ADVERTISEMENT

ರೋಣ: ಮಿಶ್ರ ಬೆಳೆಯಲ್ಲಿ ಯಶಸ್ಸು ಕಂಡ ರೈತ

ಕಡಿಮೆ ಖರ್ಚಿನಲ್ಲಿ ಅಧಿಕ ಲಾಭದ ಕೃಷಿ

ಪ್ರಜಾವಾಣಿ ವಿಶೇಷ
Published 26 ಜುಲೈ 2024, 5:05 IST
Last Updated 26 ಜುಲೈ 2024, 5:05 IST
ವೆಂಕಣ್ಣ ಬಂಗಾರಿಯವರ ಜಮೀನಿನಲ್ಲಿ ಬೆಳೆದ ಪಪ್ಪಾಯ ಮತ್ತು ದಾಳಿಂಬೆಯ ಮಿಶ್ರ ಬೆಳೆ
ವೆಂಕಣ್ಣ ಬಂಗಾರಿಯವರ ಜಮೀನಿನಲ್ಲಿ ಬೆಳೆದ ಪಪ್ಪಾಯ ಮತ್ತು ದಾಳಿಂಬೆಯ ಮಿಶ್ರ ಬೆಳೆ   

ರೋಣ: ನಗರದ ಪ್ರಗತಿಪರ ರೈತ ವೆಂಕಣ್ಣ ಬಂಗಾರಿ ಅವರು ತಮ್ಮ ಸ್ವಂತ 10 ಎಕರೆ ಜಮೀನಿನಲ್ಲಿ ಪಪ್ಪಾಯ ಮತ್ತು ದಾಳಿಂಬೆ ಮಿಶ್ರ ಬೆಳೆ ಬೆಳೆದು ಕೃಷಿಯನ್ನು ಲಾಭದಾಯಕವಾಗಿಸಿದ್ದು, ಯುವ ರೈತರಿಗೆ ಮಾದರಿಯಾಗಿದ್ದಾರೆ.

14 ಅಡಿಗೆ ಒಂದರಂತೆ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ ಐದು ಅಡಿ ಅಂತರದಲ್ಲಿ  ಪಪ್ಪಾಯ ಗಿಡ ನೆಟ್ಟಿದ್ದಾರೆ. ಅದರ ಮಧ್ಯೆ ಮಿಶ್ರ ಬೆಳೆ ಬೆಳೆಯುವ ಪೂರ್ವ ನಿಯೋಜಿತ ಯೋಜನೆ ಮಾಡಿದ್ದರು. ಸಾವಯವ ಗೊಬ್ಬರ ಮತ್ತು ಹನಿ ನೀರಾವರಿಯ ಮೂಲಕ ಕಡಿಮೆ ಖರ್ಚಿನಲ್ಲಿ ಸಮೃದ್ಧ ಮಿಶ್ರ ಬೆಳೆ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಪಪ್ಪಾಯ ಬೆಳೆ ಬೆಳೆಯಲು ಪ್ರತಿ ಎಕರೆಗೆ ಸುಮಾರು ₹3 ಲಕ್ಷ ಖರ್ಚು ಮಾಡಿದ್ದು, ಮೊದಲ ಫಸಲಿಗೆ ಪ್ರತಿ ಎಕೆರೆಗೆ ₹2 ಲಕ್ಷ ಆದಾಯ ಪಡೆದಿದ್ದಾರೆ. ಸದ್ಯ ಬೆಲೆ ಕುಸಿತದ ಕಾರಣದಿಂದ ಮಾರಾಟದ ಲಾಭದಲ್ಲಿ ಅಲ್ಪ ಹಿನ್ನೆಡೆಯಾಗಿದೆ. ಭವಿಷ್ಯದಲ್ಲಿ ಹೆಚ್ಚು ಲಾಭದ ನಿರೀಕ್ಷೆಯನ್ನು ವೆಂಕಣ್ಣ ಅವರು ಹೊಂದಿದ್ದಾರೆ.

