ADVERTISEMENT

ಮಾತಿನಲ್ಲಿ ದಲಿತ ಕಾಳಜಿ, ಆಚರಣೆಯಲ್ಲಿ ಶೂನ್ಯ: ರಾಜು ಕುರಡಗಿ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 16:16 IST
Last Updated 23 ಫೆಬ್ರುವರಿ 2024, 16:16 IST
ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಗದಗ ಜಿಲ್ಲಾ ಬಿಜೆಪಿ ಘಟಕದ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಗದಗ ಜಿಲ್ಲಾ ಬಿಜೆಪಿ ಘಟಕದ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು   

ಗದಗ: ‘ಸಂವಿಧಾನ ಜಾಗೃತಿ ಜಾಥಾ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ಪರಿಶಿಷ್ಟರಿಗೆ ಸೇರಬೇಕಾದ ಅನುದಾನವನ್ನು ನಿರಾಕರಿಸಿ ಅನ್ಯಾಯ ಮಾಡುತ್ತಿದೆ. ಇವರ ಸಂವಿಧಾನದ ಬದ್ಧತೆಯು ಕೇವಲ ಮಾತು, ಪ್ರಚಾರದಲ್ಲಿ ಉಳಿದು; ಆಚರಣೆಯಲ್ಲಿ ಶೂನ್ಯವಾಗಿದೆ’ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅಡಿ ಪರಿಶಿಷ್ಟರಿಗೆ ಮೀಸಲಿಟ್ಟ ₹11 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಉಪಯೋಗಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಗದಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು.

‘ದಲಿತರ ಹಿತರಕ್ಷಣೆ ಮಾಡಬೇಕಿದ್ದ ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರು ಈ ಅನ್ಯಾಯದ ವಿರುದ್ದ ಸೊಲ್ಲೆತ್ತದೆ ಕಾಂಗ್ರೆಸ್ ಹಿತಕ್ಕಾಗಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ’ ಎಂದು ಹರಿಹಾಯ್ದರು.

ADVERTISEMENT

‘ಮೊರಾರ್ಜಿ ಶಾಲೆಯ ಅಭಿವೃದ್ಧಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಮೀಸಲಾದ ಹಣವು ಇತರ ಯೋಜನೆಗಳಿಗೆ ಬಳಕೆಯಾಗಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಳ್ಳುವ ಸ್ಥಿತಿ ಎದುರಾಗಿದೆ. ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣವೂ ದುರ್ಬಳಕೆಯಾಗಿದೆ. ಗ್ಯಾರಂಟಿ ಯೋಜನೆ ಸಲುವಾಗಿ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದೆ’ ಎಂದು ದೂರಿದರು.

‘ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಗೃಹ ನಿರ್ಮಾಣ ಯೋಜನೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿ ಹಂಚುತ್ತಿದ್ದರೆ, ರಾಜ್ಯ ಸರ್ಕಾರದ ಯೋಜನೆಯು ಕೋಮಾ ಸ್ಥಿತಿಗೆ ತಲುಪಿದೆ. ರೈತ ನಿಧಿ ಯೋಜನೆಯಲ್ಲಿ ದಲಿತ ಕುಟುಂಬದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವು ಸ್ಥಗಿತಗೊಂಡಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ₹4 ಸಾವಿರಕ್ಕೂ ಕತ್ತರಿ ಪ್ರಯೋಗವಾಗಿದೆ. ಸಿದ್ದರಾಮಯ್ಯನವರು ದಲಿತ ಮತ್ತು ಆದಿವಾಸಿಗಳ ಕಲ್ಯಾಣವನ್ನು ಬಾಯಿಮಾತಿಗಷ್ಟೇ ಸೀಮಿತಗೊಳಿಸಿದ್ದಾರೆ’ ಎಂದು ಕಿಡಿಕಾರಿದರು.

ಬಿಜೆಪಿ ಎಸ್.ಸಿ.ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಮುಳಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುವ ಸಂಬಂಧ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕಿದ್ದ ಹಣಕ್ಕೆ 2024-25ನೇ ಮುಂಗಡ ಪತ್ರದಲ್ಲಿ ಮತ್ತೆ ಕತ್ತರಿ ಹಾಕಲಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಕೂಡಲೇ ವಾಪಸ್ ನೀಡಬೇಕು’ ಎಂದು ಆಗ್ರಹಿಸಿದರು.

ಗದಗ ಜಿಲ್ಲಾ ಬಿಜೆಪಿ ಘಟಕದ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗದಗ-ಬೆಟಗೇರಿ ನಗರಸಭಾ ಅಧ್ಯಕ್ಷೆ ಉಷಾ ದಾಸರ, ಈಶ್ವರಪ್ಪ ನಾಯ್ಕರ, ಅನಿಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ, ಲಕ್ಷ್ಮಣ ದೊಡ್ಡಮನಿ, ಈಶಪ್ಪ ನಾಯ್ಕರ, ಶಿವು ಹಿರೇಮನಿಪಾಟೀಲ, ನಾಗರಾಜ ತಳವಾರ, ಗೋವಿಂದರಾಜ ಪೂಜಾರ, ದೇವಪ್ಪ ಇಟಗಿ, ಶಶಿಧರ ದಿಂಡೂರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರ ದಲಿತ ಉದ್ಯಮಿಗಳನ್ನು ರೂಪಿಸಲು ಉತ್ತೇಜಿಸಲು ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮವನ್ನು ಘೋಷಿಸಿಲ್ಲ. ಈ ಮೂಲಕ ಸರ್ಕಾರ ತನ್ನ ಡೋಂಗಿ ದಲಿತ ಕಾಳಜಿಯನ್ನು ಬಯಲು ಮಾಡಿದೆ
ರಾಜು ಕುರಡಗಿ ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.