ADVERTISEMENT

ಕಡಲೆ ಬೆಳೆಗೆ ಕೀಟ ಬಾಧೆ: ಪರಿಣಾಮ ಬೀರದ ಕೀಟನಾಶಕ

ಮುಳಗುಂದ ರೈತರ ಆರೋಪ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 12:51 IST
Last Updated 12 ಡಿಸೆಂಬರ್ 2023, 12:51 IST
ಮುಳಗುಂದ ಕಡಲೆ ಬೆೆಳೆಗೆ ಕೋರೋಜನ್ ಸಿಂಪರಣೆಯ ನಂತರವೂ ಕೀಟ ಬಾಧಿಸಿರುವುದನ್ನು ರೈತ ನಿಂಗಪ್ಪ ಕಬಾಡಿ ತೋರಿಸಿದರು
ಮುಳಗುಂದ ಕಡಲೆ ಬೆೆಳೆಗೆ ಕೋರೋಜನ್ ಸಿಂಪರಣೆಯ ನಂತರವೂ ಕೀಟ ಬಾಧಿಸಿರುವುದನ್ನು ರೈತ ನಿಂಗಪ್ಪ ಕಬಾಡಿ ತೋರಿಸಿದರು   

ಮುಳಗುಂದ: ‘ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಕೀಟ ಆವರಿಸಿದೆ. ಕೋರೋಜನ್ ಕೀಟ ನಾಶಕ ಸಿಂಪರಣೆ ಮಾಡಿದೆ. ಆದರೆ ಅದು ಪರಿಣಾಮ ಬೀರುತ್ತಿಲ್ಲ. ಅದರ ಗುಣಮಟ್ಟದ ಬಗ್ಗೆ ಅನುಮಾನವಿದೆ’ ಎಂದು ರೈತರು ಆರೋಪಿಸಿದ್ದಾರೆ.

ಪ್ರಸಕ್ತ ವರ್ಷ ಮುಂಗಾರು ವೈಫಲ್ಯದ ಪರಿಣಾಮವಾಗಿ ಹಿಂಗಾರು ಕಡಲೆ ಬಿತ್ತನೆ ಪ್ರದೇಶ ಅಧಿಕವಾಗಿದೆ. ಕಡಲೆ ಬೆಳೆ ಉತ್ತಮವಾಗಿದೆ. ಆದರೆ ಗಿಡದ ತುಂಬಾ ಕೀಟ ಬಾಧಿಸುತ್ತಿದೆ. ಕೀಟ ನಿಯಂತ್ರಣಕ್ಕೆ ರೈತರು ಹೆಚ್ಚಾಗಿ ಕೋರೋಜನ್ ಕೀಟನಾಶಕ ಸಿಂಪರಣೆಯ ಮೊರೆ ಹೋಗಿದ್ದಾರೆ. ಆದರೆ ಅದು ಪರಿಣಾಮ ಬೀರುತ್ತಿಲ್ಲ.

‘ಹತ್ತು ದಿನಗಳ ಹಿಂದೆ 16 ಲೀ.ನೀರಿಗೆ 5 ಎಂ.ಎಲ್. ಕೋರೋಜನ್ ಕೀಟನಾಶನ ಸೇರಿಸಿ ಬೆಳೆಗೆ ಸಿಂಪರಣೆ ಮಾಡಿದ್ದೆ. ಆದರೆ ಈವರೆಗೂ ಕೀಟ ನಿಯಂತ್ರಣಕ್ಕೆ ಬಂದಿಲ್ಲ. ಬದಲಾಗಿ ಕಡಲೆ ಬೆಳೆ ನಾಶವಾಗುತ್ತಿದೆ. ಈ ಹಿಂದೆ ಇದೇ ಕೀಟನಾಶಕ ಸಿಂಪರಣೆ ಮಾಡಿದಾಗ ಉತ್ತಮ ರೀತಿ ಕೆಲಸ ಮಾಡಿತ್ತು. ಆದರೆ ಈಗ ಏನೂ ಪರಿಣಾಮ ಬೀರಿಲ್ಲ. ಇದರಿಂದ ಬೆಳೆ ನಾಶವಾಗಿ ನಮಗೆ ಹಾನಿಯಾಗಿದೆ. ಗುಣಮಟ್ಟದ ಕೀಟನಾಶಕ ಬರುತ್ತಿಲ್ಲ’ ಎಂದು ರೈತ ನಿಂಗಪ್ಪ ಕಬಾಡಿ ಆರೋಪಿಸಿದರು.

ADVERTISEMENT

ಕೃಷಿ ಸಹಾಯಕ ಅಧಿಕಾರಿ ಎಫ್.ಸಿ. ಗುರಿಕಾರ ರೈತ ನಿಂಗಪ್ಪ ಕಬಾಡಿ ಅವರ ಹೊಲಕ್ಕೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು. ‘ಈ ಕುರಿತು ಕೃಷಿ ಜಾಗೃತ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೀಟನಾಶಕ ಸಿಂಪರಣೆ ಮಾಡಿದ ಕಡಲೆ ಬೆಳೆ ಸ್ಯಾಂಪಲ್‍ ಅನ್ನು ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

‘ಕಡಲೆಗೆ ಕೋರೋಜನ್ ಸಿಂಪರಣೆ ಮಾಡಿದ ಪಟ್ಟಣದ ಹಲವು ರೈತರು ಕೀಟ ನಾಶವಾಗದೇ ಪರಿತಪಿಸುವಂತಾಗಿದೆ. ಕೂಡಲೇ ಕೀಟನಾಶಕ ಪರಿಶೀಲನೆಗೆ ಒಳಪಡಿಸಬೇಕು’ ಎಂದು ರೈತ ಸಂಘದ ಕಾರ್ಯದರ್ಶಿ ದೇವರಾಜ ಸಂಗನಪೇಟಿ ಒತ್ತಾಯಿಸಿದರು.

ರೈತರಾದ ಮಹಾಂತೇಶ ಗುಂಜಳ, ಮಂಜುನಾಥ ಕಬಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.