ADVERTISEMENT

ಉಕ್ರೇನ್ ಗಡಿ ದಾಟಲು ಭಾರತೀಯ ವಿದ್ಯಾರ್ಥಿಗಳ ಹರಸಾಹಸ

ಕಾಶಿನಾಥ ಬಿಳಿಮಗ್ಗದ
Published 26 ಫೆಬ್ರುವರಿ 2022, 14:31 IST
Last Updated 26 ಫೆಬ್ರುವರಿ 2022, 14:31 IST
ಉಕ್ರೇನ್– ರುಮೇನಿಯಾ ಗಡಿಭಾಗದಲ್ಲಿ ಭಾರತಕ್ಕೆ ಮರಳುವ ಆತುರದಲ್ಲಿರುವ ಭಾರತೀಯ ವಿದ್ಯಾರ್ಥಿಗಳು
ಉಕ್ರೇನ್– ರುಮೇನಿಯಾ ಗಡಿಭಾಗದಲ್ಲಿ ಭಾರತಕ್ಕೆ ಮರಳುವ ಆತುರದಲ್ಲಿರುವ ಭಾರತೀಯ ವಿದ್ಯಾರ್ಥಿಗಳು   

ಮುಂಡರಗಿ (ಗದಗ ಜಿಲ್ಲೆ): ಉಕ್ರೇನ್ ಹಾಗೂ ರಷ್ಯಾ ಯುದ್ಧದ ಕಾರಣದಿಂದ ಉಕ್ರೇನ್ ತೊರೆದು ತಾಯ್ನಾಡಿಗೆ ಮರಳುತ್ತಿರುವ ವಿದ್ಯಾರ್ಥಿಗಳು ಹಲವು ತೊಂದರೆಗಳನ್ನು ಎದುರಿಸಬೇಕಾಗಿದೆ. ಉಕ್ರೇನ್ ದೇಶದ ಯುರೋಪ್ ಗಡಿಗೆ ಹೊಂದಿಕೊಂಡಿರುವ ರುಮೇನಿಯಾ, ಹಂಗೇರಿ, ಪೋಲೆಂಡ್ ಮೊದಲಾದ ದೇಶಗಳ ಮೂಲಕ ಭಾರತೀಯರನ್ನು ಕರೆತರಲಾಗುತ್ತಿದೆ.

ಉಕ್ರೇನ್‌ನ ಚರ್ನಿವಿಸ್ಸಿ ಪಟ್ಟಣದ ಬೊಕೋವಿನಿಯನ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಅಧ್ಯಯನ ಮಾಡುತ್ತಿರುವ ಮುಂಡರಗಿ ಪಟ್ಟಣದ ಮಹಾಗಣಪತಿ ಬಿಳಿಮಗ್ಗದ ಹಾಗೂ ಅವರೊಂದಿಗೆ ನೂರಾರು ವಿದ್ಯಾರ್ಥಿಗಳು ಶನಿವಾರ ಸಂಜೆ (ಭಾರತೀಯ ಕಾಲಮಾನ) ಉಕ್ರೇನ್‌ ತೊರೆದು ಭಾರತಕ್ಕೆ ಬರುತ್ತಲಿದ್ದಾರೆ.

ಉಕ್ರೇನ್ ದೇಶದ ಗಡಿಯಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ರುಮೇನಿಯಾ ದೇಶದ ಗಡಿಭಾಗಕ್ಕೆ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಕರೆತರಲಾಯಿತು. ರುಮೇನಿಯಾ ಗಡಿ ತಲುಪುತ್ತಿದ್ದಂತೆಯೇ ರುಮೇನಿಯಾ ಅಧಿಕಾರಿಗಳು ವಿದ್ಯಾರ್ಥಿಗಳ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ದಾಖಲೆ ಪರಿಶೀಲನೆಯು ತುಂಬಾ ಸುದೀರ್ಘವಾಗಿ ನಡೆದದ್ದರಿಂದ ಎಲ್ಲ ವಿದ್ಯಾರ್ಥಿಗಳು ಸುಮಾರು ಐದು ಗಂಟೆಗಳ ಕಾಲ ಬಸ್‌ನಲ್ಲಿಯೇ ಕಾಲಕಳೆಯಬೇಕಾಯಿತು.

