ADVERTISEMENT

ರೋಣ | ಸರ್ಕಾರಿ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳೇ ಕಂಟಕ: ಆರೋಪ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 4:58 IST
Last Updated 4 ಜುಲೈ 2024, 4:58 IST
ಇಟಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಚಿತ್ರ
ಇಟಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಚಿತ್ರ   

ರೋಣ: ಸರ್ಕಾರಿ ಶಾಲೆಯಿಂದ 2.5 ಕಿ.ಮೀ ದೂರದಲ್ಲಿ ಖಾಸಗಿ ಶಾಲೆ ತೆರೆಯಬೇಕು ಎಂಬ ನಿಯಮವಿದೆ. ಅದಾಗ್ಯೂ ಶಿಕ್ಷಣ ಇಲಾಖೆಯ ಅಧಿಕಾರಗಳ ಕೃಪಾಕಟಾಕ್ಷದಿಂದ ಸರ್ಕಾರಿ ಶಾಲೆಯ ಕಂಪೌಡ ಪಕ್ಕದಲ್ಲಿಯೇ ಧರ್ಮಗುರು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನಿಂದ ಸ್ಕೈಲಾರ್ಕ್‌ ಖಾಸಗಿ ಶಾಲೆ ತೆರೆಯಲಾಗಿದೆ. ಈ ಮೂಲಕ ಸರ್ಕಾರಿ ಶಾಲೆ ಮುಚ್ಚಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಕೆಲ ಸದಸ್ಯರು ಶಿಕ್ಷಣ ಇಲಾಖೆಯ ಅಧಿಕಾರಗಳ ವಿರುದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಟಗಿ ಗ್ರಾಮದ ಎಸ್.ವೈ. ಹುದ್ದಾರ ಹಾಗೂ ಮನೆತನದವರು ಸ್ಕೈಲಾರ್ಕ ಖಾಸಗಿ ಶಾಲೆಯೊಂದನ್ನು ತೆರೆದಿದ್ದಾರೆ. ಇದರಿಂದ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಸರ್ಕಾರಿ ಶಾಲೆಗೆ ಬರುವ ಮಕ್ಕಳನ್ನು ತಮ್ಮ ಶಾಲೆಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಶಾಲೆಗೆ ತೆರಳುವ ರಸ್ತೆಯೂ ನಮ್ಮ ಜಾಗೆಯಲ್ಲಿದೆ ಎಂದು ಮಕ್ಕಳಿಗೆ ಶಾಲೆಗೆ ತೆರಳಲು ತೊಂದರೆಯಾಗುವಂತೆ ರಸ್ತೆಯಲ್ಲಿಯೇ ಅಡ್ಡದಿಡ್ಡಿಯಾಗಿ ದೊಡ್ಡ ದೊಡ್ಡ ವಾಹನಗಳನ್ನು ನಿಲ್ಲಿಸುತ್ತಾರೆ. ಮುಳ್ಳಿನ‌ ಬೇಲಿ ಹಾಕುತ್ತಾರೆ. ಗಟಾರು ನೀರು ‌ಸರ್ಕಾರಿ ಶಾಲಾ‌ ಆವರಣದಲ್ಲಿ ಹರಿಯುವಂತೆ ಮಾಡುತ್ತಾರೆ. ಖಾಸಗಿ ಶಾಲೆ ತೆರೆಯಲು ಪರವಾನಿಗೆ ಪಡೆದಿರುವುದು ಜಾಗೆ ಬೇರಡೆ ಇದೆ. ಆದರೆ ಅಲ್ಲಿ ಶಾಲೆ ತೆರೆಯದೇ, ಸರ್ಕಾರಿ ಶಾಲೆ ಕಂಪೌಂಡ್‌ ಗೇಟ್‌ಗೆ ಹೊಂದಿಕೊಂಡೇ ಖಾಸಗಿ ಶಾಲೆ ನಿಯಮ ಬಾಹೀರವಾಗಿ ತೆರೆದಿದ್ದಾರೆ. ಕಳೆದ 10 ವರ್ಷಗಳಿಂದ ಡಿಡಿಪಿಐಗೆ, ಬಿಇಒ ಅವರಿಗೆ ಲಿಖಿತ ದೂರು ಸಲ್ಲಿಸಿದರೂ ಈವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ.‌ ಕೂಡಲೇ ಖಾಸಗಿ ಶಾಲೆ ತೆರುವಿಗೆ ಕ್ರಮ ಕೈಗೊಳ್ಳಬೇಕು’ ಎಂದು ಎಸ್‌ಡಿಎಂಸಿ ಸದಸ್ಯರು ಆಗ್ರಹಿಸುತ್ತಿದ್ದಾರೆ.

