ADVERTISEMENT

ಲಕ್ಷ್ಮೇಶ್ವರ | ರಸ್ತೆ, ಚರಂಡಿ ಇಲ್ಲದ ಗ್ರಾಮಗಳು

ಸೊಳ್ಳೆ ಉತ್ಪತ್ತಿ ತಾಣಗಳಾದ ತೆರೆದ ಚರಂಡಿಗಳು

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 5:28 IST
Last Updated 3 ಜುಲೈ 2024, 5:28 IST
ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುನಿಯನ ತಾಂಡಾದಲ್ಲಿ ಚರಂಡಿ ಇಲ್ಲದಿರುವುದರಿಂದ ಗಲೀಜು ನೀರು ರಸ್ತೆ ಮೇಲೆ ಹರಡಿದೆ
ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುನಿಯನ ತಾಂಡಾದಲ್ಲಿ ಚರಂಡಿ ಇಲ್ಲದಿರುವುದರಿಂದ ಗಲೀಜು ನೀರು ರಸ್ತೆ ಮೇಲೆ ಹರಡಿದೆ   

ಲಕ್ಷ್ಮೇಶ್ವರ: ತಾಲ್ಲೂಕಿನ ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು ಮೂಲ ಸೌಲಭ್ಯಗಳಿಂದ ನರಳುತ್ತಿವೆ. ಈ ಗ್ರಾಮ ಪಂಚಾಯ್ತಿಗೆ ಮುನಿಯನ ತಾಂಡಾ, ಚಂದ್ರಪ್ಪನ ತಾಂಡಾ, ಉಂಡೇನಹಳ್ಳಿ, ಯಲ್ಲಾಪುರ, ಉಳ್ಳಟ್ಟಿ, ಶ್ಯಾಬಳ ಗ್ರಾಮಗಳು ಬರುತ್ತಿದ್ದು ಇಲ್ಲೆಲ್ಲ ಸುಸಜ್ಜಿತ ರಸ್ತೆ ಮತ್ತು ಚರಂಡಿಗಳ ಕೊರತೆ ಎದ್ದು ಕಾಣುತ್ತಿದೆ. ಅಂದಾಜು ಆರು ಸಾವಿರ ಜನಸಖ್ಯೆಯ ಇರುವ ಗ್ರಾಮ ಪಂಚಾಯ್ತಿಯಲ್ಲಿ ಬರೋಬ್ಬರಿ 15 ಜನ ಸದಸ್ಯರು ಪಂಚಾಯ್ತಿಯನ್ನು ಪ್ರತಿನಿಧಿಸುತ್ತಾರೆ.

ಪಂಚಾಯ್ತಿ ವ್ಯಾಪ್ತಿಯ ಮುನಿಯನ ತಾಂಡಾದಲ್ಲಿ ಸಿಸಿ ರಸ್ತೆ ಮಾಡಲಾಗಿದೆ. ಆದರೆ ಗಲೀಜು ನೀರು ಹರಿದು ಹೋಗಲು ಚರಂಡಿಗಳೇ ಇಲ್ಲ. ಇದರಿಂದಾಗಿ ಹೊಲಸು ನೀರು ಮನೆಗಳ ಮುಂದೆ ಹರಿಯುತ್ತಿದ್ದು ಗಬ್ಬು ನಾರುವ ಪರಿಸ್ಥಿತಿ ತಲೆದೋರಿದೆ. ಆದಷ್ಟು ಬೇಗನೇ ಅಶುದ್ಧ ನೀರು ಹರಿದು ಹೋಗಲು ಚರಂಡಿ ನಿರ್ಮಿಸಬೇಕಾದ ಅಗತ್ಯ ಇದೆ.

‘ನಮ್ಮ ಮುನಿಯನ ತಾಂಡಾದಲ್ಲಿ ಗಟಾರ ಕಟ್ಟಲು ವ್ಯವಸ್ಥೆ ಮಾಡಲಾಗಿದೆ. ತಾಂಡಾದ ನಿವಾಸಿಗಳ ಸಹಕಾರ ತೆಗೆದುಕೊಂಡು ಆದಷ್ಟು ಬೇಗನೇ ಗಟಾರ ಕಟ್ಟಿಸಲಾಗುವುದು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ ಲಮಾಣಿ ಹೇಳಿದರು.

