ADVERTISEMENT

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಹಿರಿದು: ರಾಜಯೋಗಿನಿ ಜಯಂತಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 6:07 IST
Last Updated 5 ಜುಲೈ 2023, 6:07 IST
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಜಯಂತಿ ಮಾತನಾಡಿದರು
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಜಯಂತಿ ಮಾತನಾಡಿದರು   

ಗದಗ: ‘ಪ್ರಭಾವಶಾಲಿಯಾದ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು.  ಜನರ ಮನವನ್ನು ಕೆರಳಿಸುವ ಬದಲು ಅರಳಿಸುವ ಕಾರ್ಯ ಮಾಡಬೇಕು. ಮಾಧ್ಯಮಕ್ಕೆ ಗೌರವ ಮತ್ತು ಗುರುತರವಾದ ಜವಾಬ್ದಾರಿ ಇದೆ’ ಎಂದು ಗದಗ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಜಯಂತಿ ಹೇಳಿದರು.

ನಗರದ ಸಿದ್ಧರಾಮೇಶ್ವರ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಸಂಸ್ಕೃತಿ ಭವನದಲ್ಲಿ ಏರ್ಪಡಿಸಿದ್ದ ದೈವೀ ಸ್ನೇಹ ಮಿಲನ- ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಒಂದೆಡೆ ಜೀವನಕ್ಕೆ ಬೇಕಾದ ವಸ್ತುಗಳ ಉತ್ಪಾದನೆ; ಮತ್ತೊಂದು ಕಡೆ ಜಗತ್ತನ್ನೇ ಸುಟ್ಟು ಬೂದಿ ಮಾಡಲು ಅಣ್ವಸ್ತ್ರಗಳ ತಯಾರಿಕೆ. ಒಂದು ಕಡೆ ನಿರ್ಮಾಣದ ಸಾಧನಗಳು, ಮತ್ತೊಂದು ಕಡೆ ನಿರ್ನಾಮ ಮಾಡುವ ಸಾಧನಗಳು ವೃದ್ಧಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪತ್ರಿಕೆಯ ಪ್ರಭಾವ ಸಮಾಜದ ಮೇಲೆ, ಸಮಾಜದ ಪ್ರಭಾವ ಪತ್ರಿಕೆಯ ಬರಹದ ಮೇಲೆ ಬೀಳುವುದು ಸಹಜ’ ಎಂದರು.

ADVERTISEMENT

ಮಾಧ್ಯಮ ಪ್ರತಿನಿಧಿಗಳಿಗೆ ಅಧ್ಯಾತ್ಮ ಜಾಗೃತಿಯ 3ಡಿ ಫಿಲ್ಮ್‌, ಸಫಲತಾ ಸಂಪನ್ನ ಜೀವನಕ್ಕೆ ಮೌಲ್ಯಗಳು ಮೆಟ್ಟಿಲಿದ್ದಂತೆ ವಿಷಯವಾಗಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನೀಡಲಾಯಿತು.

ಹಿರಿಯ ಪತ್ರಕರ್ತ ಬಸವರಾಜ ದಂಡಿನ ಮಾತನಾಡಿ, ‘ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷವೂ ಪತ್ರಿಕಾ ದಿನಾಚರಣೆ ಆಚರಿಸುವ ಸಂಪ್ರದಾಯ ಇದೆ. ನಿತ್ಯ ಒತ್ತಡದ ಮಧ್ಯದಲ್ಲಿ ಕಾರ್ಯನಿರ್ವಹಿಸುವ ಪತ್ರಿಕಾ ಮಿತ್ರರಿಗೆ ಇಂತಹ ಆಧ್ಯಾತ್ಮಿಕ ಕೇಂದ್ರಗಳು ಸನ್ಮಾನಿಸಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿ ಧರ್ಮದ ಹಾದಿಯಲ್ಲಿ ನಡೆಯುವಂತೆ ಪ್ರೇರಣೆ ನೀಡುತ್ತಿವೆ’ ಎಂದು ಹೇಳಿದರು.

ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಪಾದಕ ರಾಜು ಹೆಬ್ಬಳ್ಳಿ, ಪತ್ರಕರ್ತರಾದ ವೆಂಕಟೇಶ ಇಮ್ರಾಪೂರ, ಅರುಣ ಹಿರೇಮಠ, ಸುಯಮೀಂದ್ರ ಕುಲಕರ್ಣಿ, ಹಿರಿಯ ಛಾಯಾಗ್ರಾಹಕರಾದ ವಸಂತ ಮಹೇಂದ್ರಕರ, ರಾಮು ವಗ್ಗಿ, ಬನೇಶ ಕುಲಕರ್ಣಿ, ವಿಜಯ ಕಾಗನೂರಮಠ, ಶಂಕರ ಗುರಿಕಾರ, ಗಣೇಶ ದೊಡ್ಡಮನಿ, ಖಾಜೇಸಾಬ ಬೂದಿಹಾಳ, ಸುಭಾಸ ಮಳಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಿ.ಕೆ.ಜಯಶ್ರೀ ಪ್ರಾರ್ಥಿಸಿದರು. ಬಿ.ಕೆ.ರೇಖಾ ಸ್ವಾಗತಿಸಿದರು, ಬಿ.ಕೆ.ಸಾವಿತ್ರಿ ಪರಿಚಯಿಸಿದರು. ಬಿ.ಕೆ.ಮಮತಾ ನಿರೂಪಿಸಿದರು. ಬಿ.ಕೆ.ಜ್ಯೋಸ್ನಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.