ನಿಂಗಪ್ಪ ಹಮ್ಮಿಗಿ
ಶಿರಹಟ್ಟಿ: ವಿಧಾನಸಭಾ ಚುನಾವಣೆಯಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೋ ಅದೇ ಪಕ್ಷ ರಾಜ್ಯದಲ್ಲಿ ಆಡಳಿತದ ಚುಕ್ಕಾಣೆ ಹಿಡಿಯುತ್ತಾ ಬಂದಿರುವುದು ಕ್ಷೇತ್ರದ ಸಂಪ್ರದಾಯ. ಆದರೆ, ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ ಇಲ್ಲಿ ಗೆದ್ದ ಅಭ್ಯರ್ಥಿ ಪಕ್ಷ ಈ ಬಾರಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಡಾ. ಚಂದ್ರು ಲಮಾಣಿ ವಿರೋಧ ಪಕ್ಷದ ಶಾಸಕರಾಗಿದ್ದಾರೆ.
ಆಡಳಿತಾರೂಢ ಶಾಸಕರಿಂದಲೇ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಇನ್ನು ವಿರೋಧ ಪಕ್ಷದ ಶಾಸಕರಾಗಿರುವ ಡಾ. ಚಂದ್ರು ಲಮಾಣಿ ಅವರು ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಅಂಟಿರುವ ‘ಹಿಂದುಳಿದ ತಾಲ್ಲೂಕು’ ಎಂಬ ಹಣೆಪಟ್ಟಿಯನ್ನು ಅಳಿಸುತ್ತಾರೆಯೇ ಎಂಬ ಚರ್ಚೆ ಕೂಡ ನಡೆಯುತ್ತಿದೆ. ವಿಶೇಷ ಅನುದಾನ ತಂದು, ತಾಲ್ಲೂಕಿಗೆ ಬೇಕಾಗುವ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸುತ್ತಾರೋ ಇಲ್ಲವೋ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಶಾಸಕರ ಅಭಿವೃದ್ಧಿ ಕೆಲಸಗಳೇ ಉತ್ತರಿಸಬೇಕಿದೆ.
2008ರಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಮರುರಚನೆಯಾದ ಮೇಲೆಯೂ ಸಹ ತಾಲ್ಲೂಕು ಕೇಂದ್ರ ಅಭಿವೃದ್ಧಿಯಿಂದ ಅಕ್ಷರಶಃ ವಂಚಿತಗೊಂಡಿದೆ. ಶಿರಹಟ್ಟಿ ವಿಧಾನಸಭಾ ಹೆಸರಿನಿಂದ ಆಯ್ಕೆಯಾದ ಶಾಸಕರು ನಂತರ ಶಿರಹಟ್ಟಿ ಹಾಗೂ ಅದರ ಅಭಿವೃದ್ಧಿಯನ್ನು ಮರೆಯುತ್ತಾರೆ. ಆದರೆ ಪ್ರಸ್ತುತ ಆಯ್ಕೆಯಾದ ನೂತನ ಶಾಸಕ ಡಾ. ಚಂದ್ರು ಲಮಾಣಿ ಅವರ ಮೇಲೆ ತಾಲ್ಲೂಕಿನ ಜನತೆ ಎಲ್ಲಿಲ್ಲದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಎಪಿಎಂಸಿ ಸ್ಥಾಪನೆಗೆ ಆಗ್ರಹ: ಶಿರಹಟ್ಟಿಯಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಮಾಡಬೇಕು ಎಂಬ ರೈತರ ಬೇಡಿಕೆ ಹಲವು ವರ್ಷಗಳಿಂದ ಕೇವಲ ಬೇಡಿಕೆಯಾಗಿಯೇ ಉಳಿದುಕೊಂಡಿದೆ. ನೂತನ ಶಾಸಕರು ಇದರ ಬಗ್ಗೆ ಕಾಳಜಿ ವಹಿಸಿ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸಿದರೆ ತಾಲ್ಲೂಕಿನ ರೈತರು ಬೆಳೆದ ಬೆಳೆಗಳನ್ನು ಸ್ಥಳೀಯವಾಗಿಯೇ ಮಾರಾಟ ಮಾಡಲು ತುಂಬಾ ಅನುಕೂಲವಾಗುತ್ತದೆ ಎಂಬುದು ರೈತ ಸಮುದಾಯದ ಒತ್ತಾಸೆಯಾಗಿದೆ.
ಇವೆಲ್ಲವುಗಳ ಜತೆಗೆ ತಾಲ್ಲೂಕು ಕೇಂದ್ರಕ್ಕೆ ಸುಸಜ್ಜಿತವಾದ ಒಂದು ನಿರೀಕ್ಷಣಾ ಮಂದಿರ ನಿರ್ಮಾಣವಾಗಬೇಕು. ತಾಲ್ಲೂಕಿನ ಐತಿಹಾಸಿಕ, ಪ್ರವಾಸಿ ತಾಣಗಳಿಗೆ ಕಾಯಕಲ್ಪ ಒದಗಿಸುವುದು. ಕಪ್ಪತ್ತಗುಡ್ಡದ ರಕ್ಷಣೆ ಹಾಗೂ ಆಯುರ್ವೇದ ಕಾಲೇಜು ಸ್ಥಾಪನೆ. ಪಟ್ಟಣದ ಸಾರಿಗೆ ಬಸ್ ಡಿಪೋದ ನೂತನ ರಸ್ತೆ ನಿರ್ಮಾಣ, ನೂತನ ತಾಲ್ಲೂಕು ಆಸ್ಪತ್ರೆ, ನ್ಯಾಯಾಲಯದ ಕಟ್ಟಡ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಕ್ಕೆ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಜನರ ಆಶಯವಾಗಿದೆ.
ಶಿರಹಟ್ಟಿ ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಅವಶ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.- ಡಾ.ಚಂದ್ರು ಲಮಾಣಿ ಶಾಸಕರು
ರೈತರ ನೀರಾವರಿ ಬೇಡಿಕೆ ತಾಲ್ಲೂಕಿನ ಉದ್ದಕ್ಕೂ ಹರಿಯುತ್ತಿರುವ ತುಂಗಭದ್ರಾ ನದಿಯ ನೀರನ್ನು ಬಳಸಿ ಶಾಶ್ವತ ನೀರಾವರಿ ಯೋಜನೆಯನ್ನು ಇದುವರೆಗೂ ಯಾವ ಶಾಸಕರು ಕೈಗೊಂಡಿಲ್ಲ. ಸಾಸಲವಾಡ ಹೊಳೆ-ಇಟಗಿ ಏತ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳನ್ವಯ ತಾಲ್ಲೂಕಿನ ರೈತರಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಶಾಸಕ ಡಾ.ಚಂದ್ರು ಲಮಾಣಿ ನೀಡಿದ್ದೆ ನಿಜವಾದರೆ ಕ್ಷೇತ್ರದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯಲಿದೆ ಎನ್ನುತ್ತಾರೆ ಕ್ಷೇತ್ರದ ರೈತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.