ADVERTISEMENT

ಲಕ್ಷ್ಮೇಶ್ವರ | ತಹಶೀಲ್ದಾರ್‌ ಭರವಸೆ: ಉಪವಾಸ ಸತ್ಯಾಗ್ರಹ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 13:36 IST
Last Updated 6 ನವೆಂಬರ್ 2024, 13:36 IST
ಲಕ್ಷ್ಮೇಶ್ವರದ ತಹಶೀಲ್ದಾರರ ಕಚೇರಿಯ ಎದುರು ಬುಧವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಗೋಸಾವಿ ಸಮಾಜದವರನ್ನು ತಹಶೀಲ್ದಾರ್‌ ವಾಸುದೇವ ಸ್ವಾಮಿ ಭೇಟಿ ಮಾಡಿ ಉಪವಾಸ ಸತ್ಯಾಗ್ರಹ ಕೈ ಬಿಡಬೇಕು ಎಂದು ಮನವಿ ಮಾಡಿದರು
ಲಕ್ಷ್ಮೇಶ್ವರದ ತಹಶೀಲ್ದಾರರ ಕಚೇರಿಯ ಎದುರು ಬುಧವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಗೋಸಾವಿ ಸಮಾಜದವರನ್ನು ತಹಶೀಲ್ದಾರ್‌ ವಾಸುದೇವ ಸ್ವಾಮಿ ಭೇಟಿ ಮಾಡಿ ಉಪವಾಸ ಸತ್ಯಾಗ್ರಹ ಕೈ ಬಿಡಬೇಕು ಎಂದು ಮನವಿ ಮಾಡಿದರು   

ಲಕ್ಷ್ಮೇಶ್ವರ: ಪಟ್ಟಣದ ಪೊಲೀಸ್‌ ಠಾಣೆ ಪಿಎಸ್ಐ ಈರಪ್ಪ ರಿತ್ತಿ ಅವರನ್ನು ಅಮಾನತು ಮಾಡಬೇಕು ಎಂದು ಗೋಸಾವಿ ಸಮಾಜ, ಶ್ರೀರಾಮ ಸೇನೆ ಕಾರ್ಯಕರ್ತರು ನಡೆಸುತ್ತಿರುವ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ಬುಧವಾರ ಎಂಟನೇ ದಿನಕ್ಕೆ ಕಾಲಿಟ್ಟಿದೆ.

ಮಂಗಳವಾರ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಗೋಸಾವಿ ಸಮಾಜದವರು ಹೇಳಿದ್ದರು. ಅದರಂತೆ ಬುಧವಾರದಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ವಾಸುದೇವ ಸ್ವಾಮಿ ಅವರು ಗೋಸಾವಿ ಸಮಾಜದವರೊಂದಿಗೆ ಮಾತನಾಡಿ ‘ಐದು ದಿನಗಳ ಸಮಯ ಕೊಡಿ. ಹಿರಿಯ ಅಧಿಕಾರಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಅಲ್ಲಿಯವರೆಗೂ ಉಪವಾಸ ಸತ್ಯಾಗ್ರಹ ಕೈ ಬಿಡಬೇಕು’ ಎಂದು ಹೇಳಿದರು.

‘ತಹಶೀಲ್ದಾರರ ಭರವಸೆಯ ಮೇರೆಗೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಿಲ್ಲಿಸುತ್ತೇವೆ. ಆದರೆ ನ್ಯಾಯ ಸಿಗುವವರೆಗೂ ಧರಣಿ ಸತ್ಯಾಗ್ರಹ ಮುಂದುವರಿಸುತ್ತೇವೆ. ಐದು ದಿನಗಳ ನಂತರ ಪಿಎಸ್‍ಐ ಮೇಲೆ ಕ್ರಮ ಕೈಗೊಳ್ಳದಿದ್ದರೆ ಧರಣಿಯ ಜೊತೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಗೋಸಾವಿ ಸಮಾಜದ ಮುಖಂಡ ಬಾಳಪ್ಪ ಗೋಸಾವಿ ಎಚ್ಚರಿಸಿದರು.

ADVERTISEMENT

ಶ್ರೀರಾಮ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಹನುಮಂತ ರಾಮಗೇರಿ, ಚಿನ್ನು ಹಾಳದೋಟದ, ಹರೀಶ ಗೋಸಾವಿ, ಗೋವಿಂದ ಗೋಸಾವಿ, ನಿಖಿಲ ಗೋಸಾವಿ, ರಾಮು ಗೋಸಾವಿ ರಾಜು ಗೋಸಾವಿ, ಜ್ಯೋತಿ ಗೋಸಾವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.