ADVERTISEMENT

ನರಗುಂದ; ಬಸ್ ನಿಲುಗಡೆಗೆ ಆಗ್ರಹ: ವಿದ್ಯಾರ್ಥಿ, ಪಾಲಕರಿಂದ ಬಸ್ ಡಿಪೊಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:45 IST
Last Updated 19 ನವೆಂಬರ್ 2024, 15:45 IST
ನರಗುಂದ ತಾಲ್ಲೂಕಿನ ಭೈರನಹಟ್ಟಿಯಲ್ಲಿ ಬಸ್‌ಗಳು ನಿಲುಗಡೆಯಾಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪಾಲಕರು, ವಿದ್ಯಾರ್ಥಿಗಳು ಮಂಗಳವಾರ ನರಗುಂದ ಪಟ್ಟಣದ ಕೆಎಸ್ಆರ್‌ಟಿಸಿ ಡಿಪೊಗೆ ಮುತ್ತಿಗೆ ಹಾಕಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು
ನರಗುಂದ ತಾಲ್ಲೂಕಿನ ಭೈರನಹಟ್ಟಿಯಲ್ಲಿ ಬಸ್‌ಗಳು ನಿಲುಗಡೆಯಾಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪಾಲಕರು, ವಿದ್ಯಾರ್ಥಿಗಳು ಮಂಗಳವಾರ ನರಗುಂದ ಪಟ್ಟಣದ ಕೆಎಸ್ಆರ್‌ಟಿಸಿ ಡಿಪೊಗೆ ಮುತ್ತಿಗೆ ಹಾಕಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು   

ನರಗುಂದ: ಈಚಿನ ಕೆಲವು ದಿನಗಳಿಂದ ಕೊಣ್ಣೂರ-ನರಗುಂದ ಮಾರ್ಗವಾಗಿ ತೆರಳುವ ಬಸ್‌ಗಳು ಮಧ್ಯದಲ್ಲಿ ಬರುವ ಭೈರನಹಟ್ಟಿ ಗ್ರಾಮದಲ್ಲಿ ನಿಲುಗಡೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಭೈರನಹಟ್ಟಿಯ ಪಾಲಕರು, ವಿದ್ಯಾರ್ಥಿಗಳು ಮಂಗಳವಾರ ನರಗುಂದ ಪಟ್ಟಣದಲ್ಲಿರುವ  ಕೆಎಸ್ಆರ್‌ಟಿಸಿ ಡಿಪೊಗೆ ಮುತ್ತಿಗೆ ಹಾಕಿದರು.

ಟ್ರ್ಯಾಕ್ಟರ್‌ನಲ್ಲಿ ಬಂದಿದ್ದ ಪಾಲಕರು, ವಿದ್ಯಾರ್ಥಿಗಳು ಡಿಪೊ ಎದುರು ಪ್ರತಿಭಟನೆಗೆ ಮುಂದಾದರು. ಸಾರಿಗೆ ವಿಭಾಗದ ಅಧಿಕಾರಿಗಳೊಡನೆ ವಾಗ್ವಾದ ನಡೆಸಿದರು. ಕೆಲವು ಕಾಲ ಗೊಂದಲದ ವಾತಾವರಣ ಉಂಟಾಯಿತು.

‘ಬಸ್‌ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಅಕ್ಟೋಬರ್ ತಿಂಗಳಲ್ಲಿಯೇ ನಾಲ್ಕೈದು ಬಾರಿ ಬಸ್ ಡಿಪೊಗೆ ಭೇಟಿ‌ ನೀಡಿದ್ದೇವೆ. ಬೈರನಹಟ್ಟಿ ಗ್ರಾಮದಿಂದ ಬೆಳಿಗ್ಗೆ 8.30 ರಿಂದ 9ರೊಳಗೆ 8 ಕಿ.ಮೀ ದೂರದಲ್ಲಿರುವ ನರಗುಂದ ಪಟ್ಟಣದ ಶಾಲೆಗಳಿಗೆ ಹೋಗಬೇಕು. ಆದರೆ ಯಾವುದೇ ಬಸ್‌ಗಳು ನಿಲ್ಲುತ್ತಿಲ್ಲ. ಇದರಿಂದ ನಿತ್ಯ ವಿದ್ಯಾರ್ಥಿಗಳು ನರಗುಂದಕ್ಕೆ ತೆರಳಲು ತೊಂದರೆ ಪಡುವಂತಾಗಿದೆ. ಇಲ್ಲಿ ಸಂಚರಿಸುವ ಬಸ್‌ಗಳನ್ನು ನಿಲುಗಡೆ ಮಾಗಬೇಕು.ಇಲ್ಲವಾದರೆ ನರಗುಂದ ಭೈರನಹಟ್ಟಿಗೆ ಶಾಲೆ–ಕಾಲೇಜು ಸಮಯಕ್ಕೆ ಪ್ರತ್ಯೇಕ ಬಸ್ ಬಿಡಬೇಕು’ ಎಂದು ಪಾಲಕರು, ವಿದ್ಯಾರ್ಥಿಗಳು ಆಗ್ರಹಿಸಿದರು.

