ADVERTISEMENT

ಗಜೇಂದ್ರಗಡ | ಬೆಲೆ ಕುಸಿತ: ರೇಷ್ಮೆ ಬೆಳೆಗಾರರಿಗೆ ಸಂಕಷ್ಟ

ಸುಣ್ಣಕಟ್ಟು, ಸೊಪ್ಪೆ, ಹಾಲು ರೋಗ, ಬಾಧೆ

ಶ್ರೀಶೈಲ ಎಂ.ಕುಂಬಾರ
Published 19 ಜುಲೈ 2023, 5:32 IST
Last Updated 19 ಜುಲೈ 2023, 5:32 IST
ಗಜೇಂದ್ರಗಡ ಸಮೀಪದ ಮಾಟರಂಗಿ ಗ್ರಾಮದ ರೇಷ್ಮೆ ಬೆಳೆಗಾರ ಚನ್ನಬಸವ ಕರಡಿ ಅವರ ರೇಷ್ಮೆ ಹುಳುಗಳು ಸುಣ್ಣಕಟ್ಟು ರೋಗಕ್ಕೆ ತುತ್ತಾಗಿರುವುದು
ಗಜೇಂದ್ರಗಡ ಸಮೀಪದ ಮಾಟರಂಗಿ ಗ್ರಾಮದ ರೇಷ್ಮೆ ಬೆಳೆಗಾರ ಚನ್ನಬಸವ ಕರಡಿ ಅವರ ರೇಷ್ಮೆ ಹುಳುಗಳು ಸುಣ್ಣಕಟ್ಟು ರೋಗಕ್ಕೆ ತುತ್ತಾಗಿರುವುದು   

ಗಜೇಂದ್ರಗಡ: ರೇಷ್ಮೆ ಕೃಷಿಯಿಂದ ಬದುಕು ಕಟ್ಟಿಕೊಂಡಿದ್ದ ರೇಷ್ಮೆ ಬೆಳೆಗಾರರು ಬೆಲೆ ಕುಸಿತ ಹಾಗೂ ರೇಷ್ಮೆ ಹುಳುಗಳಿಗೆ ತಗುಲುತ್ತಿರುವ ರೋಗಗಳಿಂದ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಗಜೇಂದ್ರಗಡ ತಾಲ್ಲೂಕಿನಲ್ಲಿ ಸುಮಾರು 400 ಎಕರೆ ಪ್ರದೇಶದಲ್ಲಿ 150 ರೈತರು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಈ ಮೊದಲು ರೇಷ್ಮೆ ಗೂಡಿಗೆ ಪ್ರತಿ ಕೆ.ಜಿಗೆ ₹ 850-950 ದರ ಸಿಗುತ್ತಿತ್ತು. ಇದರಿಂದ ಹಲವಾರು ರೈತರು ರೇಷ್ಮೆ ಕೃಷಿಯಲ್ಲಿ ಆರ್ಥಿಕವಾಗಿ ಸದೃಢರಾಗಿದ್ದರು.

ಇದರಿಂದ ಪ್ರೇರಣೆ ಪಡೆದು ಹಲವು ರೈತರು ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಸುಮಾರು ಎರಡು ಎಕರೆ ಹಿಪ್ಪು ನೇರಳೆ ನಾಟಿ ಮಾಡುವುದು, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣ ಸೇರಿ ಸುಮಾರು ₹ 6-7 ಲಕ್ಷ ಖರ್ಚು ಮಾಡಿ ರೇಷ್ಮೆ ಕೃಷಿಗೆ ಮುಂದಾಗಿದ್ದರು.

ADVERTISEMENT

ಆದರೆ ರೇಷ್ಮೆ ಗೂಡಿನ ದರ ಅರ್ಧದಷ್ಟು ಕುಸಿದಿದ್ದು, ಸದ್ಯ 350-400 ರೂ. ದರದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ತಾಲ್ಲೂಕಿನ ನೂರಾರು ರೇಷ್ಮೆ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

ಈ ಮೊದಲು ಸರ್ಕಾರ 100 ಮೊಟ್ಟೆಗೆ 60 ಕೆ.ಜಿ ಗೂಡು ಬಂದರೆ ಕೆ.ಜಿಗೆ ₹ 10 ಸಾಗಾಣಿಕೆ ವೆಚ್ಚ, ರೇಷ್ಮೆ ಗೂಡು ₹ 300ಗಿಂತ ಕಡಿಮೆ ದರದಲ್ಲಿ ಮಾರಿದರೆ ಕೆ.ಜಿಗೆ ₹ 50 ಸಹಾಯ ಧನ ಹಾಗೂ 100 ಮೊಟ್ಟೆಗೆ ಒಂದು ಸಾವಿರ ರೂಪಾಯಿ ಚಾಕಿ ವೆಚ್ಚ ನೀಡುತ್ತಿತ್ತು. ಆದರೆ ಸದ್ಯ ಈ ಎಲ್ಲ ಸೌಲಭ್ಯಗಳು ರೈತರಿಗೆ ಸಿಗುತ್ತಿಲ್ಲ. ಅಲ್ಲದೆ ರೇಷ್ಮೆ ಹುಳುಗಳಿಗೆ ವಿವಿಧ ರೋಗಗಳು ತಗುಲುತ್ತಿದ್ದು, ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ.

