ADVERTISEMENT

100 ಗ್ರಾಮ ವ್ಯಾಜ್ಯಮುಕ್ತವಾಗಿಸಲು ಪಣ: ಸಚಿವ ಎಚ್.ಕೆ ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 16:17 IST
Last Updated 12 ಜುಲೈ 2024, 16:17 IST
ಹುಲಕೋಟಿ ಗ್ರಾಮ ಪಂಚಾಯಿತಿ ಫಲಾನುಭವಿಗೆ ಸಚಿವ ಎಚ್‌.ಕೆ.ಪಾಟೀಲ ಜನನ ಪ್ರಮಾಣಪತ್ರ ಹಸ್ತಾಂತರಿಸಿದರು
ಹುಲಕೋಟಿ ಗ್ರಾಮ ಪಂಚಾಯಿತಿ ಫಲಾನುಭವಿಗೆ ಸಚಿವ ಎಚ್‌.ಕೆ.ಪಾಟೀಲ ಜನನ ಪ್ರಮಾಣಪತ್ರ ಹಸ್ತಾಂತರಿಸಿದರು   

ಗದಗ: ‘ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತವಾಗಿಸಲು ಸಿದ್ಧತೆ ನಡೆದಿದೆ. ಜಿಲ್ಲೆಯ ಅಭಿವೃದ್ಧಿ ತೀವ್ರಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

‘ಹೊಸ ಆರ್ಥಿಕ ವರ್ಷ ಪ್ರಾರಂಭವಾದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರದ ಬದ್ಧತೆಯ ಕುರಿತು ಎಲ್ಲ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆಡಳಿತ ಪಾರದರ್ಶಕವಿರಬೇಕು. ಸರ್ಕಾರಿ ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಲಾಗಿದೆ’ ಎಂದು ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಗದಗ ಜಿಲ್ಲೆಯು ಇ– ಆಫೀಸ್ ನಿರ್ವಹಣೆಯಲ್ಲಿ ಪ್ರಥಮ ಸ್ಥಾನಲ್ಲಿರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಇ– ಆಫೀಸ್ ಪ್ರಾರಂಭ ಮಾಡಬೇಕು. ಆ.12ರೊಳಗಾಗಿ ಈ ಬದಲಾವಣೆ ಆಗಬೇಕು. ಜಿಲ್ಲೆಯಲ್ಲಿ ಸಕಾಲ ಯೋಜನೆ ಪರಿಣಾಮಕಾರಿಯಾಗಿ ನಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸಕಾಲ ಯೋಜನೆ ಹಾಗೂ ಜನತಾ ದರ್ಶನ ಕಾರ್ಯಕ್ರಮದಡಿ ಸ್ವೀಕರಿಸಲಾದ ವಿವಿಧ ಇಲಾಖೆಗಳಿಗೆ ಸಂಬಂಧಿತ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಕ್ಟೋಬರ್ 2ರ ಒಳಗಾಗಿ ಬಾಕಿ ಇರುವ ಅರ್ಜಿ ವಿಲೇವಾರಿಗೊಳಿಸಲು ತಿಳಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗದಗ ಜಿಲ್ಲೆಯು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 16ನೇ ಸ್ಥಾನ ಪಡೆದಿರುವುದು ಗೊತ್ತಾಗಿದೆ. ಮುಂದಿನ 6–8 ತಿಂಗಳಲ್ಲಿ ಅದನ್ನು 10ನೇ ಸ್ಥಾನದೊಳಗೆ ತರಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲಾ ಅಭಿವೃದ್ಧಿಗಾಗಿ ಮುಂದಿನ ಮೂರು ವರ್ಷಗಳಿಗೆ ವಿಜನ್ ಡಾಕ್ಯುಮೆಂಟ್ ಸಿದ್ಧಪಡಿಸಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 4 ಲಕ್ಷ ಗಿಡ ನೆಡುವ ಗುರಿಯಿದ್ದು ಪ್ರಸಕ್ತ ಸಾಲಿನಲ್ಲಿ ಖಾಸಗಿಯವರಿಂದ ಸಸಿಗಳನ್ನು ಖರೀದಿಸಿ ನೆಡುವ ಕುರಿತು ಕ್ರಮ ವಹಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಶೇ 33ರಷ್ಟು ಅರಣ್ಯ ಪ್ರದೇಶ ಇರುವ ಹಾಗೆ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡಲು ನಿರ್ಣಯಿಸಲಾಗಿದೆ. ಕಪ್ಪತ್ತಗುಡ್ಟದಲ್ಲಿ ಇನ್ನೂ ವಿವಿಧ ಗಿಡಗಳನ್ನು ಬೆಳೆಸಲು ಅವಕಾಶವಿದ್ದು ವಿಶೇಷ ಅರಣ್ಯ ನಿರ್ಮಿಸುವಲ್ಲಿ ಒತ್ತು ಕೊಡಲಾಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ 400 ಕೊಠಡಿಗಳ ಕೊರತೆಯಿದ್ದು, ಸರ್ಕಾರದ ವಿವಿಧ ಯೋಜನೆಗಳ ಅನುದಾನ ಹಾಗೂ ಸಿಎಸ್‌ಆರ್‌ ನಿಧಿ ಸಂಗ್ರಹದ ಮೂಲಕ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ. ಈ ಪ್ರಕ್ರಿಯೆ ನ.14ರಿಂದ ಪ್ರಾರಂಭಗೊಳ್ಳಲಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 10,830 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆ ಮಾಡಲಾಗಿದೆ. 2,430 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಾಕಿ ಉಳಿದಿದ್ದು, ತಿಂಗಳ ಕೊನೆಯಲ್ಲಿ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ತಲುಪಿಸುವ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದು, ಕಪ್ಪತ್ತಗುಡ್ಡವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ನೈಟ್ ಸಫಾರಿ ಜಾರಿಗೊಳಿಸಲು ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ₹4 ಕೋಟಿ ಅನುದಾನ ಒದಗಿಸಲು ಆದೇಶಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್. ಇದ್ದರು.

ಜಿಲ್ಲೆಯಲ್ಲಿ 70 ಡೆಂಗಿ ಪ್ರಕರಣ
‘ಗದಗ ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 1479 ಡೆಂಗಿ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿದ್ದು ಅದರಲ್ಲಿ 1102 ಪ್ರಕರಣಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 70 ಪ್ರಕರಣಗಳು ಖಚಿತಪಟ್ಟಿವೆ. 49 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 32 ಮಂದಿ ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಐಸಿಯುನಲ್ಲಿದ್ದಾರೆ. ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಈಗ ವೆಂಟಿಲೇಟರ್‌ನಿಂದ ಹೊರಬಂದಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಹೊರಬಂದಿದ್ದಾರೆ’ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.