ADVERTISEMENT

ಗಜೇಂದ್ರಗಡ | ಮಳೆ: ಶಾಲೆ ಆವರಣ ಜಲಾವೃತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:27 IST
Last Updated 13 ಜೂನ್ 2024, 15:27 IST
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಪಶು ಚಿಕಿತ್ಸಾಲಯದ ಪಕ್ಕದಲ್ಲಿರುವ ಕೊಳವೆ ಬಾವಿ ಸುತ್ತ ಕೊಳಚೆ ನೀರು ಶೇಖರಣೆಯಾಗಿದೆ
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಪಶು ಚಿಕಿತ್ಸಾಲಯದ ಪಕ್ಕದಲ್ಲಿರುವ ಕೊಳವೆ ಬಾವಿ ಸುತ್ತ ಕೊಳಚೆ ನೀರು ಶೇಖರಣೆಯಾಗಿದೆ   

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಉತ್ತಮ ಮಳೆ ಸುರಿಯಿತು. ಸಂಜೆ 4 ಗಂಟೆ ಸುಮಾರಿಗೆ ರಭಸವಾಗಿ ಆರಂಭವಾದ ಮಳೆ ಒಂದು ಗಂಟೆಗೂ ಅಧಿಕ ಸುರಿಯಿತು.

ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಭೂಮಿ ಹಸಿಯಾಗಿದ್ದು, ಅರ್ಧ ಗಂಟೆ ಬಂದರೂ ಗುಡ್ಡಗಳಲ್ಲಿ ಕಿರು ಜಲಪಾತಗಳು ಸೃಷ್ಟಿಯಾಗುತ್ತಿವೆ. ತಗ್ಗು ಪ್ರದೇಶವಿರುವ ಜಮೀನುಗಳಲ್ಲಿ ಮಳೆ ನೀರು ನಿಂತಿದ್ದು, ಚೆಕ್‌ ಡ್ಯಾಂ, ಹಳ್ಳಗಳು ತುಂಬಿ ಹರಿಯುತ್ತಿವೆ.

ಮೋಡ ಕವಿದ ವಾತಾವರಣ ಹಾಗೂ ಮಳೆಯಿಂದ ಈಗಾಗಲೇ ಬಿತ್ತನೆ ಮಾಡಿರುವ ಹೆಸರು, ಗೋವಿನಜೋಳ, ಹತ್ತಿ, ಅಲಸಂದೆ ಸೇರಿದಂತೆ ವಿವಿಧ ಬೆಳೆಗಳು ತೇವಾಂಶ ಹೆಚ್ಚಾಗಿ ಹಾಳಾಗುವ ಹಂತಕ್ಕೆ ತಲುಪಿವೆ. ಮಳೆ ನಿಂತು ಬಿಸಿಲು ಬೀಳದಿದ್ದರೆ ಕೆಲವೇ ದಿನಗಳಲ್ಲಿ ಬೆಳೆಗಳೆಲ್ಲ ಹಾಳುಗುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣವು ರಸ್ತೆ ಹಾಗೂ ಚರಂಡಿಗಿಂತ ತಗ್ಗು ಪ್ರದೇಶದಲ್ಲಿದ್ದು, ಪ್ರತಿ ಬಾರಿ ಮಳೆ ಬಂದಾಗ ಮಳೆ ನೀರು ಶಾಲೆ ಆವರಣದಲ್ಲಿ ನಿಲ್ಲುತ್ತದೆ. ಮಕ್ಕಳು ಮಳೆ ನೀರಿನಲ್ಲಿಯೇ ಸಂಚರಿಸಬೇಕಾದ ಸ್ಥಿತಿ ಇದೆ. ಅಲ್ಲದೆ ಶಾಲೆ ಪಕ್ಕದಲ್ಲಿರುವ ಕಾಲೊನಿಯಲ್ಲಿ ಸಿ.ಸಿ ರಸ್ತೆ ಹಾಗೂ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುತ್ತಿದೆ.

ಸಮೀಪದ ರಾಜೂರ ಗ್ರಾಮದ ಪಶು ಚಿಕಿತ್ಸಾಲಯದ ಪಕ್ಕದಲ್ಲಿ ಬಯಲು ಜಾಗವಿದ್ದು, ಈ ಜಾಗದಲ್ಲಿ ಮಳೆ ನೀರು ಹಾಗೂ ಕೊಳಚೆ ನೀರು ನಿಲ್ಲುತ್ತಿದೆ. ಅಲ್ಲದೆ ಇದೇ ಜಾಗದಲ್ಲಿ ಕೊಳವೆ ಬಾವಿಯಿದೆ. ಕೊಳವೆ ಬಾವಿಯ ಕೇಸಿಂಗ್‌ ಪೈಪ್‌ ಒಡೆದಿದ್ದು, ಮಳೆ ನೀರಿನ ಜೊತೆಗೆ ಕೊಳಚೆ ನೀರು ಅಂತರ್ಜಲ ಸೇರುತ್ತಿದೆ. ಇದೇ ಕೊಳವೆ ಬಾವಿಯಿಂದ ತಾಂಡಾ ಸೇರಿದಂತೆ ಗ್ರಾಮದ ವಿವಿಧ ಬಡಾವಣೆಗಳಿಗೆ ಪ್ರತಿನಿತ್ಯ ಕುಡಿಯಲು ನೀರು ಪೂರೈಕೆ ಮಾಡಲಾಗುತ್ತಿದೆ.

‘ಸರ್ಕಾರ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಕೊಳಚೆ ನೀರು ಪೂರೈಕೆಯಾಗಿ ಅನಾರೋಗ್ಯ ಪೀಡಿತರಾದರೆ ಸ್ಥಳೀಯ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಎಂದಿದ್ದರೂ ರಾಜೂರ ಗ್ರಾಮದ ತಾಂಡಾದ ಜನರಿಗೆ ಕೊಳಚೆ ಮಿಶ್ರಿತ ನೀರು ಪೂರೈಸಲಾಗುತ್ತಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕು’ ಎಂದು ತಾಂಡಾದ ನಿವಾಸಿ ಶಿವಪ್ಪ ರಾಠೋಡ ಆಗ್ರಹಿಸಿದರು.

ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ಶೇಖರಣೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.