ADVERTISEMENT

ಭಾರಿ ಮಳೆ: ನೆಲಕ್ಕುರುಳಿದ ಭತ್ತದ ಪೈರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:48 IST
Last Updated 22 ಅಕ್ಟೋಬರ್ 2024, 14:48 IST
ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ಭಾರಿ ಮಳೆ, ಗಾಳಿಗೆ ಕೊಯ್ಲಿಗೆ ಬಂದಿರುವ ಭತ್ತದ ಪೈರು ನೆಲಕ್ಕುರುಳಿರುವುದು
ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ಭಾರಿ ಮಳೆ, ಗಾಳಿಗೆ ಕೊಯ್ಲಿಗೆ ಬಂದಿರುವ ಭತ್ತದ ಪೈರು ನೆಲಕ್ಕುರುಳಿರುವುದು   

ಮುಂಡರಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಬೆಳಗಿನ ಜಾವ ಭಾರಿ ಮಳೆ ಸುರಿದಿದ್ದು, ಮಳೆ ಹಾಗೂ ಗಾಳಿಯ ರಭಸಕ್ಕೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕೊಯ್ಲಿಗೆ ಬಂದಿದ್ದ ಪೈರು ನೆಲಕಚ್ಚಿದೆ.

ಭಾರಿ ಗಾಳಿ ಬೀಸಿದ್ದರಿಂದ ತಾಲ್ಲೂಕಿನ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪುರ, ಶೀರನಹಳ್ಳಿ, ಶಿಂಗಟಾಲೂರ, ಹಮ್ಮಿಗಿ, ಬಿದರಳ್ಳಿ ಮೊದಲಾದ ನದಿ ದಂಡೆಗಳ ಗ್ರಾಮಗಳಲ್ಲಿ ಕೊಯ್ಲಿಗೆ ಬಂದಿದ್ದ ಭತ್ತದ ಪೈರು ನೆಲಕ್ಕುರುಳಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಅಪಾರ ಪ್ರಮಾಣದ ಮೆಕ್ಕೆಜೋಳ ಬೆಳೆದಿದ್ದು, ಬಹುತೇಕ ಗ್ರಾಮಗಳಲ್ಲಿ ಮೆಕ್ಕೆಜೋಳ ಕೊಯ್ಲಿಗೆ ಬಂದಿದೆ. ಕೆಲವು ಗ್ರಾಮಗಳಲ್ಲಿ ರೈತರು ಮೆಕ್ಕೆಜೋಳ ಕೊಯ್ಲು ಮಾಡಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೆಕ್ಕೆಜೋಳದ ಒಕ್ಕಲು ಕಾರ್ಯಕ್ಕೆ ತೀವ್ರ ತೊಂದರೆಯಾಗಿದ್ದು, ರೈತರು ಪರದಾಡುವಂತಾಗಿದೆ.

ADVERTISEMENT

‌ಸಮರ್ಪಕವಾಗಿ ಬಿಸಿಲು ಬೀಳದಿರುವುದರಿಂದ ಮೆಕ್ಕೆಜೋಳ ಒಣಗಿಸುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಬಹುತೇಕ ರೈತರು ಮೆಕ್ಕೆಜೋಳ ಒಣಗಲು ರಸ್ತೆ ಮೇಲೆ ಹಾಕಿದ್ದು, ಮೆಕ್ಕೆಜೋಳದ ಬೀಜಗಳು ರಸ್ತೆಯ ಮೇಲೆ ಮೊಳಕೆಯೊಡೆಯುತ್ತಲಿವೆ. ಕೆಲವು ಭಾಗಗಳಲ್ಲಿ ತೆನೆಗಳಲ್ಲಿಯೇ ಕಾಳುಗಳು ಮೊಳಕೆಯೊಡೆಯುತ್ತಲಿವೆ.

ತಾಲ್ಲೂಕಿನ ಡಂಬಳ ಹೋಬಳಿಯ ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪುರ, ಯಕ್ಲಾಪುರ, ಹೈತಾಪುರ ಮೊದಲಾದ ಗ್ರಾಮಗಳ ಜಮೀನುಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ.

ನದಿ ಒಳಹರಿವು ಹೆಚ್ಚಳ: ಶಿವಮೊಗ್ಗ, ಮಲೆನಾಡು ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಸಾಕಷ್ಟು ಮಳೆ ಸುರಿಯುತ್ತಿದ್ದು, ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿಗೆ ಸಾಕಷ್ಟು ಹೊಸ ನೀರು ಹರಿದು ಬರುತ್ತಲಿದೆ.

ಮಂಗಳವಾರ ಬ್ಯಾರೇಜಿಗೆ 1,05,839 ಕ್ಯುಸೆಕ್ ನೀರು ಹರಿದು ಬಂದಿದ್ದು, ಬ್ಯಾರೇಜಿನ ಹಲವು ಗೇಟುಗಳ ಮೂಲಕ ಅಷ್ಟೇ ಪ್ರಮಾಣದ ನೀರನ್ನು ನದಿಪಾತ್ರಕ್ಕೆ ಹರಿಸಲಾಯಿತು. ಹೀಗಾಗಿ ತುಂಗಭದ್ರಾ ನದಿಯು ಈಗ ತುಂಬಿ ಹರಿಯುತ್ತಿದ್ದು, ನದಿ ದಂಡೆಯ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.