತಾಂಡಾದ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಚಿರತೆ ಹೆಜ್ಜೆ ಗುರುತು ತೊರಿಸುತ್ತಿರುವ ಗ್ರಾಮಸ್ಥರು (ಸಂಗ್ರಹ ಚಿತ್ರ)
ಗಜೇಂದ್ರಗಡದಲ್ಲಿ ನರಿಯೊಂದು ಹಲವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದರಿಂದ ಸಿಟ್ಟಿಗೆದ್ದ ಜನರು ನರಿಯನ್ನು ಅಟ್ಟಾಡಿಸಿ ಕೊಂದಿದ್ದರು (ಸಂಗ್ರಹ ಚಿತ್ರ)
ಗಜೇಂದ್ರಗಡ ಸಮೀಪದ ಜಿಗೇರಿ ಗ್ರಾಮದಲ್ಲಿ ಚಿರತೆ ದಾಳಿಗೆ ಒಳಗಾಗಿರುವ ಉದಯಕುಮಾರ ಎಂಬ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು
ಗಜೇಂದ್ರಗಡ ತಾಲ್ಲೂಕಿನ ಪ್ಯಾಟಿ ನಾಗೇಂದ್ರಗಡ ಗ್ರಾಮಗಳ ಸುತ್ತ ಹಾಗೂ ಭೈರಾಪುರ ತಾಂಡಾದಲ್ಲಿ ಕಾಣಿಸಕೊಂಡಿದ್ದ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಸದ್ಯ ಜಿಗೇರಿ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ‌
- ಮಂಜುನಾಥ ಮೇಗಳಮನಿ, ವಲಯ ಅರಣ್ಯಾಧಿಕಾರಿ ಗದಗ

ಗಜೇಂದ್ರಗಡ ತಾಲ್ಲೂಕಿನಲ್ಲಿ ಚಿರತೆ ದಾಳಿಗಳು

  • * 23 ಸೆ. 2021 -ಗಜೇಂದ್ರಗಡ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿತ್ತು

  • 3 ಡಿ. 2021 - ತಾಲ್ಲೂಕಿನ ಪ್ಯಾಟಿ ಗ್ರಾಮದ ಭೀಮಪ್ಪ ಧರ್ಮರ ಎಂಬುವವರ ಹೊಲದಲ್ಲಿ ಕಟ್ಟಿದ್ದ ಕುದುರೆಗಳ ಮೇಲೆ ಚಿರತೆ ದಾಳಿ ನಡೆಸಿ ಕುದುರೆಯೊಂದನ್ನು ಕೊಂದು ಹಾಕುವ ಮೂಲಕ ಆ ಭಾಗದ ರೈತರು ಮತ್ತು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು

  • 6 ಜ.2022 - ತಾಲ್ಲೂಕಿನ ನಾಗೇಂದ್ರಗಡ ಗ್ರಾಮದ ನಿಂಗಪ್ಪ ಹಂಡಿ ಎಂಬುವವರ ಹೊಲದಲ್ಲಿ ದನದ ಶೆಡ್ ನಲ್ಲಿ ಕಟ್ಟಿದ್ದ ಆಕಳಿನ ಮೇಲೆ ದಾಳಿ ನಡೆಸಿದ ಚಿರತೆ ಆಕಳನ್ನು ಕೊಂದು ಹಿಂಭಾಗದ ಅರ್ಧ ದೇಹವನ್ನ ತಿಂದು ಹಾಕಿತ್ತು

  • 30 ಸೆ.2022 - ತಾಲ್ಲೂಕಿನ ನಾಗೇಂದ್ರಗಡ ಗ್ರಾಮದ ಶರಣಪ್ಪ ಪಾಟೀಲ ಎಂಬುವವರ ಜಮೀನಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಹಾಗೂ ಕರುವಿನ ಮೇಲೆ ಚಿರತೆ ದಾಳಿ ಮಾಡಿತ್ತು

  • 2 ಅ.2022- ತಾಲ್ಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ಹಸು ಕರು ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ಹಿಡಿಯಲು ಅಳವಡಿಸಿದ್ದ ಬೋನಿನ ಹತ್ತಿರ ಚಿರತೆ ಬಂದಿರುವುದು ಕ್ಯಾಮರಾ ಟ್ರ್ಯಾಪ್ ನಲ್ಲಿ ಸೇರೆಯಾಗಿತ್ತು

  • 10 ಅ.2022- ತಾಲ್ಲೂಕಿನ ನಾಗೇಂದ್ರಗಡ ಪ್ಯಾಟಿ ಗ್ರಾಮಗಳು ಸೇರಿದಂತೆ ಅಕ್ಕ ಪಕ್ಕದ ಗುಡ್ಡದಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಚಿರತೆ ಕುಷ್ಟಗಿ ತಾಲ್ಲೂಕಿನ ಮಾಲಗಿತ್ತಿ ಗ್ರಾಮದ ಗುಡ್ಡದಲ್ಲಿರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿತ್ತು

  • 13 ಡಿ.2022- ತಾಲ್ಲೂಕಿನ ಭೈರಾಪೂರ ತಾಂಡಾದ ಹೊಲದಲ್ಲಿ ದನದ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕರುವನ್ನು ಭಾಗಶಃ ತಿಂದು ಹಾಕಿತ್ತು

  • 14 ಡಿ.2022- ಪಟ್ಟಣದಲ್ಲಿ ಬೆಳಗಿನ ಜಾವ ನರಿಯೊಂದು ಹಲವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಇದರಿಂದ ಸಿಟ್ಟಿಗೆದ್ದ ಜನರು ನರಿಯನ್ನು ಅಟ್ಟಾಡಿಸಿ ಕೊಂದಿದ್ದರು

  • 16 ಡಿ.2022- ತಾಲ್ಲೂಕಿನ ಭೈರಾಪುರ ತಾಂಡಾದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನಲ್ಲಿ ಸೆರೆಹಿಡಿದಿದ್ದರು

  • 27 ಜ.2024- ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಣಚಮಟ್ಟಿ ಕ್ರಾಸ್‌ನಲ್ಲಿರುವ ಮನೆಗಳ ಸುತ್ತ ಚಿರತೆ ಓಡಾಡಿದ್ದು ಮರ ಹತ್ತಿದ ಕುರುಹುಗಳಿವೆ ಎಂದು ಅಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು

  • 7 ಫೆ.2024- ತಾಲ್ಲೂಕಿನ ಜಿಗೇರಿ ಗ್ರಾಮದ ಬಾಳೆ ತೋಟದಲ್ಲಿ ಬಾಳೆ ಗೊನೆ ಕಟಾವು ಮಾಡುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ. ಅದೇ ದಿನ ಮತ್ತೆ ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.