ADVERTISEMENT

ಮುಖ್ಯವಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ಯಾಬಳ ಗ್ರಾಮದಲ್ಲಿ ಮಳೆ ನೀರು ಮತ್ತು ಗ್ರಾಮಸ್ಥರು ಬಳಕೆ ಮಾಡಿದ ಗಲೀಜು ನೀರು ಎರಡ್ಮೂರು ಮನೆಗಳ ಎದುರು ನಿಲ್ಲುತ್ತಿದ್ದು ಇದು ಬಹಳ ದಿನಗಳ ಸಮಸ್ಯೆಯಾಗಿ ಉಳಿದುಕೊಂಡಿದೆ. ನಿಂತಲ್ಲಿಯೇ ನೀರು ನಿಲ್ಲುವುದರಿಂದ ಸೊಳ್ಳೆಗಳು ಹುಟ್ಟಲು ಈ ಭಾಗ ಕಾರಣವಾಗಿದೆ.

ಇನ್ನು ಉಳ್ಳಟ್ಟಿ ಗ್ರಾಮದ ಹಳೇ ಶಾಲೆ ಎದುರು ನೀರು ನಿಲ್ಲುವುದರಿಂದ ಮಲಿನತೆ ಉಂಟಾಗುತ್ತಿದ್ದು ಇದೇ ರಸ್ತೆ ಎದುರು ಅಂಗನವಾಡಿ ಕೇಂದ್ರ ಕೂಡ ಇದೆ. ಮಳೆಗಾಲದಲ್ಲಿ ನಿಂತ ನೀರು ರಾಡಿಯಾಗಿ ಸೊಳ್ಳೆಗಳ ಉಗಮಕ್ಕೆ ಕಾರಣವಾಗುತ್ತಿದೆ. ಇನ್ನು ಇದೇ ಗ್ರಾಮದ ಮುಖ್ಯ ರಸ್ತೆಯನ್ನು ಸಿಸಿ ಮಾಡಲಾಗಿದೆ. ಆದರೆ ಗ್ರಾಮಸ್ಥರು ರಸ್ತೆಗುಂಟ ಬೇಕಾಬಿಟ್ಟಿಯಾಗಿ ತಿಪ್ಪೆಗಳನ್ನು ಹಾಕಿರುವುದರಿಂದ ಅಲ್ಲಿನ ವಾತಾವರಣ ದುರ್ನಾತ ಬೀರುತ್ತಿದೆ.

‘ರಸ್ತೆಗುಂಟ ತಿಪ್ಪೆ ಹಾಕಬಾರದು ಎಂದು ಮನವಿ ಮಾಡಿದ್ದರೂ ಜನರು ಹಾಕುತ್ತಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಕೃಷ್ಣ ಲಮಾಣಿ ಬೇಸರ ವ್ಯಕ್ತಪಡಿಸಿದರು.

ಇದೇ ಪರಿಸ್ಥಿತಿ ದೊಡ್ಡೂರು ತಾಂಡಾದಲ್ಲಿದ್ದು ಅಲ್ಲಿಯೂ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿಯೇ ದೊಡ್ಡ ದೊಡ್ಡ ತಿಪ್ಪೆಗಳು ಇವೆ. ಅವುಗಳಿಂದ ಗಬ್ಬು ವಾಸನೆ ತಪ್ಪುತ್ತಿಲ್ಲ. ಈ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕಾದೆ ಅಗತ್ಯ ಇದೆ.

‘ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಬಗೆ ಹರಿಸಲು ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಮುಖ್ಯವಾಗಿ ನಮ್ಮಲ್ಲಿ ಸ್ವಚ್ಛತಾ ಸಿಬ್ಬಂದಿ ಇಲ್ಲ. ಹೀಗಾಗಿ ಪ್ರತಿದಿನ ಇಡೀ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛ ಮಾಡುವುದು ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಆಯಾ ಗ್ರಾಮಗಳ ಸದಸ್ಯರು ತಾವೇ ಕೂಲಿ ಆಳುಗಳನ್ನು ನೇಮಿಸಿ ಚರಂಡಿ ಸ್ವಚ್ಛತೆ ಮಾಡಿಸುತ್ತಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಮಾಳವಾಡ ತಿಳಿಸಿದರು.

ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ಯಾಬಳ ಗ್ರಾಮದ ಮನೆಗಳ ಮುಂದೆ ಗಲೀಜು ನೀರು ನಿಂತಿರುವುದು
ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಂದ್ರಪ್ಪನ ತಾಂಡಾದಲ್ಲಿನ ರಸ್ತೆ ಸ್ಥಿತಿ

Quote - ಮನೆ ಮುಂದೆ ನೀರು ನಿಲ್ಲುವುದು ಹಳೇ ಸಮಸ್ಯೆಯಾಗಿದ್ದು ಗ್ರಾಮಸ್ಥರ ಸಹಕಾರದಿಂದ ಆದಷ್ಟು ಬೇಗನೇ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಮಾಡುತ್ತೇವೆ ಮಲ್ಲಪ್ಪ ತೋಟದ ಗ್ರಾಮ ಪಂಚಾಯ್ತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.