ADVERTISEMENT

ಸಿಎಂ ಜತೆ ಸಭೆ | ಸ್ಥಳ, ಸಮಯ ನಿಗದಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 19:15 IST
Last Updated 5 ಅಕ್ಟೋಬರ್ 2024, 19:15 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಗದಗ: ‘ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಗುರಿ ಮುಟ್ಟುವವರೆಗೂ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅ.15ರಂದು ಸಮಾಜದ ಪ್ರಮುಖ ವಕೀಲರ ಸಭೆ ಕರೆದಿದ್ದಾರೆ. ಆದರೆ, ಸಭೆ ನಡೆಸುವ ಸ್ಥಳ, ಸಮಯವನ್ನು ಇನ್ನೂ ನಿಗದಿಗೊಳಿಸಿಲ್ಲ. ಕೂಡಲೇ ಇದನ್ನು ಪ್ರಕಟಿಸಬೇಕು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಶನಿವಾರ ಆಗ್ರಹಿಸಿದರು.

‘ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ ಅಥವಾ ಕಾರಣ ನೀಡಿ ಸಭೆಯನ್ನೇ ನಡೆಸದಿದ್ದಲ್ಲಿ ವಕೀಲರು, ಸಮುದಾಯದ ಜನರ ಜತೆಗೂಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಸಚಿವರು, ಶಾಸಕರ ಧ್ವನಿ ಅಡಗಿದೆ. ಆದಕಾರಣ, ನ್ಯಾಯಾಂಗದ ಮೂಲಕ ಹೋರಾಟ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಅ.15ರಂದು ನಡೆಯುವ ಸಭೆಯಲ್ಲಿ ಯಾವ ವಿಷಯಗಳನ್ನು ಚರ್ಚಿಸಬೇಕು ಎಂದು ತೀರ್ಮಾನಿಸಲಾಗಿದೆ. 10 ಮಂದಿ ವಕೀಲರು, ಸಮಾಜದ ಪ್ರಮುಖರ ಜತೆಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮೀಸಲಾತಿ ಸಿಗದಿರುವ ಕಾರಣ ಸಮಾಜದ ಮಕ್ಕಳಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಲಾಗುವುದು. ಅವರು ನಮ್ಮ ಸಮಾಜಕ್ಕೆ ಮೀಸಲಾತಿ ನೀಡುವರು ಎಂಬ ವಿಶ್ವಾಸ ಇದೆ’ ಎಂದು ತಿಳಿಸಿದರು.

ಜಾತಿ ಗಣತಿಗೆ ವಿರೋಧ ಇಲ್ಲ:

‘ಜಾತಿ ಗಣತಿಗೆ ಸಂಬಂಧಿಸಿದಂತೆ ನಮ್ಮ ವಿರೋಧ ಇಲ್ಲ. ಆದರೆ, ಅದು ವೈಜ್ಞಾನಿಕವಾಗಿ, ನಿಸ್ಪಕ್ಷಪಾತದಿಂದ ಕೂಡಿರಬೇಕು ಎಂಬುದಷ್ಟೇ ನಮ್ಮ ಆಗ್ರಹ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಅವೈಜ್ಞಾನಿಕ, ದುರುದ್ದೇಶದಿಂದ ಕೂಡಿರುವ, ಸಮುದಾಯಗಳಿಗೆ ನೋವುಂಟು ಮಾಡುವಂತಹ ಜಾತಿ ಗಣತಿಯನ್ನು ಖಂಡಿತ ಒಪ್ಪುವುದಿಲ್ಲ. ವೈಜ್ಞಾನಿಕವಾಗಿ ಜಾತಿ ಗಣತಿ ಮಾಡುವುದಕ್ಕೆ ನಮ್ಮ ಸಂಪೂರ್ಣ ಸಹಕಾರ ಹಾಗೂ ಬೆಂಬಲ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.