ADVERTISEMENT

ಲಕ್ಷ್ಮೇಶ್ವರ | ಮತ್ತೆ ಹದಗೆಟ್ಟ ರಸ್ತೆ: ಬಸ್‍ ಸಂಚಾರ ಸ್ಥಗಿತ

ಶಾಲಾ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ

ನಾಗರಾಜ ಹಣಗಿ
Published 26 ಜುಲೈ 2024, 5:03 IST
Last Updated 26 ಜುಲೈ 2024, 5:03 IST
ಲಕ್ಷ್ಮೇಶ್ವರ ತಾಲ್ಲೂಕಿನ ಆದರಳ್ಳಿ-ಪುಟಗಾಂವ್‍ಬಡ್ನಿ ಮಧ್ಯದ ರಸ್ತೆಯ ಸೇತುವೆ ಪುಟಗಾಂವ್‍ಬಡ್ನಿ ಗ್ರಾಮದ ಹತ್ತಿರ ಕುಸಿದಿರುವುದು
ಲಕ್ಷ್ಮೇಶ್ವರ ತಾಲ್ಲೂಕಿನ ಆದರಳ್ಳಿ-ಪುಟಗಾಂವ್‍ಬಡ್ನಿ ಮಧ್ಯದ ರಸ್ತೆಯ ಸೇತುವೆ ಪುಟಗಾಂವ್‍ಬಡ್ನಿ ಗ್ರಾಮದ ಹತ್ತಿರ ಕುಸಿದಿರುವುದು   

ಲಕ್ಷ್ಮೇಶ್ವರ: ತಾಲ್ಲೂಕಿನ ಪುಟಗಾಂವ್‍ಬಡ್ನಿ-ಆದರಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಮತ್ತೆ ಕುಸಿತವಾಗಿ ಬಸ್‌ ಸಂಚಾರ ಮತ್ತೆ ಸ್ಥಗಿತಗೊಂಡಿದೆ.

ಒಂದು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಸೇತುವೆ ಕಿತ್ತುಹೋಗಿ ವಾರಗಟ್ಟಲೆ ವಾಹನಗಳ ಸಂಚಾರ ಬಂದ್ ಆಗಿತ್ತು. ಶಾಸಕ ಡಾ.ಚಂದ್ರು ಲಮಾಣಿ ಅವರು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದರು. ಕಿತ್ತು ಸೇತುವೆಗೆ ಹೊಂದಿಕೊಂಡು ಮಣ್ಣಿನಿಂದ ರಸ್ತೆ ದುರಸ್ತಿ ಮಾಡಿಸಿ ವಾಹನಗಳ ಸಂಚಾರಕ್ಕೆ ಇಲಾಖೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು.

ಸೇತುವೆ ಮತ್ತೆ ಕುಸಿದಿದ್ದರಿಂದ ಆದರಳ್ಳಿ, ಸಂಕದಾಳ ಗ್ರಾಮಸ್ಥರಿಗೆ ಪುಟಗಾಂವ್‍ಬಡ್ನಿಗೆ ಬರಲು ಆಗುತ್ತಿಲ್ಲ. ಸಧ್ಯ ಈ ರಸ್ತೆಯಲ್ಲಿ ಹಗುರ ವಾಹನಗಳು ಮಾತ್ರ ಸಂಚರಿಸುತ್ತಿವೆ. ಬಸ್‍ ಸಂಚಾರ ಬಂದ್ ಆಗಿರುವುದರಿಂದ ಸಂಕದಾಳ ಗ್ರಾಮದ ಶಾಲಾ ಕಾಲೇಜು ಮಕ್ಕಳಿಗೆ ತೀವ್ರ ಸಮಸ್ಯೆ ಉಂಟಾಗಿದೆ.

ADVERTISEMENT

ರಸ್ತೆ ಸರಿ ಇದ್ದಾಗ ಸುಮಾರು ಐದು ಕಿಮೀ ದೂರದ ಪುಟಗಾಂವ್‍ಬಡ್ನಿಗೆ ಬಸ್‍ನಲ್ಲಿ ಕೆಲವೇ ನಿಮಿಷಗಳಲ್ಲಿ ಬರುತ್ತಿದ್ದರು. ಆದರೆ ಈಗ ಬಸ್‍ ಇಲ್ಲದ್ದರಿಂದ ಸಂಕದಾಳದಿಂದ ಬಟ್ಟೂರು ಮೂಲಕ ಪುಟಗಾಂವ್‍ಬಡ್ನಿಗೆ ಸುತ್ತುಹಾಕಿ ಬರಬೇಕಾಗಿದೆ. ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಸಂಕದಾಳ ಗ್ರಾಮದ ಶಾಲಾ ಮಕ್ಕಳಿಗೆ ಸಂಜೆ ಮನೆಗೆ ತಲುಪುವುದಕ್ಕೆ ತೊಂದರೆ ಆಗುತ್ತಿದೆ.

'ಪುಟಗಾಂವ್‍ಬಡ್ನಿ ಬಸ್ ಬಂದ್ ಆಗಿರುವುದರಿಂದ ಅನಿವಾರ್ಯವಾಗಿ ಬಟ್ಟೂರಿಗೆ ಬಂದು ಅಲ್ಲಿಂದ ಶಾಲೆಗೆ ಬರಬೇಕಾಗಿದೆ. ಸಂಅಲ್ಲದೆ ಜೆ ಶಾಲೆಯಿಂದ ಮನೆಗೆ ಹೋಗಲು ಕೆಲವೊಮ್ಮೆ ಬಸ್ ತೊಂದರೆ ಆಗುತ್ತಿದೆ. ಹೀಗಾಗಿ ಮನೆಗೆ ತಲುಪುವುದಕ್ಕೆ ರಾತ್ರಿ ಆಗುತ್ತಿದೆ. ಕಾರಣ ಆದಷ್ಟು ಬೇಗನೇ ರಸ್ತೆ ನಿರ್ಮಿಸಿ ಪುಟಗಾಂವ್‍ಬಡ್ನಿಗೆ ಬರಲು ಅನುಕೂಲ ಮಾಡಿಕೊಡಬೇಕು’ ಎಂದು ಬಡ್ನಿ ಗ್ರಾಮಕ್ಕೆ ಸಂಕದಾಳದಿಂದ ಬರುವ ಶಾಲಾ ಮಕ್ಕಳ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.