ADVERTISEMENT

ರೋಣ: ಡಾ.ಎಚ್.ಎಲ್.ಗಿರಡ್ಡಿ ವರ್ಗಾವಣೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:40 IST
Last Updated 19 ನವೆಂಬರ್ 2024, 15:40 IST
ಡಾ.ಎಚ್.ಎಲ್.ಗಿರಡ್ಡಿ ವರ್ಗಾವಣೆ ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಡಾ.ಎಚ್.ಎಲ್.ಗಿರಡ್ಡಿ ವರ್ಗಾವಣೆ ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು   

ರೋಣ: ಪಟ್ಟಣದ ಭೀಮಸೇನ ಜೋಶಿ ತಾಲ್ಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಡಾ.ಎಚ್.ಎಲ್. ಗಿರಡ್ಡಿ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ರೋಣ ಪಟ್ಟಣದಲ್ಲಿ ಮಂಗಳವಾರ ವಿವಿಧ ಸಂಘಟನೆಗಳು ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಪುರಸಭೆ ಸದಸ್ಯರಾದ ಸಂಗಪ್ಪ ಜಿಡ್ಡಿಬಾಗಿಲ ಮಾತನಾಡಿ, ‘ಕಳೆದ ಹಲವು ದಶಕಗಳಿಂದ ಡಾ. ಗಿರಡ್ಡಿ ಅವರು ರೋಣ ತಾಲ್ಲೂಕು ಆಸ್ಪತ್ರೆಯಲ್ಲಿ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ತಜ್ಞ ವೈದ್ಯರ ಕೊರತೆ ಇದ್ದರೂ ಅವರು ಎಲ್ಲವನ್ನೂ ನಿಭಾಯಿಸಿಕೊಂಡು ಇಲ್ಲಿಯ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತ ಬಂದಿದ್ದಾರೆ. ತಾಲ್ಲೂಕಿನಲ್ಲಿ ಅನೇಕ ಶಸ್ತ್ರ ಚಿಕಿತ್ಸೆಗಳನ್ನು ಮಾಡುವ ಮೂಲಕ ಬಡ ಜನರ ಆಶಾಕಿರಣವಾಗಿದ್ದಾರೆ. ಇಂತಹ ಉತ್ತಮ ವೈದ್ಯರನ್ನು ವರ್ಗಾವಣೆಗೊಳಿಸುತ್ತಿರುವುದು ಖಂಡನೀಯ. ಕೂಡಲೇ ಜಿಲ್ಲಾ ವೈದ್ಯಾಧಿಕಾರಿ ಅವರ ವರ್ಗಾವಣೆಯನ್ನು ರದ್ದುಗೊಳಿಸಬೇಕು. ಅವರನ್ನು ಇಲ್ಲಿಯೇ ಮುಂದುವರಿಯಲು ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಅರ್ಜುನ ಕೊಪ್ಪಳ ಮಾತನಾಡಿ, ‘ತಾಲ್ಲೂಕಿನ ವಿವಿಧ ಗ್ರಾಮಗಳ ಅನೇಕ ಜನರು ಚಿಕಿತ್ಸೆ ಪಡೆಯಲು ತಾಲ್ಲೂಕು ಆಸ್ಪತ್ರೆಗೆ ಬರುತ್ತಾರೆ. ಡಾ.ಎಚ್.ಎಲ್. ಗಿರಡ್ಡಿ ಅವರ ಸೇವೆ ತಾಲ್ಲೂಕಿಗೆ ಅವಶ್ಯಕವಾಗಿದ್ದು ಅವರ ವರ್ಗಾವಣೆ ಮಾಡಬಾರದು. ಅವರು ಇಲ್ಲಿಯೇ ಇರುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಜಯ ರೆಡ್ಡರ, ನಾಗರಾಜ ಪಲ್ಲೆದ, ನಾಗಪ್ಪ ದೇಶಣ್ಣವರ, ಎ.ವೈ. ನವಲಗುಂದ, ವೈ.ವಿ. ಕಿರೇಸೂರ, ಹಣಮಂತ ಚಲವಾದಿ, ರವಿ ದೇಶಣ್ಣವರ, ಅಸ್ಲಾಂ ಕೊಪ್ಪಳ, ಅಬ್ದುಲ್ಲ ಹೂಸೂರ, ಮಹದೇವಪ್ಪ ಕಳಸಣ್ಣವರ, ಎಂ.ಕೆ. ಎಲಿಗಾರ, ಸಿ.ಎಚ್. ಹಲಗಿ, ಎಂ.ಎಚ್. ನಂದಿ, ಎಸ್.ಪಿ. ಚಲವಾದಿ, ಅಜಯ್ ಕೆ.ಎಸ್, ಎನ್.ಎಫ್. ದೊಡ್ಮನಿ, ಅಶ್ಫಾಕ್ ಮುಲ್ಲಾ, ಬಿ.ಎಂ. ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.