ADVERTISEMENT

‘ಪ್ರಧಾನಿ ಮೋದಿಯೇ ಪಕ್ಕಾ ಗ್ಯಾರಂಟಿ’

ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 13:58 IST
Last Updated 13 ಏಪ್ರಿಲ್ 2024, 13:58 IST
ಶ್ರೀರಾಮುಲು 
ಶ್ರೀರಾಮುಲು    

ಗದಗ: ‘ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ನುಡಿದಂತೆ ನಡೆದುಕೊಳ್ಳದ ಆ ಪಕ್ಷ ಇನ್ನು ಮುಂದೆ ಏನೇ ಗ್ಯಾರಂಟಿಗಳನ್ನು ಕೊಟ್ಟರೂ ಜನರು ಒಪ್ಪುವುದಿಲ್ಲ. ಮೋದಿ ಅವರೇ ಪಕ್ಕಾ ಗ್ಯಾರಂಟಿ’ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದರು.

ಅವರು ನಗರದ ವೀರೇಶ್ವರ ಪುಣ್ಯಾಶ್ರಮಕ್ಕೆ ಶನಿವಾರ ಭೇಟಿ ನೀಡಿ ಪಂಡಿತ್‌ ಪಂಚಾಕ್ಷರಿ ಗವಾಯಿಗಳು, ಪಂಡಿತ್‌ ಪುಟ್ಟರಾಜ ಗವಾಯಿಗಳ ಗದ್ದುಗೆಯ ದರ್ಶನಾಶೀರ್ವಾದ ಪಡೆದು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕ. ಮೋದಿ ಎಲ್ಲೇ ಹೋಗಲಿ ಅವರ ಹಿಂದೆ‌ ಜನಸಾಗರವೇ ಬರುತ್ತದೆ. ಸಿಎಂ ಸಿದ್ದರಾಮಯ್ಯ ಏನೇ ರಣತಂತ್ರ ರೂಪಿಸಿದರೂ ನಡೆಯುವುದಿಲ್ಲ’ ಎಂದು ಲೇವಡಿ ಮಾಡಿದರು.

ADVERTISEMENT

‘ಕಾಂಗ್ರೆಸ್ ನೇತೃತ್ವದ ಒಕ್ಕೂಟ ಒಡೆದು ಹೋಗಿದೆ. ಕರ್ನಾಟಕದ ಜನರು ಮೋದಿ ಗೆಲ್ಲಿಸುವ ಯೋಜನೆಯಲ್ಲಿದ್ದಾರೆ. ಮೋದಿ ಅಂದ್ರೆ ವಿಶ್ವಾಸ, ದೇಶದ ಸುಭದ್ರತೆ, ಶಕ್ತಿ. ಮೋದಿ ಅವರು ಹೇಳದೇ ಗ್ಯಾರಂಟಿಗಳನ್ನು ಕೊಡುತ್ತಾರೆ. ಕಾಂಗ್ರೆಸ್‌ನವರು ಹೇಳಿಯೂ ಗ್ಯಾರಂಟಿ ಕೊಡುತ್ತಿಲ್ಲ’ ಎಂದು ಟೀಕಿಸಿದರು.

‘ಶುಕ್ರವಾರ ನಾಮಪತ್ರ ಸಲ್ಲಿಸಿ, ಶನಿವಾರ ಪಂಡಿತ್ ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಗವಾಯಿಗಳ ಗದ್ದುಗೆ ಆಶೀರ್ವಾದ ಪಡೆದಿದ್ದೇನೆ. ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ 28 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ’ ಎಂದು ತಿಳಿಸಿದರು.

ದಿಂಗಾಲೇಶ್ವರ ಶ್ರೀಗಳು ಧಾರವಾಡದಿಂದ ಲೋಕಸಭಾ ಚುನಾವಣೆ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ‘ದಿಂಗಾಲೇಶ್ವರ ಶ್ರೀಗಳು ನಮಗೆಲ್ಲ ಮಾರ್ಗದರ್ಶನ, ಸಂಸ್ಕಾರ ಕೊಟ್ಟಿದ್ದಾರೆ. ಶ್ರೀಗಳ ಬಗ್ಗೆ ಗೌರವ ಇದೆ. ಧರ್ಮಕ್ಕಾಗಿ ನಿಲ್ಲುವ ವ್ಯಕ್ತಿ ದಿಂಗಾಲೇಶ್ವರ ಶ್ರೀಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೇ, ಬೇಡವೇ ಎಂಬ ವಿಚಾರವನ್ನು ಹಿರಿಯರು, ಶ್ರೀಗಳ ಜೊತೆ ಚರ್ಚೆ ಮಾಡಬೇಕು’ ಎಂದು ಹೇಳಿದರು.

‘ಚುನಾವಣೆಗೆ ನಿಲ್ಲಬೇಡಿ ಎಂದು ಶ್ರೀಗಳಿಗೆ ಹೇಳುವಷ್ಟು ದೊಡ್ಡವ ನಾನಲ್ಲ. ಅವರು ನಿಲ್ಲಬೇಕಾ? ಬೇಡವೇ? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಮುದಾಯ, ಹಿರಿಯರು, ಅನೇಕ ಶ್ರೀಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಬಿ.ಎಸ್.ಯಡಿಯೂರಪ್ಪ, ಪ್ರಲ್ಹಾದ ಜೋಶಿ, ಅನೇಕರು ಮಾತುಕತೆ ನಡೆಸಿದ್ದಾರೆ’ ಎಂದು ತಿಳಿಸಿದರು.

‘ಗದಗ ಸೌಹಾರ್ದದ ಜಿಲ್ಲೆ. ಜಾತಿ, ಧರ್ಮ, ಮತ, ಪಂಥ ಒಂದುಗೂಡಿಸಿದ ಫಕೀರೇಶ್ವರ ಮಠ. ಅಂತಹ ಮಠದ ದಿಂಗಾಲೇಶ್ವರ ಶ್ರೀಗಳು ಧರ್ಮಕ್ಕಾಗಿ ಜಯವಾಗಲಿ ಎನ್ನುತ್ತಾರೆ. ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸವಿದ್ದು, ಚುನಾವಣೆಯಿಂದ ಹಿಂದೆ ಸರಿಯಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.