ರೋಣ: ಕೃಷಿ ಪ್ರಧಾನವಾದ ಭಾರತೀಯ ಪರಂಪರೆಯಲ್ಲಿ ಅತಿಮುಖ್ಯ ಕುಲಕಸುಬಾಗಿ ಬೆಳೆದು ಬಂದದ್ದು ಕಂಬಾರಿಕೆ. ಕೃಷಿಗೆ ಮಾತ್ರವಲ್ಲದೆ ಸಾಮ್ರಾಜ್ಯ, ಸಂಸ್ಥಾನಗಳ ಸೈನ್ಯಶಕ್ತಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಶತಮಾನಗಳವರೆಗೆ ಬಹುಬೇಡಿಕೆಯ ವೃತ್ತಿಯಾಗಿ ಬೆಳೆದು ಬಂದ ಕಂಬಾರಿಕೆ ಇಂದು ಅಳಿವಿನಂಚಿನಲ್ಲಿದೆ.
ಈ ಕುಲಕಸುಬು ನಂಬಿಕೊಂಡವರು ಇಂದು ಕುಟುಂಬ ನಿರ್ವಹಣೆ ಮಾಡಲು ಕಷ್ಟಪಡಬೇಕಿದೆ ಎಂದು ಕಂಬಾರರು ಅಲವತ್ತುಕೊಂಡಿದ್ದಾರೆ.
ರೋಣ ತಾಲ್ಲೂಕಿನಾದ್ಯಂತ ಬಹುತೇಕ ಕೃಷಿಯೇ ಜನರ ಮೂಲ ಕಾಯಕವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕಂಬಾರಿಕೆ ಕೂಡ ಪ್ರಮುಖ ವೃತ್ತಿಯಾಗಿ ಬೆಳೆದುಬಂದಿತ್ತು. ಕುಲುಮೆಯ ಕಾವಿನಲ್ಲಿ ಬೆಂದು, ಕಬ್ಬಿಣವನ್ನು ಕಾಯಿಸಿ, ಹದಕ್ಕೆ ತಂದು ಕೊಡಲಿ, ಕುರ್ಚಿಗೆ, ತಾಳು, ಕೂರಿಗೆ, ಕುಂಟೆ, ಚೂರಿ, ಗುದ್ದಲಿ, ಸಲಿಕೆ, ಚಕ್ಕಡಿಯ ಹಳಿ, ಈರಸು ಹೀಗೆ ಕೃಷಿ ಕಾಯಕಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ತಯಾರಿಸುತ್ತಿದ್ದ ಹತ್ತು ಹಲವು ಕುಟುಂಬಗಳು ರೋಣ ನಗರದಲ್ಲಿ ವಾಸವಿದ್ದು, ತಮ್ಮ ಕಾಯಕ ನಿಷ್ಠೆ ಮತ್ತು ನೈಪುಣ್ಯತೆಗಳಿಂದ ಹೆಸರುವಾಸಿಯಾಗಿದ್ದವು.
‘ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ಕುಲಕಸುಬು ಇಂದು ಆಧುನಿಕತೆಯ ಬಿರುಗಾಳಿಗೆ ಸಿಕ್ಕು ತರಗುಟ್ಟಿ ಹೋಗಿದೆ. ನಿಧಾನವಾಗಿ ತೆರೆಮರೆಗೆ ಸರಿಯುತ್ತಿದೆ. ರೋಣ ನಗರದಲ್ಲಿ ತಲತಲಾಂತರಗಳಿಂದ ಜಾತಿ, ಭೇದವಿಲ್ಲದೆ ಕಂಬಾರಿಕೆಯಲ್ಲಿ ಹಲವು ಕುಟುಂಬಗಳು ತೊಡಗಿದ್ದು, ಪ್ರಸ್ತುತ ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರ ವೃತ್ತಿಯಲ್ಲಿ ತೊಡಗಿವೆ. ಬಹುತೇಕ ಕುಟುಂಬಗಳು ವೃತ್ತಿಯಿಂದ ವಿಮುಖವಾಗಿವೆ’ ಎನ್ನುತ್ತಾರೆ ಕಂಬಾರಿಕೆಯಲ್ಲಿ ತೊಡಗಿರುವ ರೋಣ ಪಟ್ಟಣದ ಯುವಕ ಮಿಥುನ್.
