ADVERTISEMENT

ರೋಣ | ಮುಂಗಾರು ಪೂರ್ವ ಮಳೆ: ಬಿತ್ತನೆಗೆ ಭರದ ಸಿದ್ಧತೆ

ಭರವಸೆ ಮೂಡಿಸುತ್ತಿರುವ ಮುಂಗಾರು ಪೂರ್ವ ಮಳೆ

ಪ್ರಜಾವಾಣಿ ವಿಶೇಷ
Published 29 ಮೇ 2024, 4:47 IST
Last Updated 29 ಮೇ 2024, 4:47 IST
ರೋಣ ಭಾಗದಲ್ಲಿ ಬಿತ್ತನೆಗೆ ಭೂಮಿ ಹದಗೊಳಿಸುತ್ತಿರುವ ರೈತ
ರೋಣ ಭಾಗದಲ್ಲಿ ಬಿತ್ತನೆಗೆ ಭೂಮಿ ಹದಗೊಳಿಸುತ್ತಿರುವ ರೈತ   

ರೋಣ: ಇತ್ತಿಚೆಗೆ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ರೈತಾಪಿ ವರ್ಗದಲ್ಲಿ ಭರವಸೆ ಮೂಡಿಸಿದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಹೊಲಗಳನ್ನು ಹದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. 

ಕಳೆದ ಬಾರಿ ತಾಲ್ಲೂಕಿನಾದ್ಯಂತ ಮುಂಗಾರು ವೈಫಲ್ಯದಿಂದಾಗಿ ಪ್ರಮುಖ ಆಹಾರ ಬೆಳೆಗಳಾದ ಹೆಸರು, ಮೆಕ್ಕೆಜೋಳ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗದೆ ರೈತರನ್ನು ಕಂಗಾಲಾಗುವಂತೆ ಮಾಡಿತ್ತು. ಕಳೆದ ಬಾರಿಯ ಹಿಂಗಾರು ಕೂಡ ಭಾಗಶಃ ಕೈಕೊಟ್ಟ ಕಾರಣ ರೈತರನ್ನು ಸಾಲದ ಕೂಪಕ್ಕೆ ದೂಡಿತ್ತು.

ಪ್ರಮುಖವಾಗಿ ಕೃಷಿ ಚಟುವಟಿಕೆಗಳಿಗೆ ಡಿಸೇಲ್ ದರ ವ್ಯಾಪಕ ಹೊಡೆತ ನೀಡಿದ್ದು, ಯಂತ್ರಗಳ ಬಾಡಿಗೆ ದುಪ್ಪಟ್ಟಾಗುವಂತೆ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಡೀಸೆಲ್ ಬೆಲೆ ಏರಿಕೆಯ ಹೊರೆ ತಪ್ಪಿಸಲು ನೀಡಿದ್ದ ರೈತ ಶಕ್ತಿ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರ ಕೈಬಿಟ್ಟ ಪರಿಣಾಮ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಇವುಗಳ ಮಧ್ಯೆ ನಿರಂತರವಾಗಿ ಕುಸಿಯುತ್ತಿರುವ ಬೆಲೆಗಳು, ಸ್ಥಳೀಯವಾಗಿ ವಹಿವಾಟು ನಡೆಸದ ಎಪಿಎಂಸಿಗಳು, ಸಮರ್ಪಕವಾಗಿ ವಿತರಣೆಯಾಗದ ಬರ ಪರಿಹಾರ, ಆಳುಗಳ ಕೊರತೆ ತಾಲ್ಲೂಕಿನ ಕೃಷಿ ಕ್ಷೇತ್ರವನ್ನು ಬಾಧಿಸುತ್ತಿದೆ.