ADVERTISEMENT

ಪಪ್ಪಾಯಿ ಮಾರಾಟಕ್ಕೆ ಸಮೀಪದಲ್ಲಿ ಎಲ್ಲಿಯೂ ಮಾರುಕಟ್ಟೆಯಿಲ್ಲ. ಹಣ್ಣಿನ ಮಾರಾಟಕ್ಕೆ ದೂರದ ಮುಂಬೈಯ ಮಾರುಕಟ್ಟೆಯೆ ಆಧಾರವಾಗಿದೆ. ಅಲ್ಲಿನ ವರ್ತಕರೆ ನೇರವಾಗಿ ತೋಟಕ್ಕೆ ಬಂದು ಖರೀದಿ ಮಾಡುತ್ತಿದ್ದು ಸಾಗಾಟದ ವೆಚ್ಚ ಕೂಡ ರೈತರಿಗೆ ಉಳಿತಾಯವಾಗುತ್ತಿದ್ದು ಲಾಭದ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

ಪಪ್ಪಾಯಿ ಜೊತೆಗೆ 10 ಎಕರೆ ಪ್ರದೇಶದಲ್ಲಿ ಮಿಶ್ರ ಬೆಳೆಯಾಗಿ ಜೈನ್ ಕಂಪನಿಯ ವಿಶೇಷ ತಳಿಯ 3400 ದಾಳಿಂಬೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ದಾಳಿಂಬೆ ಹಣ್ಣಿಗೆ ಬೇಡಿಕೆ ಮತ್ತು ಬೆಲೆ ಉತ್ತಮವಾಗಿರುವುದರಿಂದ ಅಧಿಕ ಲಾಭ ಪಡೆಯಬಹುದಾಗಿದೆ.

ಸರ್ಕಾರದ ಸಹಾಯಧನದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡಿರುವ ಇವರು ಕೊಳವೆ ಬಾವಿಯ ಮೇಲಿನ ಅವಲಂಬನೆ ಕಡಿಮೆ ಮಾಡಿದ್ದಾರೆ. ಇದರ ಜೊತೆಗೆ ಪಾಳು ಬಿದ್ದಿದ್ದ ತೆರೆದ ಬಾವಿಗೆ ಕೊಳವೆ ಬಾವಿಯ ನೀರು ಹಾಯಿಸಿ ಅದರ ಗಡಸು ನಿಯಂತ್ರಣ ಮಾಡಿ ಬಳಕೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೃಷಿಹೊಂಡದ ನೀರನ್ನು ಬೇಸಿಗೆಯಲ್ಲಿ ಕೊಳವೆ ಬಾವಿಯ ನೀರನ್ನು ದಕ್ಷತೆಯಿಂದ ಬಳಸಿಕೊಳ್ಳುವ ಮೂಲಕ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ.

‘ತೋಟಗಾರಿಕೆ ಬೆಳೆಯನ್ನು ಮಿಶ್ರ ಪದ್ಧತಿಯಲ್ಲಿ ಬೆಳೆಯುವ ಮೂಲಕ ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬಹುದು. ಯುವ ರೈತರು ಸಾಂಪ್ರದಾಯಿಕ ಕೃಷಿಯ ಜೊತೆಗೆ ಈ ತರಹದ ವಿನೂತನ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು’ ಎನ್ನುತ್ತಾರೆ ರೈತ ವೆಂಕಣ್ಣ ಬಂಗಾರಿ ಅವರು.

ತೋಟದಲ್ಲಿ ಬೆಳೆದ ಪಪ್ಪಾಯ ಗಿಡಗಳೊಂದಿಗೆ ರೈತ ವೆಂಕಣ್ಣ ಬಂಗಾರಿ

ಸರ್ಕಾರಗಳು ತೋಟಗಾರಿಕೆ ಬೆಳೆಗಳಿಗೆ ಅವಶ್ಯಕವಾದ ಕೀಟನಾಶಕಗಳು ಮತ್ತು ಮಾರುಕಟ್ಟೆಯನ್ನು ಸಮೀಪದಲ್ಲಿ ಲಭ್ಯವಾಗುವಂತೆ ಮಾಡಿ ರೈತರಿಗೆ ಪ್ರೋತ್ಸಾಹಿಸಬೇಕಿದೆ

- ವೆಂಕಣ್ಣ ಬಂಗಾರಿ, ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.