ಮುಂಡರಗಿ: ‘ಸಮಾಜ ಹಾಗೂ ದೇಶ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು. ಗುರುಗಳು ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರಿಗೆ ದಾರಿ ದೀಪವಾಗಿದ್ದಾರೆ. ಅಂತಹ ಗುರುಗಳನ್ನು ನಾವೆಲ್ಲ ಸದಾ ಸ್ಮರಿಸಬೇಕು’ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಪಟ್ಟಣದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 136ನೇ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ತಾಲ್ಲೂಕಿನಲ್ಲಿರುವ ಶಾಲೆಗಳ ಅಭಿವೃದ್ಧಿಗೆ ₹5 ಕೋಟಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಮಂಜೂರಾದ ತಕ್ಷಣ ಹಂತ, ಹಂತವಾಗಿ ಎಲ್ಲ ಶಾಲೆಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ‘ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರಾಮಾಣಿವಾಗಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಲ್ಲ ಶಿಕ್ಷಕರು ಪಠ್ಯಗಳಿಗೆ ನೀಡಿದಷ್ಟೆ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು’ ಎಂದರು.
ಸಾನ್ನಿಧ್ಯ ವಹಿಸಿದ್ದ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ‘ನಾಡಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಅನುದಾನಿತ ಶಾಲೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಸರ್ಕಾರ ಖಾಸಗಿ ಅನುದಾನಿತ ಶಾಲೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅವಕಾಶ ನೀಡಬೇಕು’ ಎಂದು ತಿಳಿಸಿದರು.
ಪ್ರಾಧ್ಯಾಪಕ ರಮೇಶ ಸಂಕರಡ್ಡಿ, ಬಸವರಾಜ ಉಮರಾಣಿ ಉಪನ್ಯಾಸ ನೀಡಿದರು. ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅನ್ನದಾನೀಶ್ವರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಫಡ್ನೇಶಿ ಪ್ರಾಸ್ತಾವಿಕ ಮಾತನಾಡಿದರು. ಹನುಮರಡ್ಡಿ ಇಟಗಿ ನಿರೂಪಿಸಿದರು. ಎಸ್.ಡಿ.ಬಸೇಗೌಡ್ರ ಕೊನೆಯಲ್ಲಿ ವಂದಿಸಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಡಿ.ಡಿ.ಮೋರನಾಳ, ಹೇಮಗಿರೀಶ ಹಾವಿನಾಳ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಕೊಟ್ರೇಶ ಅಂಗಡಿ, ಶೋಭಾ ಮೇಟಿ, ಕುಮಾರಸ್ವಾಮಿ ಹಿರೇಮಠ, ಜ್ಯೋತಿ ಹಾನಗಲ್ಲ, ಕವಿತಾ ಉಳ್ಳಾಗಡ್ಡಿ, ಎರ್ರಿಸ್ವಾಮಿ.ಪಿ.ಎಸ್., ವಿಶ್ವನಾಥ ಹೊಸಮನಿ, ನಾಗರಾಜ ಹಳ್ಳಿಕೇರಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.