ADVERTISEMENT

ಗದಗ: ಏರುತ್ತಲಿದೆ ಒಣಮೆಣಸಿನಕಾಯಿಗೆ ಬೆಲೆ

ಬ್ಯಾಡಗಿ ಕಮೀಷನ್‌ ಏಜೆಂಟರ ಲಾಭಿ; ಗದಗ ಎಪಿಎಂಸಿಯಲ್ಲಿ ಬೆಲೆ ತಗ್ಗಿಸಲು ಪ್ರಯತ್ನ

ಜೋಮನ್ ವರ್ಗಿಸ್
Published 11 ಜನವರಿ 2020, 19:30 IST
Last Updated 11 ಜನವರಿ 2020, 19:30 IST
ಮೆಣಸಿನಕಾಯಿ ಸ್ವಚ್ಛಗೊಳಿಸುತ್ತಿರುವ ಮಹಿಳೆಯರು
ಮೆಣಸಿನಕಾಯಿ ಸ್ವಚ್ಛಗೊಳಿಸುತ್ತಿರುವ ಮಹಿಳೆಯರು   

ಗದಗ: ಗದಗ ಎಪಿಎಂಸಿಯಲ್ಲಿ ಜ.1ರಿಂದ ಒಣಮೆಣಸಿನಕಾಯಿ ಖರೀದಿಗೆ ಆನ್‌ಲೈನ್‌ ಟೆಂಡರ್‌ ಪ್ರಾರಂಭವಾಗಿದ್ದು, ಜ.1ರಿಂದ ಜ.8ರವರೆಗೆ ಒಟ್ಟು ಮೂರು ಆನ್‌ಲೈನ್‌ ಟೆಂಡರ್‌ಗಳು ನಡೆದಿವೆ. ಇದುವರೆಗೆ 10,232 ಕ್ವಿಂಟಲ್‌ ಒಣಮೆಣಸಿನಕಾಯಿ ಖರೀದಿಯಾಗಿದೆ.

ಆನ್‌ಲೈನ್‌ ಟೆಂಡರ್‌ ಆರಂಭವಾದ ಬೆನ್ನಿಗೆ ಒಣಮೆಣಸಿನಕಾಯಿ ಧಾರಣೆಯಲ್ಲೂ ದಾಖಲೆ ಏರಿಕೆಯಾಗಿದೆ. ಜ.1ರಂದು ಮೊದಲ ಆನ್‌ಲೈನ್‌ ಟೆಂಡರ್‌ ನಡೆದಾಗ ಕ್ವಿಂಟಲ್‌ಗೆ ₹22,222 ಬೆಲೆ ಇತ್ತು. ಜ.4ರಂದು ಎರಡನೆಯ ಟೆಂಡರ್‌ ನಡೆದಾಗ ಇದು ಕ್ವಿಂಟಲ್‌ಗೆ ಮತ್ತೆ ₹4468 ಏರಿಕೆಯಾಗಿ ₹26,690ಕ್ಕೆ ಮಾರಾಟವಾಯಿತು. ಜ.8ರಂದು ಮೂರನೆಯ ಆನ್‌ಲೈನ್‌ ಟೆಂಡರ್‌ನಲ್ಲಿ ಕ್ವಿಂಟಲ್‌ ಒಣಮೆಣಸಿನಕಾಯಿಗೆ ₹27,099 ಬೆಲೆ ಲಭಿಸಿದೆ. ಗದಗ ಎಪಿಎಂಸಿ ಇತಿಹಾಸದಲ್ಲೇ ಒಣಮೆಣಸಿನಕಾಯಿಗೆ ಲಭಿಸಿರುವ ಸಾರ್ವಕಾಲಿಕ ಗರಿಷ್ಠ ಧಾರಣೆ ಇದು.

ಆದರೆ, ಗದಗ ಎಪಿಎಂಸಿಯಲ್ಲಿ ಆನ್‌ಲೈನ್‌ ಟೆಂಡರ್‌ ಪ್ರಾರಂಭವಾದ ಬೆನ್ನಲ್ಲೇ ಬ್ಯಾಡಗಿ ಎಪಿಎಂಸಿಯ ಒಣಮೆಣಸಿನಕಾಯಿ ಕಮೀಷನ್‌ ಏಜೆಂಟರ ಲಾಬಿ ಪ್ರಾರಂಭವಾಗಿದೆ. ಸದ್ಯ ಶೇ 90ರಷ್ಟು ಒಣಮೆಣಸಿನಕಾಯಿ ವಹಿವಾಟು ಬ್ಯಾಡಗಿ ಎಪಿಎಂಸಿಯಲ್ಲಿ ನಡೆಯುತ್ತಿದೆ. ಆದರೆ, ಗದಗದಲ್ಲಿ ಆನ್‌ಲೈನ್‌ ಟೆಂಡರ್ ಪ್ರಾರಂಭವಾಗಿರುವುದರಿಂದ ಬ್ಯಾಡಗಿ ಎಪಿಎಂಸಿಗೆ ಆವಕವಾಗುತ್ತಿದ್ದ ಒಣಮೆಣಸಿನಕಾಯಿ ಗದಗ ಮಾರುಕಟ್ಟೆಗೆ ಬರಲು ಪ್ರಾರಂಭಿಸಿದೆ. ಅಲ್ಲಿಗೆ ಆವಕ ತಗ್ಗಿರುವುದರಿಂದ ಬ್ಯಾಡಗಿ ಕಮೀಷನ್‌ ಏಜೆಂಟರ ಗಳಿಕೆಗೆ ಕುತ್ತು ಬಿದ್ದಿದೆ.

