ADVERTISEMENT

ಕೊನೆಯ ದಿನ ರೋಡ್‌ಶೋ ಅಬ್ಬರ; ಬಹಿರಂಗ ಪ್ರಚಾರಕ್ಕೆ ತೆರೆ, ಆರೋಪ, ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 16:35 IST
Last Updated 30 ಏಪ್ರಿಲ್ 2019, 16:35 IST
ನರಗುಂದದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ತೇಜಸ್ವಿ ಸೂರ್ಯ ಮಾತನಾಡಿದರು.
ನರಗುಂದದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ತೇಜಸ್ವಿ ಸೂರ್ಯ ಮಾತನಾಡಿದರು.   

ಗದಗ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ರೋಡ್‌ಶೋ, ಪಾದಯಾತ್ರೆ, ಪ್ರಚಾರ ಸಭೆಗಳ ಭರಾಟೆ ಜೋರಾಗಿತ್ತು.

ಗದುಗಿನಲ್ಲಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ ಪಾಟೀಲ ಅವರು, ತಮ್ಮ ಸಹೋದರ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಡಿ.ಆರ್‌ ಪಾಟೀಲ ಅವರ ಪರ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

ಗದುಗಿನ ನರಸಾಪೂರ ಆಶ್ರಯ ಕಾಲೋನಿಯಿಂದ ಆರಂಭವಾದ ರೋಡ್ ಶೋ ನೇಕಾರ ಕಾಲೋನಿ, ನರಸಾಪೂರ, ತೆಂಗಿನಕಾಯಿ ಬಜಾರ್, ಕುರಹಟ್ಟಿ ಪೇಟೆ, ಬೆಟಗೇರಿ ಮೂಲಕ ಸಂಚರಿಸಿತು. ‘ಕಾಂಗ್ರೆಸ್‌ ಗೆಲ್ಲಿಸಿ, ಡಿ.ಆರ್ ಪಾಟೀಲ ಅವರಿಗೆ ಮತ ನೀಡಿ’ ಎಂದು ಎಚ್‌.ಕೆ ಪಾಟೀಲ ಅವರು ಮನವಿ ಮಾಡಿದರು.ಕಾಂಗ್ರೆಸ್‌ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಲಕ್ಕುಂಡಿ;ನರಗುಂದದಲ್ಲಿ ತೇಜಸ್ವಿ ಸೂರ್ಯ ರೋಡ್‌ಶೋ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ ಅವರ ಪರವಾಗಿ, ಬಿಜೆಪಿ ಯುವ ಮುಖಂಡ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಲಕ್ಕುಂಡಿ ಮತ್ತು ನರಗುಂದಲ್ಲಿ ರೋಡ್‌ಶೋ ನಡೆಸಿ ಮತಯಾಚನೆ ಮಾಡಿದರು.

ಭಾನುವಾರ ಮಧ್ಯಾಹ್ನ ಲಕ್ಕುಂಡಿಗೆ ಬಂದ ತೇಜಸ್ವಿ ಸೂರ್ಯ, ಎತ್ತಿನ ಬಂಡಿ ಏರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮತಯಾಚನೆ ಮಾಡಿದರು. ಯುವತಿಯರ ಡೂಳ್ಳು ಕುಣಿತ ಮೆರವಣಿಗೆಗೆ ಮೆರುಗು ತುಂಬಿತು.ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಅವರ ಪರವಾಗಿ ಜಯಘೋಷ ಮೊಳಗಿಸಿದರು.

ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ ಅವರು,‘ಕಾಂಗ್ರೆಸ್‌ 70 ವರ್ಷಗಳಿಂದ ದೇಶ ಆಳಿದರೂ, ಬಡತನ ಹೆಚ್ಚುತ್ತಲೇ ಇದೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ನಂತರ ದೇಶದ ಅಭಿವೃದ್ಧಿಯ ಚಿತ್ರಣ ಬದಲಾಗಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಲಕ್ಕುಂಡಿ ಮತದಾರರೇ ನಿರ್ಣಾಯಕರು. ದಾನಚಿಂತಾಮಣಿ ಅತ್ತಿಮಬ್ಬೆಯ ನಾಡಿನಿಂದ ಮೋದಿಯವರಿಗೆ ಹೆಚ್ಚಿನ ಮತ ಬರಬೇಕು. ಗದ್ದಿಗೌಡರ ಅವರಿಗೆ ಮತ ನೀಡಿ ಗೆಲ್ಲಿಸಿ’ ಎಂದು ಮತಯಾಚನೆ ಮಾಡಿದರು.

ಗಜೇಂದ್ರಗಡದಲ್ಲಿ ಬಂಡಿ ಪಾದಯಾತ್ರೆ

ಗಜೇಂದ್ರಗಡದಲ್ಲಿ ಶಾಸಕ ಕಳಕಪ್ಪ ಬಂಡಿ ಅವರು, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.

‘ಜನ ವಿರೋಧಿ ನೀತಿ ಹಾಗೂ ಕೇವಲ ಅಧಿಕಾರಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ನಾಯಕರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸಿದಂತೆ ಈ ಚುನಾವಣೆಯಲ್ಲಿಯೂ ಜನರು ಪಾಠ ಕಲಿಸಲಿದ್ದಾರೆ’ ಎಂದು ಬಂಡಿ ಹೇಳಿದರು. ಪಟ್ಟಣದ ಜಗಂದಬಾ ದೇವಿ ದೇವಸ್ಥಾನ ಮುಂಭಾಗದಿಂದ ಪಾದಯಾತ್ರೆ ಆರಂಭಗೊಂಡಿತು. ಬಿಜೆಪಿ ಯುವ ಬ್ರೀಗೆಡ್ ಹಾಗೂ ಟಿಮ್ ನಮೋ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರೋಣ ಬಿಜೆಪಿ ಐಟಿ ಘಟಕದ ರಾಜೇಂದ್ರ ಘೋರ್ಪಡೆ ಮಾತನಾಡಿದರು. ‘ಶಿವಕುಮಾರ ಉದಾಸಿ ಅವರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ರಚಿಸುವ ನಿಟ್ಟಿನಲ್ಲಿ ಜನತೆ ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದಾರೆ.ಬಿಜೆಪಿಗೆ ವ್ಯಕ್ತವಾಗುತ್ತಿರುವ ಜನಬೆಂಬಲ ಕಂಡು ಈಗಾಗಲೇ ವಿರೋಧ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ’ ಎಂದರು.

ಅಮರೇಶ ಬಳಿಗೇರ, ಶರಣಪ್ಪ ಚಳಗೇರಿ, ಬಸವರಾಜ ಬಂಕದ, ಶಿದ್ದಣ್ಣ ಬಳಿಗೇರ, ಬಿ.ಎಂ.ಸಜ್ಜನ, ಡಾ.ಬಿ.ವಿ.ಕಂಬಳ್ಯಾಳ, ಕನಕಪ್ಪ ಅರಳಿಗಿಡದ, ರೂಪ್ಲೇಶ ರಾಠೋಡ, ಸುಭಾಸ ಮ್ಯಾಗೇರಿ, ವಿಜಯಾ ಮಳಗಿ, ಸುಜಾತಾ ಶಿಂಗ್ರಿ, ಲಕ್ಷ್ಮಿ ಮುಧೋಳ, ವಿಜಯಲಕ್ಷ್ಮಿ ಚೆಟ್ಟರ, ಕೌಸರಬಾನು ಹುನಗುಂದ, ಚನ್ನು ಸಮಗಂಡಿ, ಸಿದ್ದಪ್ಪ ಚೊಳಿನ, ಮುತ್ತಣ್ಣ ಚೆಟ್ಟರ, ಬಾಳು ಗೌಡರ ಸೇರಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.