ADVERTISEMENT

ದೂರಿನ ಎಚ್ಚರಿಕೆ: ‘ಬಸ್‌ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಇದೇ ರೀತಿ ಮುಂದುವರಿದರೆ ನಿಮ್ಮ ಮೇಲೆ ಪೊಲೀಸ್‌ ದೂರು ಕೊಡ್ತೀವಿ ಎಂದು ಪಾಲಕರು, ವಿದ್ಯಾರ್ಥಿಗಳು ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು.

‘ಈಚಿನ ದಿನಗಳಲ್ಲಿ ಬಸ್‌ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಜೊತೆ ಕಂಡಕ್ಟರ್‌ ವರ್ತನೆ ಸರಿಯಾಗಿಲ್ಲ. ಏಕವಚನ ಮತ್ತು ಅವಾಚ್ಯ ಶಬ್ದಗಳ ಬಳಕೆ ಮಾಡಿ ವಿದ್ಯಾರ್ಥಿಗಳನ್ನು ನಿಂದನೆ ಮಾಡಲಾಗುತ್ತಿದೆ. ಶಾಲೆಗೆ ಹೋಗಬೇಕೆಂಬ ಉತ್ಸಾಹವನ್ನೇ ಕಳೆದುಕೊಳ್ಳುತ್ತಿದ್ದೇವೆ. ಪರೀಕ್ಷೆ ಹತ್ತಿರ ಬಂದಾಗ ನಮ್ಮ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ’ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.

ಮನವಿ: ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದ್ದನ್ನು ಖಂಡಿಸಿ ಭೈರನಹಟ್ಟಿ ವಿದ್ಯಾರ್ಥಿಗಳ ಜೊತೆ ಹದಲಿ, ಸುರಕೋಡ ಗ್ರಾಮದ ವಿದ್ಯಾರ್ಥಿಗಳು ಸಹ ಘಟಕ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಅವರಿಗೆ ಮನವಿ ಸಲ್ಲಿಸಿದರು.

ಬಿ.ಬಿ. ಐನಾಪುರ, ಚಂದ್ರು ದಂಡಿನ, ಹನುಮಂತ ಸಂಗಟಿ, ಪ್ರಕಾಶ ನರಸಾಪುರ, ನಾಗೇಶ ನರಸಾಪುರ, ಜ್ಞಾನೇಶ ಮುನೇನಕೊಪ್ಪ, ಬಸವಣ್ಣೆವ್ವ ಮೆಣಸಿನಕಾಯಿ, ರೇಣುಕಾ ನರಸಾಪುರ, ರಮೇಶ ವೀರನಗೌಡ್ರ ಇದ್ದರು.

ನರಗುಂದ ತಾಲ್ಲೂಕಿನ ಭೈರನಹಟ್ಟಿಯಲ್ಲಿ ಬಸ್ ಗಳು ನಿಲುಗಡೆಯಾಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪಾಲಕರು ವಿದ್ಯಾರ್ಥಿಗಳು ಮಂಗಳವಾರ ನರಗುಂದ ಪಟ್ಟಣಕ್ಕೆ ಆಗಮಿಸಿ ಕೆಎಸ್ಆರ್ಟಿಸಿ ಡಿಪೋಗೆ ವ್ಯವಸ್ಥಾಪಕ ಪ್ರಶಾಂತ ಪಾನಬುಡೆಯವರಿಗೆ ಮನವಿ ಸಲ್ಲಿಸಿದರು..

ರೋದಿಸಿದ ಬಾಲಕಿ

6ನೇ ತರಗತಿಯ ಗಾಯತ್ರಿ ಎಂಬ ವಿದ್ಯಾರ್ಥಿನಿ.ಅಳುತ್ತಲೇ ನಾವು ನಿತ್ಯ ಶಾಲೆಗೆ ಹೋಗಬೇಕೆಂದರೆ ಸಮಯಕ್ಕೆ ಸರಿಯಾಗಿ ಬಸ್ಸಗಳೇ ಬರುತ್ತಿಲ್ಲ. ಶಾಲೆಗೆ ತಡವಾಗಿ ಹೋದರೆ ದಂಡ ಹಾಕುತ್ತಾರೆ ಶಿಕ್ಷೆ ನೀಡುತ್ತಾರೆ. ಹೀಗಾದರೆ ಸಕಾಲಕ್ಕೆ ಶಾಲೆಗೆ ತೆರಳಿ ಶಿಕ್ಷಣ ಪಡೆಯುವುದಾದರೂ ಹೇಗೆ ಎಂದು ರೋಧಿಸಿದ್ದು ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.