ADVERTISEMENT

ರೋಣ: ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಕುಡಿಯುವ ನೀರಿಗೆ ಚಾಲಕ, ನಿರ್ವಾಹಕರ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಮೇ 2024, 6:02 IST
Last Updated 17 ಮೇ 2024, 6:02 IST
ರೋಣ ಪಟ್ಟಣದ ಕೆಎಸ್‌ಆರ್‌ಟಿಸಿ ಘಟಕದ ಒಳಗಿರುವ ಶುದ್ಧ ಕುಡಿಯುವ ನೀರಿನ ಘಟಕ ನೀರಿನ ಸಂಪರ್ಕವಿಲ್ಲದೆ ಪಾಳು ಬಿದ್ದಿದೆ
ರೋಣ ಪಟ್ಟಣದ ಕೆಎಸ್‌ಆರ್‌ಟಿಸಿ ಘಟಕದ ಒಳಗಿರುವ ಶುದ್ಧ ಕುಡಿಯುವ ನೀರಿನ ಘಟಕ ನೀರಿನ ಸಂಪರ್ಕವಿಲ್ಲದೆ ಪಾಳು ಬಿದ್ದಿದೆ   

ರೋಣ: ಪಟ್ಟಣದಲ್ಲಿನ ಕೆ.ಎಸ್.ಆರ್.ಟಿ.ಸಿ ಘಟಕವು (ಬಸ್ ಡಿಪೊ) ಗದಗ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಏಳೆಂಟು ವರ್ಷಗಳು ಕಳೆಯುತ್ತಾ ಬಂದರೂ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೇ ಸಿಬ್ಬಂದಿ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಬಸ್ ಡಿಪೊ ರೋಣ ಪಟ್ಟಣದಿಂದ ಮೂರ್ನಾಲ್ಕು ಕಿ.ಮೀ ದೂರದಲ್ಲಿದ್ದು ಸಿಬ್ಬಂದಿ ದಿನನಿತ್ಯ ಕುಡಿಯುವ ನೀರಿಗಾಗಿ ರೋಣ ಪಟ್ಟಣಕ್ಕೆ ಬಂದು ಹೋಗಬೇಕಾದ ಸ್ಥಿತಿ ಇದೆ. ಇಲ್ಲವೇ ಪ್ರತಿನಿತ್ಯ 20ರಿಂದ 30 ನೀರಿನ ಕ್ಯಾನ್‌ಗಳನ್ನು ಹೊತ್ತುಕೊಂಡು ಹೋಗುವಂತಾಗಿದೆ. ಘಟಕದಲ್ಲಿ ಆರು ಕೊಳವೆಬಾವಿಗಳನ್ನು ಕೊರೆಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಒಂದರಲ್ಲಿಯೂ ಹನಿ ನೀರು ಬರುತ್ತಿಲ್ಲ. 500 ಮಂದಿ ಸಿಬ್ಬಂದಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು ದಿನನಿತ್ಯ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಘಟಕದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ್ದರೂ ನೀರು ಪೂರೈಕೆ ಇಲ್ಲದೆ ಪಾಳುಬಿದ್ದಿದೆ. ಬಸ್ ಸ್ವಚ್ಛಗೊಳಿಸವುದು ಸೇರಿದಂತೆ ಇತರೆ ಕಾರ್ಯಗಳಿಗೂ ಸಹ ಟ್ಯಾಂಕರ್‌ನಿಂದ ನೀರು ತರಿಸಿಕೊಳ್ಳುವಂತ ಸ್ಥಿತಿ ನಿರ್ಮಾಣಗೊಂಡಿದೆ.

ADVERTISEMENT

ಬಸ್ ಡಿಪೊ ಹೊರವಲಯದಲ್ಲಿ ಇರುವುದರಿಂದ ಯಾವುದೇ ನೀರಿನ ಮೂಲಗಳು ದೊರೆಯುತ್ತಿಲ್ಲ. ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳು ಹಲವು ಬಾರಿ ಸ್ಥಳೀಯ ಶಾಸಕರಿಗೆ, ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಇಲ್ಲಿನ ಸಿಬ್ಬಂದಿ ಮನವಿ ಮಾಡಿದ್ದಾರೆ.

ಸ್ವಯಂ ಚಾಲಿತ ಬಸ್ ತೊಳೆಯುವ ಯಂತ್ರಕ್ಕೆ ಹೊರಗಿನಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ

Quote - ರೋಣ ಬಸ್ ಡಿಪೋದಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೇ ನಾವು ಪರದಾಡುತ್ತಿದ್ದೇವೆ. ನಾಲ್ಕೈದು ಕಿ.ಮೀ. ದೂರದಿಂದ ನೀರು ತರಬೇಕಾದ ದುಃಸ್ಥಿತಿ ಇದೆ. ಕೂಡಲೇ ಜನಪ್ರತಿನಿಧಿಗಳು ಅಧಿಕಾರಿಗಳು ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬೇಕು –ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ

Cut-off box - ರೋಣ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಪ್ರಾರಂಭ: ರೋಣ ಪಟ್ಟಣ ಬಸ್ ನಿಲ್ದಾಣದ ಹಿಂಭಾಗದಲ್ಲಿ ಹಳೆಯ ಡಿಪೊ ಜಾಗೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಪ್ರಾರಂಭ ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಘಟಕದ ವ್ಯವಸ್ಥಾಪಕ ಅರವಿಂದ ಭಜಂತ್ರಿ ತಿಳಿಸಿದರು. ಕಳೆದ ಹಲವು ದಿನಗಳಿಂದ ಬೈಕ್ ಕಳ್ಳತನ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಸಾರ್ವಜನಿಕರ ವಾಹನಗಳ ಸುರಕ್ಷತೆಗಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಪ್ರಾರಂಭ ಮಾಡಲಾಗಿದೆ. ದ್ವಿಚಕ್ರ ವಾಹನಗಳಿಗೆ ₹10 ಹಾಗೂ ಕಾರುಗಳಿಗೆ ₹20 ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸಲಾಗಿದ್ದು ಸಾರ್ವಜನಿಕರು ತಮ್ಮ ವಾಹನಗಳನ್ನು ಸುರಕ್ಷತವಾಗಿರಿಸಲು ಪಾರ್ಕಿಂಗ್ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.