ಎರಡು ತಲೆಮಾರುಗಳಿಂದ ವೃತ್ತಿ ನಿರತವಾಗಿರುವ ಸಾಳುಂಕೆ ಕುಟುಂಬ ಇಂದಿಗೂ ಕಂಬಾರಿಕೆ ಮುಂದುವರಿಸಿದ್ದು, ಜೀವನ ನಿರ್ವಹಣೆಗೂ ತೊಂದರೆಪಡುತ್ತಿದೆ. ಸ್ವಂತ ಅಂಗಡಿಯನ್ನೂ ಹೊಂದಲಾಗದೆ ಸರ್ಕಾರದ ಯಾವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಕಷ್ಟದಲ್ಲಿಯೇ ಕಂಬಾರಿಕೆ ವೃತ್ತಿಯನ್ನು ಮುಂದುವರಿಸಿದ್ದಾರೆ. ಇಂತಹ ಇನ್ನೂ ಹತ್ತು ಹಲವು ಕುಟುಂಬಗಳು ರೋಣದಲ್ಲಿದ್ದು ಬಹುತೇಕ ಎಲ್ಲ ಕುಟುಂಬಗಳ ಸ್ಥಿತಿಯು ಹೀಗೆ ಮುಂದುವರಿದಿದೆ.
ಈ ಕುಟುಂಬಗಳ ಹೊಸ ತಲೆಮಾರಿನ ಯುವಕರು ಬೇರೆ ಉದ್ಯೋಗ ಹುಡುಕಿಕೊಂಡು ದೂರದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸದಾ ಜನಜಂಗುಳಿಯ ತಾಣವಾಗಿದ್ದ ಕುಲುಮೆಗಳಲ್ಲೀಗ ನೀರವತೆ ಆವರಿಸುತ್ತಿದೆ. ಕುಲುಮೆಯ ಕಾವಿನಲ್ಲಿ ಬೆಂದು ಚಂದದ ಕೃಷಿ ಉಪಕರಣಗಳನ್ನು ತಯಾರಿಸುತ್ತಿದ್ದ ಪ್ರತಿಭೆಗಳ ಪಲಾಯನವಾಗುತ್ತಿದೆ.
ಕಂಬಾರರು ಸ್ವಂತ ಉದ್ಯೋಗ ತೊರೆದು ಜೀವನ ನಿರ್ವಹಣೆಗೆ ಆಳಾಗಿ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಉಚ್ಛ್ರಾಯ ಸ್ಥಿತಿಯಲ್ಲಿದ್ದ ಗೃಹ ಕೈಗಾರಿಕೆಯೊಂದು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದ್ದು ವೃತ್ತಿ ಉಳಿಸಿ, ಬೆಳೆಸಲು ಸರ್ಕಾರ ಸಹಾಯಧನ, ಸೂಕ್ತ ತರಬೇತಿ ಮತ್ತು ಮಾರುಕಟ್ಟೆಯನ್ನು ಒದಗಿಸಬೇಕೆಂಬುದು ಕಂಬಾರ ಸಮುದಾಯದ ಆಗ್ರಹವಾಗಿದೆ.
