ರೋಣ: ನಗರದ ಮುದೇನಗುಡಿ ರಸ್ತೆಯಲ್ಲಿ ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಕಟ್ಟಡದೊಳಗೆ ಮದ್ಯದ ಬಾಟಲಿಗಳ ರಾಶಿರಾಶಿ ಬಿದ್ದಿವೆ.
ಕಾಲೇಜು ಕಟ್ಟಡ ನಿರ್ಮಾಣವಾಗಿ 3 ವರ್ಷಗಳು ಕಳೆದರೂ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಆಗಬೇಕಿದ್ದ ಕಾಲೇಜು ಕಟ್ಟಡದ ಒಳಗೆ ಕುಡಿದು ಎಸೆದ ಬಿಯರ್ ಬಾಟಲಿಗಳು, ಸಾರಾಯಿ ಪ್ಯಾಕೇಟುಗಳು ರಾಶಿರಾಶಿ ಬಿದ್ದಿವೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರೋಣ ತಾಲ್ಲೂಕಿನಲ್ಲಿ ಶೈಕ್ಷಣಿಕ ಕ್ಷೇತ್ರ ತೀವ್ರವಾಗಿ ಹಿಂದುಳಿದಿದ್ದು, ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿ ಕಟ್ಟಿಸಿದ ಕಾಲೇಜು ಕಟ್ಟಡ ಈ ರೀತಿಯ ಅಕ್ರಮ ಚಟುವಟಿಕೆಗಳ ಕೇಂದ್ರವಾಗಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.
ಅಧಿಕಾರಿಗಳ ನಿರ್ಲಕ್ಷ:
ಕೆಲ ವರ್ಷಗಳ ಹಿಂದೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಅಧಿಕಾರಿಗಳ ನಿರ್ಲಕ್ಷದಿಂದ ಕಟ್ಟಡದಲ್ಲಿ ಅಳವಡಿಸಿದ್ದ ವಿದ್ಯುತ್ ಉಪಕರಣಗಳು ಹಾಳಾಗಿವೆ. ಫ್ಯಾನ್, ವಿದ್ಯುತ್ ದೀಪಗಳು ಕಳವಾಗಿವೆ. ವಿದ್ಯುತ್ ಯಂತ್ರಗಳು ಹಾಗೂ ಕಿಟಕಿಯ ಗಾಜುಗಳು ಹಾಳಾಗಿವೆ. ಕಾಲೇಜು ಆವರಣ ಕುರಿಗಳು ಹಿಕ್ಕೆಗಳಿಂದ ತುಂಬಿದೆ. ಇದರಿಂದಾಗಿ ಕಾಲೇಜು ಕಟ್ಟಡ ದುರ್ವಾಸನೆಯಿಂದ ಕೂಡಿದೆ.
‘ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕಿದ್ದ ಕಾಲೇಜು ಕಟ್ಟಡ ಅವ್ಯವಸ್ಥೆಯ ಆಗರವಾಗಿದ್ದು, ಕೂಡಲೇ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ನಿರ್ಲಕ್ಷಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ಗಿರೀಶ ಸಾಳುಂಕಿ ಮಲ್ಲು, ಆದಿ ಮಲ್ಲಿಕಾರ್ಜುನ ಗಾಣಗೇರ, ಮುತ್ತಣ್ಣ ಕಳಸಣ್ಣವರ, ರವಿ ಗದಗೀನ, ಪ್ರಶಾಂತ ಪವಾರ, ಕಬೀರಸಾಬ ಮುಗಳಿ ಆಗ್ರಹಿಸಿದರು.
ನಗರದ ಪಾಲಿಟೆಕ್ನಿಕ್ ಕಾಲೇಜು ಕಟ್ಟಡವು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹಾಳಾಗಿದೆ. ಅಧಿಕಾರಿಗಳು ತಕ್ಷಣ ಕಾಲೇಜು ಆರಂಭಿಸಲು ಕ್ರಮಕೈಗೊಳ್ಳಬೇಕು.ಮಲ್ಲಯ್ಯ ಮಹಾಪುರಷಮಠ ಪುರಸಭೆ ಸದಸ್ಯ ರೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.