ಗಜೇಂದ್ರಗಡ-ರೋಣ ತಾಲ್ಲೂಕಿನ ರೇಷ್ಮೆ ಬೆಳೆಗಾರರು ರೇಷ್ಮೆ ಗೂಡಿಗೆ ಪ್ರೊತ್ಸಾಹ ಧನ ನೀಡುವಂತೆ ಮನವಿ ಸಲ್ಲಿಸಿದರೆ ಅದನ್ನು ಇಲಾಖೆಯಿಂದ ಸರ್ಕಾರಕ್ಕೆ ಕಳಿಸಿಕೊಡಲಾಗುವುದು

-ಸುರೇಶ.ವಿ.ಡಣಾಕ ರೇಷ್ಮೆ ನಿರೀಕ್ಷಕ

ನಮ್ಮ ಭಾಗದ ಸುಮಾರು 14 ರೈತರು ಕಮತಗಿಯ ಸುಹಾನಾ ಚಾಕಿ ಕೇಂದ್ರದಿಂದ 3200 ಲಿಂಕ್ಸ್‌ ರೇಷ್ಮೆ ಹುಳು ತಂದಿದ್ದರು. ಆದರೆ ಅದರಲ್ಲಿ ಶೇ 70 ರಷ್ಟು ಹುಳುಗಳು ರೋಗ ಬಾಧೆಗೆ ತುತ್ತಾಗಿವೆ

-ಚನ್ನಬಸವ ಕರಡಿ ರೇಷ್ಮೆ ಕೃಷಿಕ ಮಾಟರಂಗಿ

ಅಲ್ಪಾವಾಧಿ ಕೃಷಿ: ಶ್ರಮ ಹೆಚ್ಚು

ʼರೇಷ್ಮೆ ಕೃಷಿ ಬಹಳಷ್ಟು ಸೂಕ್ಷ ಕೃಷಿ. ಬಹುಬೇಗ ಫಸಲು ಬರುತ್ತದೆ. ಆದರೆ ಸಾಕಾಣಿಕೆ ಸಂದರ್ಭದಲ್ಲಿ ಹುಳುಗಳಿಗೆ ಹಾಲು ರೋಗ ಸುಣ್ಣಕಟ್ಟು ರೋಗ ಸೊಪ್ಪೆ ರೋಗ ಬಂದರೆ ರೇಷ್ಮೆ ಹುಳುಗಳಿಗೆ ಹಾಕಿದ ಬಂಡವಾಳವೂ ಬರುವುದಿಲ್ಲ. 3-4 ವರ್ಷಗಳ ಹಿಂದೆ ಪ್ರತಿ ಕೆ.ಜಿಗೆ 300 ರೂ ದರ ಸಿಕ್ಕರೂ ಲಾಭವಾಗುತ್ತಿತ್ತು. ಆದರೆ ಕಾರ್ಮಿಕರ ಕೂಲಿ ಸೇರಿದಂತೆ ಇನ್ನಿತರ ಸಲಕರಣೆಗಳ ಬೆಲೆ ಹೆಚ್ಚಾಗಿರುವುದರಿಂದ ಸದ್ಯ ಕೆ.ಜಿಗೆ ₹ 500 ದರ ಸಿಕ್ಕರೆ ಲಾಭವಾಗುತ್ತದೆ’ ಎನ್ನುತ್ತಾರೆ ರಾಜೂರ ಗ್ರಾಮದ ರೇಷ್ಮೆ ಬೆಳೆಗಾರರಾದ ಅಮರೇಶ ಕಮಾಟ್ರ. ʼಕಳೆದ 3 ವರ್ಷದಿಂದ ರೇಷ್ಮೆ ಗೂಡಿನ ಬೆಲೆ ಕುಸಿದಿದ್ದಿಲ್ಲ. ಈ ಬಾರಿ ಅರ್ಧದಷ್ಟು ಬೆಲೆ ಕುಸಿದಿದೆ. ಬೆಲೆ ಕುಸಿತಕ್ಕೆ ಉತ್ಪಾದಕರು ಹೆಚ್ಚಾಗಿರುವುದು ಹಾಗೂ ಚೈನಾದಿಂದ ರೇಷ್ಮೆ ಗೂಡು ಆಮದು ಆಗುತ್ತಿರುವುದರಿಂದ ಸ್ಥಳೀಯ ರೈತರು ಬೆಳೆದ ರೇಷ್ಮೆ ಗೂಡಿನ ಬೆಲೆ ಕುಸಿತ ಕಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆ ಬೆಲೆ ಕುಸಿದಾಗ ಪ್ರತಿ ಕೆ.ಜಿಗೆ ₹ 50 ಸಂಕಷ್ಪ ಪರಿಹಾರ ನಿಧಿ ಎಂದು ನೀಡುತ್ತಿದ್ದರು. ಆದರೆ ಬೆಲೆ ಜಾಸ್ತಿ ಆದಾಗ ಬಂದ್‌ ಆಗಿದ್ದು ಸರ್ಕಾರ ಈಗ ಮತ್ತೆ ಅದನ್ನು ಆರಂಭಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕುʼ ಎಂದು ಜಿಲ್ಲಾ ರೇಷ್ಮೆ ಉತ್ಪಾದಕ ಕಂಪನಿ ಉಪಾಧ್ಯಕ್ಷ ಅಂದಪ್ಪ ಅಂಗಡಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.