ರೋಣ ಪಟ್ಟಣದ ಅಂಗಡಿಗಳಲ್ಲಿ ಬೃಹತ್ ಕಂಪನಿಗಳ ಕೃಷಿ ಸಲಕರಣೆಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ರೈತರು ಕಂಬಾರರಿಂದ ಖರೀದಿಸುವುದನ್ನು ಕಡಿಮೆ ಮಾಡಿದ್ದಾರೆ. ಈ ಬೆಳವಣಿಗೆ ಕುಲಕಸುಬಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಜೀವನ ನಿರ್ವಹಣೆಗೂ ಕಷ್ಟಪಡುತ್ತಿರುವ ಕುಟುಂಬಗಳು ಸ್ವಂತ ಉದ್ಯೋಗ ತೊರೆದು ಆಳಾಗಿ ದುಡಿಯಲು ಹೊರಟ ಯುವಜನತೆ ರೋಣದ ಕುಂಬಾರಿಕೆ, ಕುಲುಮೆಗಳಲ್ಲಿ ಆವರಿಸಿದ ನೀರವತೆ
ಇಚ್ಛಾಶಕ್ತಿ ಪ್ರದರ್ಶನ ಮುಖ್ಯ ಸರ್ಕಾರ ಗ್ರಾಮೀಣ ಗೃಹ ಕೈಗಾರಿಕೆಗಳ ರಕ್ಷಣೆಗೆ ಹಲವು ಯೋಜನೆ ಜಾರಿಗೆ ತಂದರೂ ಅಧಿಕಾರಿ ವರ್ಗ ಅವುಗಳನ್ನು ಸೂಕ್ತ ಫಲಾನುಭವಿಗಳನ್ನು ಗುರುತಿಸಿ ತಲುಪಿಸುವಲ್ಲಿ ವಿಫಲವಾಗುತ್ತಿದೆ. ಇಂತಹ ವೃತ್ತಿಗಳನ್ನು ಉಳಿಸುವಲ್ಲಿ ಅಧಿಕಾರಿ ವರ್ಗ ಇಚ್ಛಾಶಕ್ತಿ ಪ್ರದರ್ಶಿಸಬೇಕು.
–ಅಬ್ದುಲ್ ಸಾಬ್ ಹೊಸಮನಿ ಸಾಮಾಜಿಕ ಕಾರ್ಯಕರ್ತ
ರೋಣ ಕಾಯಕಲ್ಪಕ್ಕೆ ಸರ್ಕಾರ ಕ್ರಮವಹಿಸಲಿ ಜಾಗತೀಕರಣ ಎಂಬ ಬಂಡವಾಳಶಾಹಿತ್ವದ ರುದ್ರ ನರ್ತನಕ್ಕೆ ದೇಸಿ ಕಸುಬುಗಳು ವಿನಾಶದ ಅಂಚು ತಲುಪುತ್ತಿವೆ. ನಮ್ಮ ಅರ್ಥ ವ್ಯವಸ್ಥೆ ಬೃಹತ್ ಕಂಪನಿಗಳನ್ನು ಅವಲಂಬಿಸದೆ ಕಂಬಾರಿಕೆ ತರಹದ ಕುಲಕಸುಬುಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಸರ್ಕಾರಗಳು ಅರಿತುಕೊಳ್ಳಬೇಕಿದೆ. ಕುಲಕಸುಬುಗಳ ಸಮಗ್ರ ಅಭಿವೃದ್ದಿಗಾಗಿ ಸರ್ಕಾರ ತ್ವರಿತವಾಗಿ ಯೋಜನೆಗಳನ್ನು ರೂಪಿಸಬೇಕಿದೆ.
–ಸದ್ದಾಂ ತಹಶೀಲ್ದಾರ ಅರ್ಥಶಾಸ್ತ್ರ ಉಪನ್ಯಾಸಕ
ವಿಆರ್‌ಸಿ ಕಾಲೇಜು ರೋಣ ಭವಿಷ್ಯದ ಮುನ್ನೋಟ ಸ್ವಾವಲಂಬಿ ಜೀವನ ನಿರ್ವಹಣೆಗೆ ನೆರವಾಗಿದ್ದ ಕಂಬಾರಿಕೆಯಂತಹ ಪ್ರಮುಖ ಉದ್ಯೋಗವೊಂದು ರೋಣ ನಗರದಲ್ಲಿ ಇಂದು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯು ಭವಿಷ್ಯದಲ್ಲಿ ಇತರೆ ಎಲ್ಲ ಕುಲಕಸುಬುಗಳನ್ನು ಆಪೋಶನ ತೆಗೆದುಕೊಳ್ಳುವ ಭವಿಷ್ಯದ ಮುನ್ನೋಟದಂತಿದೆ.
–ಎಸ್.ವಿ.ಸಂಕನಗೌಡ್ರ ಸಮಾಜಶಾಸ್ತ್ರ ಉಪನ್ಯಾಸಕ ಎಸ್‌ಎಸ್‌ಬಿ ಕಾಲೇಜು ರೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.