ನರಗುಂದ: ‘ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ವಕ್ಫ್‌ಗೆ ಅಪರಿಮಿತ ಅಧಿಕಾರವನ್ನುನೀಡಿದೆ. ವಕ್ಫ್ ಕಾಯ್ದೆಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ವಕ್ಫ್ ಕಾಯ್ದೆಯಿಂದ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ. ಆದ್ದರಿಂದ ಇದಕ್ಕೆ ಕೂಡಲೇ ತಿದ್ದುಪಡಿ ತಂದು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು’ ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದರು.
ಪಟ್ಟಣದ ಶಿವಾಜಿ ಮಹಾರಾಜ್ ವೃತ್ತದಲ್ಲಿ ಮಂಗಳವಾರ ಬಿಜೆಪಿ ನರಗುಂದ ಘಟಕದ ಆಶ್ರಯದಲ್ಲಿ ವಕ್ಫ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಸರ್ಕಾರ ಬೆಂಕಿಯಲ್ಲಿ ಕೈಹಾಕುವ ಕೆಲಸ ಮಾಡುತ್ತಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.
‘ರಾಜ್ಯದ ಅನೇಕ ಮಠಮಾನ್ಯಗಳ, ರೈತರ, ಪುರಾತತ್ವ ಇಲಾಖೆಯ ಆಸ್ತಿಗಳನ್ನು ತನ್ನದೆಂದು ವಕ್ಫ್ ಬೋರ್ಡ್ ಹೇಳಿದೆ. ರೈತರ ಬದುಕಿನ ಮೂಲಾಧಾರ ಕೃಷಿಯನ್ನೇ ನಾಶ ಮಾಡುವ ಹಂತಕ್ಕೆ ತಲುಪಿದೆ. ಹೀಗೆ ಮುಂದುವರಿದರೆ ದೇಶದಲ್ಲಿ ಸಂಘರ್ಷಗಳು ನಡೆಯಬಹುದು. ಸ್ವಾತಂತ್ರ್ಯ ಸಿಕ್ಕಾಗ ಮುಸ್ಲಿಮರು ದೇಶ ಬಿಟ್ಟು ಹೋದಾಗ ಅವೆಲ್ಲ ಆಸ್ತಿಗಳು ಸರ್ಕಾರದ ಆಸ್ತಿಗಳಾಗಬೇಕೆ ವಿನಾ ಯಾವ ವಕ್ಫ್‌ಗೂ ಸಂಬಂಧಿಸಿಲ್ಲ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಮತಗಳ ಆಸೆಯಿಂದ ಬಹುಸಂಖ್ಯಾತ ಹಿಂದೂಗಳ ಆಸ್ತಿಗಳನ್ನು ಮುಸ್ಲಿಮರಿಗೆ ಹಂಚುವಂತಹ ಕಾನೂನು ತರಲಿದೆ ಎಂದು 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ವಕ್ಫ್ ಕಾಯ್ದೆ ಮೂಲಕ ಮಠಮಾನ್ಯ, ಮಂದಿರ, ಕೃಷಿ ಭೂಮಿ, ಸ್ಮಶಾನ ಭೂಮಿ, ಸರ್ಕಾರದ ಆಸ್ತಿಗಳ ಪಹಣಿ ಕಾಲಂನಲ್ಲಿ ವಕ್ಫ್ ಆಸ್ತಿ ಎಂದು ದಾಖಲಿಸುತ್ತಿದ್ದಾರೆ. ಮುಸ್ಲಿಮರೂ ಸೇರಿದಂತೆ ಅನೇಕ ರೈತರು ಲಕ್ಷಾಂತರ ಎಕರೆ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.
‘ಕಾಂಗ್ರೆಸ್ ಸರ್ಕಾರ ಮುಸ್ಲಿಂ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಮುಸ್ಲಿಮರ ಓಲೈಕೆ ಹಾಗೂ ಹಿಂದೂ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುವ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ರಾಜ್ಯದ ರೈತರ ಹಿತಕ್ಕೆ ಧಕ್ಕೆಯಾಗುವಂತಹ ನಿರ್ಧಾರಗಳನ್ನು ಕೈಬಿಡಬೇಕು. ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ. ವಕ್ಫ ಕಾಯ್ದೆ ರೈತರಿಗೆ ಮರಣ ಶಾಸನವಾಗಿದ್ದು, ಕೂಡಲೇ ರದ್ದು ಗೊಳಿಸಬೇಕು’ ಎಂದು ಉಮೇಶಗೌಡ ಒತ್ತಾಯಿಸಿದರು.
ನೋಟಿಸ್: 2018-19 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲಿ ವಕ್ಫ್‌ಗೆ ಸಂಬಂಧಿಸಿ ತಾಲ್ಲೂಕಿನಲ್ಲಿ ರೈತರಿಗೆ ನೋಟಿಸ್ ಕೊಡಲಾಗಿದೆ. ಜಿಲ್ಲೆಯಲ್ಲಿ 200 ರೈತರ 774 ಎಕರೆ ಜಮೀನು ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿದೆ. ಅಕ್ರಮವಾಗಿ ಪಡೆದುಕೊಳ್ಳಲು ಮುಂದಾದರೆ, ರೈತರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ವಕ್ಪ್ ಅಡಿ ಆಸ್ತಿ ಕಳೆದುಕೊಳ್ಳುತ್ತಿರುವ ರೈತರ ಬೆನ್ನಿಗೆ ನಿಂತು ನ್ಯಾಯ ಸಿಗೋವರೆಗೂ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ತಹಶೀಲ್ದಾರ ಶ್ರೀಶೈಲ ತಳವಾರ ಅವರಿಗೆ ಬಿಜೆಪಿ ಘಟಕ ಮನವಿ ಸಲ್ಲಿಸಿತು. ಪ್ರತಿಭಟನೆಯಲ್ಲಿ ಚಂದ್ರು ದಂಡಿನ, ವಸಂತ ಜೋಗಣ್ಣವರ, ಪ್ರಕಾಶಗೌಡ ತಿರಕನಗೌಡ್ರ, ಮಾತನಾಡಿದರು. ಅಜ್ಜಪ್ಪ ಹುಡೇದ, ಅಜ್ಜನಗೌಡ ಪಾಟೀಲ, ಮುತ್ತಣ್ಣ ಜಂಗಣ್ಣವರ, ಲಿಂಗರಾಜ ಪಾಟೀಲ, ಎಸ್ ಜಿ ಮುತ್ತವಾಡ, ಶೇಖರಗೌಡ ಸಾಲಿಗೌಡ್ರ, ಸಂಭಾಜಿ ಕಾಶೀದ, ಸಿದ್ದಪ್ಪ ಎಲಿಗಾರ, ದೇವಣ್ಣ ಕಲಾಲ, ಪ್ರಶಾಂತ ಜೋಶಿ, ಮುತ್ತು ರಾಯರಡ್ಡಿ, ಕೊಟ್ರೇಶ ಕೊಟ್ರಶೆಟ್ಟಿ, ಬಸಪ್ಪ ಅಮರಗೋಳ, ಕೇದಾರಗೌಡ ಮಣ್ಣೂರ, ಸಿ.ಕೆ ರಾಚನಗೌಡ್ರ, ವಿಠ್ಠಲ ಹವಾಲ್ದಾರ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.