ADVERTISEMENT

ಕಳೆದ ಬಾರಿ ಬರದ ಮಧ್ಯೆಯೂ ಅಲ್ಪಸ್ವಲ್ಪ ಬೆಳೆದ ಈರುಳ್ಳಿ, ಮೆಣಸಿನಕಾಯಿ ಬೆಳೆಯೂ ನಿರಂತರವಾಗಿ ಬೆಲೆ ಕುಸಿತ ಅನುಭವಿಸಿದ್ದು, ತಾಲ್ಲೂಕಿನ ಕೃಷಿಕರಿಗೆ ವ್ಯಾಪಕ ಹಾನಿಯುಂಟು ಮಾಡಿತ್ತು. ಕೃಷಿಯ ಬಗ್ಗೆ ರೈತರಲ್ಲಿಯೇ ಬೇಸರ ಮೂಡುವಂತೆ ಮಾಡಿದ ಪರಿಣಾಮ, ಈ ಬಾರಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಯ ಕ್ಷೇತ್ರದಲ್ಲಿ ಶೇ 20 ಕಡಿಮೆಯಾಗಿದೆ. ಇವುಗಳ ಮಧ್ಯೆ ತಾಲ್ಲೂಕಿಗೆ ಲಗ್ಗೆ ಇಟ್ಟಿರುವ ಪವನ ವಿದ್ಯುತ್ ಮತ್ತು ಸೌರ ವಿದ್ಯುತ್ ಕಂಪನಿಗಳಿಗೆ ರೈತರು ಜಮೀನು ಮಾರಾಟ ಮಾಡಲು ಮುಂದಾಗುತ್ತಿರುವುದು ತಾಲ್ಲೂಕಿನ ಕೃಷಿ ಕ್ಷೇತ್ರದ ಉಳಿವಿಗೆ ಸವಾಲಾಗಿ ಪರಿಣಮಿಸುತ್ತಿದೆ.

ಇವುಗಳ ಮಧ್ಯೆ ಸದ್ಯ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಮತ್ತು ಹವಾಮಾನ ಇಲಾಖೆಯಿಂದ ಹೊರಬರುತ್ತಿರುವ ಮಾಹಿತಿಗಳು ರೈತಾಪಿ ವರ್ಗದಲ್ಲಿ ಕೊಂಚ ಭರವಸೆ ಮೂಡಿಸುತ್ತಿದ್ದು, ಮುಂಗಾರು ಬಿತ್ತನೆಗೆ ಭರದ ತಯಾರಿ ಶುರುವಾಗಿದೆ.

‘ರೈತರಿಗೆ ಸಮರ್ಪಕ ಮಾರುಕಟ್ಟೆಗಳು ಸ್ಥಳೀಯವಾಗಿ ಲಭ್ಯವಾಗಬೇಕು. ಕನಿಷ್ಠ ಬೆಂಬಲ ಬೆಲೆ ರೈತರ ಮೂಲಭೂತ ಹಕ್ಕಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು. ಎಂಎಸ್‌ಪಿ ಕಾಯ್ದೆ ಉಲ್ಲಂಘಿಸುವ ದಲ್ಲಾಳಿ ಮತ್ತು ಖರೀದಿದಾರರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಲು ಅವಕಾಶ ನೀಡಬೇಕು. ಅಂದಾಗ ಮಾತ್ರ ಕೃಷಿ ಕ್ಷೇತ್ರ ಉಳಿಯಲು ಸಾಧ್ಯ’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ರೋಣ ತಾಲ್ಲೂಕ ಘಟಕದ ಕಾರ್ಯದರ್ಶಿ ದೊಡ್ಡಬಸಪ್ಪ ನವಲಗುಂದ.

ಟ್ರ್ಯಾಕ್ಟರ್ ಮೂಲಕ ಹೆಸರುಕಾಳು ಬಿತ್ತನೆ ಮಾಡುತಿರುವ ರೈತ

ಬರ ಪರಿಹಾರ ಬೆಳೆ ವಿಮೆಗೆ ಸಂಬಂಧಿಸಿದಂತೆ ರೋಣ ತಾಲ್ಲೂಕಿನ ಹಲವು ರೈತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಈ ಸಂಬಂಧ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ

-ಅರ್ಜುನ್ ಕೊಪ್ಪಳ ರೈತ ರೋಣ

ಡಿಸೇಲ್ ದರದಲ್ಲಿ ಆದ ಏರಿಕೆ ರೈತಾಪಿ ವರ್ಗವನ್ನು ಬಾಧಿಸುತ್ತಿದ್ದು ಸದ್ಯ ಬಹುತೇಕ ಕೃಷಿ ಚಟುವಟಿಕೆಗಳು ಯಂತ್ರ ಆಧಾರಿತವಾಗಿರುವುದರಿಂದ ಮೀನುಗಾರರಿಗೆ ಒದಗಿಸಿದಂತೆ ರಾಜ್ಯ ಸರ್ಕಾರ ರೈತರಿಗೆ ಪಡಿತರ ವ್ಯವಸ್ಥೆಯ ಮಾದರಿಯಲ್ಲಿ ಸಬ್ಸಿಡಿ ದರದಲ್ಲಿ ಡಿಸೇಲ್ ವಿತರಿಸಬೇಕು

- ಅಬ್ದುಲ್ ಸಾಬ್ ಹೊಸಮನಿ ಸಾಮಾಜಿಕ ಕಾರ್ಯಕರ್ತ ರೋಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.