ADVERTISEMENT

ಮುಳಗುಂದ: ₹18.74 ಲಕ್ಷ ಉಳಿತಾಯ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 15:44 IST
Last Updated 7 ಮಾರ್ಚ್ 2024, 15:44 IST
ಮುಳಗುಂದ ಪಟ್ಟಣ ಪಂಚಾಯ್ತಿ ಸದಸ್ಯರು 2024-25ನೇ ಸಾಲಿನ ಆಯವ್ಯಯ ಮಂಡನೆ ಪತ್ರಿಕೆ ಪ್ರದರ್ಶಿಸಿದರು
ಮುಳಗುಂದ ಪಟ್ಟಣ ಪಂಚಾಯ್ತಿ ಸದಸ್ಯರು 2024-25ನೇ ಸಾಲಿನ ಆಯವ್ಯಯ ಮಂಡನೆ ಪತ್ರಿಕೆ ಪ್ರದರ್ಶಿಸಿದರು   

ಮುಳಗುಂದ: ‘ಪಟ್ಟಣದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ಅನುಸಾರವಾಗಿ ಮೂಲಸೌಲಭ್ಯ ಒದಗಿಸುವ ಸಲುವಾಗಿ 2024-25ನೇ ಸಾಲಿನಲ್ಲಿ ಅಂದಾಜು ₹10.14 ಲಕ್ಷ ವೆಚ್ಚ ಹಾಗೂ ₹10.33 ಲಕ್ಷ ಸಂಗ್ರಹ ಗುರಿ ಇಟ್ಟುಕೊಳ್ಳಲಾಗಿದ್ದು, ಒಟ್ಟು ₹18.74 ಲಕ್ಷ ಉಳಿತಾಯ ಆಯುವ್ಯಯ ಮಂಡಿಸಲಾಗಿದೆ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಎಲ್.ಕರೇಗೌಡ್ರ ಹೇಳಿದರು.

ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ನಡೆದ ಪಟ್ಟಣ ಪಂಚಾಯ್ತಿಯ 2024-25ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಾಹಿತಿ ಬಿ.ಎಂ.ಹರಪನಹಳ್ಳಿ ಮಾತನಾಡಿ, ‘ಬೇಸಿಗೆ ಆರಂಭವಾಗಿದ್ದು, ಸಮಪರ್ಕ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛಗೆ ಹೆಚ್ಚಿನ ಆದ್ಯತೆ ನೀಡಬೇಕು. ಸೊಳ್ಳೆ ನಾಶಕ ಸಿಂಪಡಣೆಗೆ ಕ್ರಮಕೈಗೊಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ತುಂಗಭದ್ರಾ ನದಿ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲು ಪಟ್ಟಣ ಪಂಚಾಯ್ತಿ ಕ್ರಮ ಕೈಗೊಳ್ಳಬೇಕು. ಉದ್ಯಾನವನಗಳ ನಿರ್ವಹಣೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಮಾತನಾಡಿ, ‘ತುಂಗಭದ್ರಾ ನದಿ ನೀರು ಪೂರೈಕೆ ಸ್ಥಗಿತವಾದ ಬಳಿಕ ನಿರ್ವಹಣೆ ಇಲ್ಲದೆ ಯಂತ್ರಗಳು ಹಾಳಾಗಿವೆ. ಶಿರಹಟ್ಟಿ ಬೆಳ್ಳಟ್ಟಿ ನಡುವೆ ರಸ್ತೆ ಕಾಮಗಾರಿ ವೇಳೆ ಪೈಪ್‍ಗಳು ಒಡದಿವೆ. ದುರಸ್ತಿ ಕೆಲಸಕ್ಕೆ ಅಮೃತ 2.0ಯೋಜನೆ ಅಡಿಯಲ್ಲಿ ಅಂದಾಜು ₹25 ಕೋಟಿ ಬಿಡುಗಡೆಯಾಗಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ದುರಸ್ತಿಗೊಳಿಸಿ ಶಿರಹಟ್ಟಿ ಹಾಗೂ ಮುಳಗುಂದ ಪಟ್ಟಣ ಪಂಚಾಯ್ತಿಗೆ ಹಸ್ತಾಂತರಿಸಲಾಗುವುದು. ನದಿ ನೀರು ಸರಬರಾಜು ನಿರ್ವಹಣೆಗೆ ಬಜೆಟ್‍ನಲ್ಲಿ ₹50 ಲಕ್ಷ ಮೀಸಲಿಡಲಾಗಿದೆ’ ಎಂದು ವಿವರಿಸಿದರು.

ರೇಖಾ ಹೊಸಮನಿ 2024-25ನೇ ಸಾಲಿನ ಖರ್ಚು ವೆಚ್ಚದ ಲೆಕ್ಕದ ಬಜೆಟ್ ಪತ್ರಿಕೆ ಓದಿದರು. ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ನೀಲಗುಂದ, ಸದಸ್ಯರಾದ ಎನ್.ಆರ್.ದೇಶಪಾಂಡೆ, ವಿಜಯ ನೀಲಗುಂದ, ಇಮಾಮಸಾಬ ಶೇಖ, ಮಹಾದೇವಪ್ಪ ಗಡಾದ, ಬಸವರಾಜ ಹಾರೋಗೇರಿ, ನೀಲವ್ವ ಅಸುಂಡಿ, ಉಮಾ ಮಟ್ಟಿ, ಹೊನ್ನಪ್ಪ ಹಳ್ಳಿ, ಚಂಪಾವತಿ ಗುಳೇದ, ಸಮುದಾಯ ಯೋಜನಾಧಿಕಾರಿ ವಾಣಿಶ್ರೀ ನಿರಂಜ, ಸಿಬ್ಬಂದಿ ಶಂಭು ಚವ್ಹಾಣ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.