ಗದಗ:‘ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಪಂಡಿತ ಪುಟ್ಟರಾಜ ಕವಿ ಗವಾಯಿ ಅವರ ಸಾಹಿತ್ಯ ಪ್ರಚಾರ ಆಗಬೇಕು’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರ ಗವಾಯಿ ಮತ್ತು ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೋತ್ಸವ ಮತ್ತು ಜಾತ್ರಾಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಸಂಚಾರಿ ಸಂಗೀತ ಶಾಲೆ ಆರಂಭಿಸಿದ್ದ ಪಂಚಾಕ್ಷರಿ ಗವಾಯಿ ಅವರು ಗದಗನಲ್ಲಿ ನೆಲೆ ನಿಲ್ಲುವಂತೆ ಮಾಡಲು ಬಸರಿಗಿಡದ ವೀರಪ್ಪನವರು ಭೂದಾನ ಮಾಡಿದರು. ಇದರಿಂದಾಗಿಯೇ ಪಂಚಾಕ್ಷರಿ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮ ಎಂದು ಹೆಸರಿಟ್ಟರು. ಈ ಪುಣ್ಯಾಶ್ರಮದ ಬೆಳವಣಿಗೆಯ ಇತಿಹಾಸ ರೋಚಕವಾಗಿದೆ’ ಎಂದು ಅವರು ಸ್ಮರಿಸಿದರು.
ಪಣ್ಯಸ್ಮರಣೋತ್ಸವದ ಅಂಗವಾಗಿ ಹೊರತಂದ `ಪುಟ್ಟರಾಜ ಶತನಮನ’ ಕೃತಿ ಕುರಿತು ಧಾರವಾಡದ ಡಾ. ಸಂಗಮೇಶ ಸವದತ್ತಿಮಠ ಮಾತನಾಡಿದರು. ‘ಅಂಧ, ಅನಾಥರ ಬಾಳಿನ ಜೋತಿಯಾಗಿದ್ದ ಪುಟ್ಟರಾಜ ಗವಾಯಿ ಅವರು ಸಂಗೀತ ಲೋಕದಲ್ಲಿ ಸಾಧನೆಯ ಉತ್ತುಂಗಕ್ಕೆ ಏರಿದ್ದರು’ ಎಂದರು.
‘ಭಾರತೀಯ ಸಂಗೀತ ಕುರಿತು 90 ಲೇಖನಗಳನ್ನು ಒಳಗೊಂಡ ಪುಟ್ಟರಾಜ ಶತನಮನ ಕೃತಿ ಒಂದು ಅವಿಸ್ಮರಣೀಯ ದಾಖಲೆ’ ಎಂದರು. ರುದ್ರಗೌಡ ಅಂದಾನಗೌಡ ರಬ್ಬನಗೌಡ್ರ, ಡಾ.ಜೆ.ಎಂ. ಚಂದೂನವರ, ಅಶೋಕ ಖಟವಟೆ ದಂಪತಿಗೆ ಸನ್ಮಾನಿಸಲಾಯಿತು.
ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ನಾಗನೂರ ರುದ್ರಾಕ್ಷಮಠದ ಡಾ. ಸಿದ್ದರಾಮ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸಂಸ್ಥಾನಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಧಾರವಾಡ ಮನಗುಂಡಿ ಶ್ರೀಗುರು ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ, ಎಚ್.ಎಸ್. ವಂಕಟಾಪೂರ-ಜಿಗರಿ ಹಿರೇಮಠ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಗೋಗಿಹಳ್ಳಿ ಸಂಸ್ಥಾನಮಠದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಗದುಗಿನ ಸಂತ ಇಗ್ನಾಶಿಯಸ್ ಲೊಯೊಲಾ ದೇವಾಲಯದ ಧರ್ಮಗುರು ಫಾ. ಆಂಡ್ರ್ಯೂ ರೋಶನ್ ಆಳ್ವ ಭಾಗವಹಿಸಿದ್ದರು. ಮಾಜಿ ಸಚಿವ ಎಸ್. ಎಸ್. ಪಾಟೀಲ, ಪೀರಸಾಬ ಕೌತಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.