ADVERTISEMENT

ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರ ಜೊತೆಗೆ ರಷ್ಯಾ ಯುದ್ಧ ಭೀತಿಯಿಂದ ಉಕ್ರೇನಿಯನ್ನರೂ ದೇಶ ತೊರೆಯುತ್ತಿದ್ದಾರೆ. ಹೀಗಾಗಿ ಉಕ್ರೇನ್‌ ದೇಶದ ಗಡಿಭಾಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಭಾರಿ ಸಂಚಾರದ ಒತ್ತಡಕ್ಕೆ ಸಿಲುಕಿವೆ. ಅಧಿಕಾರಿಗಳು ವಾಹನ ಸಂಚಾರ ನಿಯಂತ್ರಿಸಲು ಪರದಾಡುತ್ತಲಿದ್ದಾರೆ. ರಸ್ತೆಯ ಬದಿಯ ಎಲ್ಲ ಪೆಟ್ರೊಲ್ ಬಂಕ್, ಹೋಟೆಲ್ ಮೊದಲಾದವುಗಳು ಜನ ಹಾಗೂ ವಾಹನಗಳಿಂದ ಭರ್ತಿಯಾಗಿವೆ ಎಂದು ಭಾರತಕ್ಕೆ ಮರಳುತ್ತಿರುವ ವಿದ್ಯಾರ್ಥಿ ಮಹಾಗಣಪತಿ ಬಿಳಿಮಗ್ಗದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಎಲ್ಲ ವಿದ್ಯಾರ್ಥಿಗಳು ಶುಕ್ರವಾರ ಸಂಜೆ ರುಮೇನಿಯಾ ರಾಜಧಾನಿ ತಲುಪಿದ್ದು, ಅಲ್ಲಿಂದ ಭಾರತಕ್ಕೆ ಬರಲಿದ್ದಾರೆ. ಕೇಂದ್ರ ಸರ್ಕಾರವು ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಎರಡು ಪ್ರತ್ಯೇಕ ವಿಮಾನಗಳನ್ನು ಮೀಸಲಿರಿಸಿದೆ ಎಂಬುದು ತಿಳಿದುಬಂದಿದೆ ಎಂದು ಹೇಳಿದರು.

ಇನ್ನೊಂದೆಡೆ ರಷ್ಯಾ ಗಡಿಭಾಗಕ್ಕೆ ತಾಗಿಕೊಂಡಿರುವ ಖಾರ್ಕೀವ್ ಹಾಗೂ ಮತ್ತಿತರ ಭಾಗಗಳಲ್ಲಿ ವಾಸವಾಗಿರುವ ಭಾರತೀಯರು ಹಾಗೂ ಭಾರತೀಯ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಯುದ್ಧದ ವಾತಾವರಣ ಇನ್ನೂ ಮುಂದುವರಿದಿದ್ದು, ಉಕ್ರೇನ್ ನಾಗರಿಕರೂ ಸೇರಿದಂತೆ ಎಲ್ಲ ಜನರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ಸಮೀಪದ ಬಂಕರ್, ಮೆಟ್ರೋಗಳಲ್ಲಿ ರಕ್ಷಣೆ ಪಡೆದುಕೊಂಡಿದ್ದಾರೆ. ಊಟ, ಉಪಾಹಾರ ಹಾಗೂ ಮತ್ತಿತರ ಕಾರಣಗಳಿಗೆ ಮೆಟ್ರೋದಿಂದ ಹೊರಬರಲು ಹಿಂಜರಿಯುವಂತಾಗಿದೆ. ಯುದ್ಧವು ಇನ್ನೂ ಮುಂದುವರಿದಿದ್ದು, ಯಾವ ಕ್ಷಣದಲ್ಲಿ ಏನಾಗುತ್ತದೆಯೊ ಎಂದು ಅಲ್ಲಿಯ ವಿದ್ಯಾರ್ಥಿ ಮುಂಡರಗಿಯವರಾದ ಅರುಣಕುಮಾರ ಉಮಚಗಿ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.