ಕ್ರಮ ಕೈಗೊಳ್ಳದ ಅಧಿಕಾರಿಗಳು: ಇಟಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಪಿ.ಅಡಗತ್ತಿ 2013ರಿಂದ 2023 ರ ವರೆಗೆ ಲಕ್ಷಾಂತರ ಹಣ ದುರ್ಬಳಕೆ ಮಾಡಿಕೊಂಡಿದ್ದು ಶಾಲೆಯ ಚಾವಣಿಗೆ ಹೊದಿಸಿದ್ದ ತಗಡಿನ ಸೀಟಗಳನ್ನು ತೆರವುಗೊಳಿಸಿ, ಹೊಸ ತಗಡಿನ ಸೀಟ ಅಳವಡಿಸಲಾಗಿದೆ. ಆದರೆ ತೆರವುಗೊಳಿಸಿದ ಹಳೆಯ 150 ಸೀಟುಗಳನ್ನು ಬೇರೆಡೆ ಮಾರಾಟ ಮಾಡಿದ್ದಾರೆ. ಆ ಹಣವನ್ನು ಮುಖ್ಯ ಶಿಕ್ಷಕರಾಗಿದ್ದ ಎಸ್.ಪಿ.ಅಡಗತ್ತಿ ಅವರು ಮಾರಾಟ ಮಾಡಿರುವ ಕುರಿತಾಗಲಿ, ಮಾರಾಟ ಮಾಡಿ ಬಂದಂತಹ ಹಣವನ್ನು ಶಾಲಾ ಖಾತೆಗೆ ತುಂಬುವದಾಗಲಿ ಮಾಡದೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಂತೆ ಅನೇಕ ಅವ್ಯವಹಾರ ಮಾಡಿದ್ದು, ಶಾಲೆಯ ಲಕ್ಷಾಂತರ ಹಣ ಲೆಕ್ಕಕ್ಕೆ ತಾಳೆಯಾಗುತ್ತಿಲ್ಲ. ಹಣ ದುರ್ಬಳಕೆ ಆರೋಪ ತಮ್ಮ‌ ಮೇಲೆ ಬರುತ್ತಿದಂತೆ ಮುಖ್ಯ ಶಿಕ್ಷಕ ಎಸ್.ಪಿ.ಅಡಗತ್ತಿ ಅವರು ಬೇರೆ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ADVERTISEMENT

‘ಕಳೆದ 10 ವರ್ಷಗಳಲ್ಲಿ ಶಾಲೆಯಲ್ಲಿ ಬಾರೀ ಪ್ರಮಾಣದಲ್ಲಿ ಅನುದಾನ ಮತ್ತು ಹಣವನ್ನು ದುರ್ಬಳಕೆ ಮಾಡಿಕೊಂಡ ಮುಖ್ಯ ಶಿಕ್ಷಕ ಎಸ್.ಪಿ.ಅಡಗತ್ತಿ ಅವರ ಮೇಲೆ‌ ಯಾವುದೇ ಕಾನೂನು ಕ್ರಮ‌ವನ್ನು ಕೈಗೊಳ್ಳುವಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಹಾದಿಮನಿ ಆರೋಪಿಸಿದರು.

ಇಟಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಹರಿಬಿಟ್ಟ ಚರಂಡಿ ನೀರು
ಸರ್ಕಾರಿ ಶಾಲೆಯ ಹಣ ದುರ್ಬಳಕೆ ಮಾಡಿದ ಮುಖ್ಯ ಶಿಕ್ಷಕನ ಮೇಲೆ ಕಾನೂನು ಕ್ರಮಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಖಾಸಗಿ ಶಾಲೆಗೆ ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದ್ದೆವೆ. ನಾವು ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುವಲ್ಲಿ ಮುಂದಾಗಿದ್ದೆವೆ
ರುದ್ರಪ್ಪ ಹುರಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ರೋಣ
‘ಕ್ರಮ ಕೈಗೊಳ್ಳಬೇಕು’
ಯಾವುದೇ ಪರವಾನಿಗೆ ಪಡೆಯದೇ ಸರ್ಕಾರಿ ಶಾಲೆಯ ಪಕ್ಕದಲ್ಲಿಯೇ ಖಾಸಗಿ ಶಾಲೆ ಆರಂಭಿಸಿದ್ದಾರೆ. ಅವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸರ್ಕಾರಿ ಶಾಲೆಯ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಇದುವರೆಗೂ ಕೈಗೊಳ್ಳುವಲ್ಲಿ ಮುಂದಾಗಿಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗಳೊಳ್ಳಲು ಅಧಿಕಾರಿಗಳು ಹಿಂದೇಟು ಯಾಕೆ ಹಾಕುತ್ತಿದ್ದಾರೆ. ತಪ್ಪಿತಸ್ಥರ ಮೇಲೆ ಆದಷ್ಟು ಬೇಗ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಇಟಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಹಾದಿಮನಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.