ಲಕ್ಷ್ಮೇಶ್ವರ: ‘ನಮ್ಮ ನಾಡಿನ ಪುರಾತನ ಇತಿಹಾಸ ಸಾರುವ ಪಾರಂಪರಿಕ ತಾಣಗಳಾದ ದೇವಸ್ಥಾನ, ಮಸೀದಿ, ಶಿಲಾ ಶಾಸನಗಳನ್ನು ರಕ್ಷಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ 25 ಸಾವಿರ ಪಾರಂಪರಿಕ ತಾಣಗಳು ಇದ್ದು ಅವುಗಳಲ್ಲಿ ಕೇವಲ 850 ತಾಣಗಳು ಪುರಾತತ್ವ ಇಲಾಖೆಗೆ ಒಳಪಟ್ಟಿವೆ. ಉಳಿದವುಗಳು ರಕ್ಷಿತ ತಾಣಗಳಾಗಿ ಉಳಿದುಕೊಂಡಿವೆ. ನಮ್ಮ ಸರ್ಕಾರ ಬಂದ ನಂತರ ಮತ್ತೆ 250 ತಾಣಗಳನ್ನು ಪುರಾತತ್ವ ಪಟ್ಟಿಗೆ ಸೇರಿಸಲಾಗಿದೆ. ಉಳಿದವುಗಳನ್ನು ಕೂಡ ಇಲಾಖೆಗೆ ಒಳಪಡಿಸಿ ಅವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.
‘ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಗದಗ ಜಿಲ್ಲೆಯಲ್ಲಿ ಹತ್ತಾರು ಪ್ರವಾಸಿ ತಾಣಗಳು ಇವೆ. ಆದರೆ ಪ್ರಚಾರದ ಕೊರತೆಯಿಂದ ಅವು ಬೆಳಕಿಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಪುರಾತನ ಪಾರಂಪರಿಕ ಸ್ಥಳಗಳನ್ನು ಪ್ರವಾಸಿ ಸ್ಥಳಗಳನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.
ಸುಜಾತಾ ದೊಡ್ಡಮನಿ, ತಹಶೀಲ್ದಾರ್ ವಾಸುದೇವ ಸ್ವಾಮಿ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ನ ಅಧ್ಯಕ್ಷರು, ಸದಸ್ಯರು, ಭಕ್ತರು ಇದ್ದರು.
ಸೋಮೇಶ್ವರ ದೇವಸ್ಥಾನದ ಉತ್ತರದ ದ್ವಾರ ಶಿಥಿಲಗೊಂಡಿದ್ದು ಅದರ ಜೀರ್ಣೋದ್ಧಾರಕ್ಕೆ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಲಾಗುವುದುಎಚ್.ಕೆ. ಪಾಟೀಲ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.