ADVERTISEMENT

‘ಬಡವರ ಪಡಿತರ ಚೀಟಿ ರದ್ದಾಗಲ್ಲ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 14:49 IST
Last Updated 21 ನವೆಂಬರ್ 2024, 14:49 IST
ನಾಗರಾಜ ಮಡಿವಾಳರ
ನಾಗರಾಜ ಮಡಿವಾಳರ   

ಲಕ್ಷ್ಮೇಶ್ವರ: ‘ಯಾವುದೇ ಕಾರಣಕ್ಕೂ ಬಡವರಿಗೆ ಸೇರಿದ ಪಡಿತರ ಚೀಟಿಗಳನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ. ಕಾರಣ ಯಾರೂ ಆತಂಕಕ್ಕೆ ಒಳಗಾಗಬಾರದು’ ಎಂದು ಪಂಚ ಗ್ಯಾರಂಟಿಗಳ ಲಕ್ಷ್ಮೇಶ್ವರ ತಾಲ್ಲೂಕು ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಸ್ಪಷ್ಟಪಡಿಸಿದರು.

ಈ ಕುರಿತು ಗುರುವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಎರಡ್ಮೂರು ದಿನಗಳಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳ ಕಾರ್ಡ್‍ಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಆದರೂ ಜನರು ಆತಂಕಪಡುತ್ತಿದ್ದಾರೆ. ಅನರ್ಹ ಕಾರ್ಡ್‍ದಾರರನ್ನು ಗುರುತಿಸಿ ಅವರ ಬಿಪಿಎಲ್ ಕಾರ್ಡ್‌ ಅನ್ನು ಎಪಿಎಲ್ ಆಗಿ ಪರಿವರ್ತಿಸಲಾಗುವುದು. ಆದರೆ ಯಾವುದೇ ಕಾರಣಕ್ಕೂ ಕಾರ್ಡ್ ರದ್ದು ಮಾಡುವುದಿಲ್ಲ. ಆರು ತಿಂಗಳಿಂದ ಪಡಿತರ ತೆಗೆದುಕೊಳ್ಳದವರ ಪಡಿತರ ಚೀಟಿಗಳನ್ನು ಮಾತ್ರ ಗುರುತಿಸಿ ಅಂಥವುಗಳನ್ನು ಎಪಿಎಲ್ ಕಾರ್ಡ್‍ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಆದರೆ ಪಡಿತರ ಚೀಟಿ ರದ್ದು ಆಗುವುದಿಲ್ಲ’ ಎಂದರು.

ADVERTISEMENT

‘ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ 3,311 ಅಂತ್ಯೋದಯ, 23,239 ಬಿಪಿಎಲ್ ಮತ್ತು 3,761 ಎಪಿಎಲ್ ಪಡಿತರ ಚೀಟಿದಾರರು ಇದ್ದು ಅವರಲ್ಲಿ ಸರ್ಕಾರಿ ನೌಕರಿ ಮಾಡುತ್ತಿರುವ ಹಾಗೂ ಆದಾಯ ತೆರಿಗೆ ಪಾವತಿದಾರರ 54 ಕಾರ್ಡ್‍ಗಳನ್ನು ಮಾತ್ರ ಬಿಪಿಎಲ್‍ನಿಂದ ಎಪಿಎಲ್‍ಗೆ ವರ್ಗಾಯಿಸಲಾಗಿದೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದೆ. ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ದೀನದಲಿತರ, ಬಡವರ ಉದ್ಧಾರಕ್ಕೆ ಮುಂದಾಗಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯದ ಬಡವರು ಅದರಲ್ಲೂ ಮಹಿಳೆಯರು ಹೆಚ್ಚು ಖುಷಿಯಲ್ಲಿದ್ದಾರೆ. ಅವರ ಬದುಕಿಗೂ ಒಂದು ಗ್ಯಾರಂಟಿ ಸಿಕ್ಕಂತಾಗಿದೆ. ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗಾಗಿ ಬಿಪಿಎಲ್ ಪಡಿತರ ಚೀಟಿದಾರರು ಕಾರ್ಡ್ ರದ್ದಾಗುತ್ತವೆ ಎಂಬ ಭ್ರಮೆಯಿಂದ ಹೊರ ಬರಬೇಕು. ಹಾಗೇನಾದರೂ ಕಾರ್ಡ್ ರದ್ದಾದರೆ ಕೂಡಲೇ ತಹಶೀಲ್ದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮತ್ತೆ ಅವುಗಳನ್ನು ಚಾಲ್ತಿ ಮಾಡಿಸಲಾಗುವುದು’ ಎಂದರು.

‘ಲಕ್ಷ್ಮೇಶ್ವರ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಪಂಚ ಗ್ಯಾರಂಟಿಗಳ ಸಮಿತಿ ಸದಸ್ಯರು ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸಲಿದ್ದಾರೆ’ ಎಂದು ಹೇಳಿದರು.

ಗ್ಯಾರಂಟಿಗಳ ಸಮಿತಿ ಸದಸ್ಯರಾದ ಶಶಿಕಲಾ ಬಡಿಗೇರ, ಕಲ್ಲಪ್ಪ ಗಂಗಣ್ಣವರ, ಕಾರ್ತಿಕ ದೊಡ್ಡಮನಿ, ಹಸನ್‍ಸಾಬ್ ಜಂಗ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.