ADVERTISEMENT

ಹೀಗಾಗಿ ಜ.8ರಿಂದ ಬ್ಯಾಡಗಿಯಿಂದ ಒಣಮೆಣಸಿನಕಾಯಿಯನ್ನು ಖರೀದಿಸಲು ಗದಗ ಎಪಿಎಂಸಿಗೆ ಬರುವ ಖರೀದಿದಾರರು ಆನ್‌ಲೈನ್‌ ಟೆಂಡರ್‌ನಲ್ಲಿ ಭಾಗವಹಿಸಲು ನಿರಾಕರಿಸುತ್ತಿದ್ದಾರೆ. ಬದಲು ಹಳೆಯ ‘ಹರಾಜು‘ ಪದ್ಧತಿಯಲ್ಲಿ ಮೆಣಸಿನಕಾಯಿ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಆನ್‌ಲೈನ್‌ ಟೆಂಡರ್‌ನಲ್ಲಿ ಒಣಮೆಣಸಿನಕಾಯಿ ಖರೀದಿದಾರರ ಸಂಖ್ಯೆ ಕಡಿಮೆಯಾಗಿ, ಸ್ಪರ್ಧಾತ್ಮಕತೆ ಕಡಿಮೆಯಾಗಿ ಧಾರಣೆಯಲ್ಲಿ ಏರಿಳಿತ ಆಗುತ್ತಿದೆ.

ಆನ್‌ಲೈನ್‌ ಟೆಂಡರ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಗದಗ ಎಪಿಎಂಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜತೆಗೆ ಆನ್‌ಲೈನ್‌ ಟೆಂಡರ್‌ ಹೊರತುಪಡಿಸಿ, ಎಪಿಎಂಸಿ ಖರೀದಿದಾರರು ಬೇರೆ ಪದ್ಧತಿಯಲ್ಲಿ ಒಣಮೆಣಸಿನಕಾಯಿ ವಹಿವಾಟು ನಡೆಸಿದರೆ ಅಂತಹ ವ್ಯಾಪಾರಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

‘ಕೆಂಪು ಬಂಗಾರ’ ಎಂದೇ ಹೆಸರಾದ ಮೆಣಸಿನಕಾಯಿ ರೈತರಿಗೆ ಹೆಚ್ಚಿನ ಆದಾಯ ತಂದುಕೊಡುವ ಬೆಳೆ. ಆನ್‌ಲೈನ್‌ ಟೆಂಡರ್‌ ಪ್ರಾರಂಭವಾಗಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಲಭಿಸುತ್ತಿದೆ. ಆದರೆ, ಇಳುವರಿ ಕಡಿಮೆ ಇರುವುದರಿಂದ ರೈತರಿಗೆ ಇದರ ಸಂಪೂರ್ಣ ಲಾಭ ವರ್ಗಾವಣೆ ಆಗುತ್ತಿಲ್ಲ. ಇತ್ತ ಆವಕ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲೂ ಬೆಲೆ ಹೆಚ್ಚಿದ್ದು,ಗ್ರಾಹಕರಿಗೂ ಒಣಮೆಣಸಿನಕಾಯಿ ಘಾಟು ತಟ್ಟಿದೆ.

ಪಟ್ಟಿ

ಗದಗ ಎಪಿಎಂಸಿಗೆ ಒಣಮೆಣಸಿನಕಾಯಿ ಆವಕ

ವರ್ಷ; ಆವಕ (ಕ್ವಿಂಟಲ್‌ಗಳಲ್ಲಿ); ಗರಿಷ್ಠ ಬೆಲೆ (₹ಗಳಲ್ಲಿ)

2015; 19,400; 14,000
2016; 36,285; 18,000
2017; 47,924; 18,000
2018; 28,350; 18,000
2019; 22,923; 18,000
*2020; 10,232; 27,099

(*ಜ.8ರ ವರೆಗಿನ ಆವಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.